ಅಪಕೀರ್ತಿ ಸಾಲದೇ? ನಮ್ಮ ಬೆಂಗಳೂರಿಗೆ ಇಂಥ ಅಪಕೀರ್ತಿ ಬರಬಾರದಿತ್ತು. ಅನುಕರಣೀಯ ಕೆಲಸ ಕಾರ್ಯಗಳು, ಉತ್ತಮ ನಾಗರಿಕ ಸೌಲಭ್ಯ ಕಲ್ಪಿಸುವ ಮೂಲಕ ಅಂತರರಾಷ್ಟ್ರೀಯ ರಂಗದಲ್ಲಿ ಹೆಸರು ಗಳಿಸಬೇಕಾಗಿದ್ದ ಈ ಮಹಾನಗರಕ್ಕೆ ಈಗ `ವಿಶ್ವದ ಮಲಿನ ನಗರಗಳಲ್ಲಿ ಒಂದು' ಎಂಬ ಅಪಖ್ಯಾತಿ ಅಂಟಿಕೊಂಡದ್ದು ತಲೆತಗ್ಗಿಸಬೇಕಾದ ಸಂಗತಿ. ವಾಯು ಮಾಲಿನ್ಯ ಅಧ್ಯಯನ ನಡೆಸುವುದಕ್ಕಾಗಿಯೇ ಅಮೆರಿಕದ `ನಾಸಾ' ಉಡಾವಣೆ ಮಾಡಿದ್ದ ಮೂರು ಉಪಗ್ರಹಗಳಿಂದ ದೊರೆತ ಮಾಹಿತಿಯನ್ನು ಇಸ್ರೇಲ್ ವಿಜ್ಞಾನಿಗಳು ವಿಶ್ಲೇಷಿಸಿದಾಗ ಮಾಲಿನ್ಯ ಹೆಚ್ಚಳದಲ್ಲಿ ನಮ್ಮ ಬೆಂಗಳೂರು ವಿಶ್ವದ ಅನೇಕ ನಗರಗಳ ಜತೆ ಪೈಪೋಟಿಗೆ ಇಳಿದಿದೆ ಎಂಬುದು ಬೆಳಕಿಗೆ ಬಂದಿದೆ. ಜಾಗತಿಕ ಮಟ್ಟದ ಪ್ರತಿಷ್ಠಿತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಕೇಂದ್ರಗಳು, ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳಿಂದಾಗಿ ಆಕರ್ಷಣೆಯ ಜತೆಜತೆಗೆ ದೇಶ- ವಿದೇಶಗಳ ಅಸೂಯೆಗೂ ಕಾರಣವಾಗಿದ್ದ ಬೆಂಗಳೂರಿನ ಹೆಸರು ಈ ಪರಿ ಮಲಿನಗೊಳ್ಳುವಲ್ಲಿ ಎಲ್ಲರ ಪಾಲೂ ಇದೆ. ಕೆಲವೇ ದಿನಗಳ ಹಿಂದೆ ಇಡೀ ನಗರವನ್ನೇ ಗಬ್ಬೆಬ್ಬಿಸಿದ ಕಸದ ಸಮಸ್ಯೆ ಅಮೆರಿಕದ `ನ್ಯೂಯಾರ್ಕ್ ಟೈಮ್ಸ'ನಂಥ ಪ್ರಮುಖ ಪತ್ರಿಕೆಯಲ್ಲಿ ಪ್ರಧಾನವಾಗಿ ಪ್ರಕಟವಾಯಿತು. ಆದರೆ ಆಗ ನಮ್ಮ ಮುಖ್ಯಮಂತ್ರಿಗಳು `ಅದೇನೂ ದೊಡ್ಡ ಸಂಗತಿಯಲ್ಲ' ಎಂದು ಪ್ರತಿಕ್ರಿಯಿಸಿದ್ದರು. ಅದರ ಬೆನ್ನಲ್ಲೆ ಇದೀಗ ಮಲಿನ ನಗರ ಎಂಬ ಹಣೆಪಟ್ಟಿ ಬಂದಿದೆ. ರಸ್ತೆಗಳಲ್ಲಿ ಓಡಾಡುವ 40 ಲಕ್ಷಕ್ಕೂ ಹೆಚ್ಚು ವಾಹನಗಳ ಜತೆಗೆ ನಿತ್ಯ ಸರಾಸರಿ 1500 ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಅಸಮರ್ಪಕ ಸಾರ್ವಜನಿಕ ಸಾರಿಗೆಯಿಂದಾಗಿ ನಾಗರಿಕರು ಖಾಸಗಿ ವಾಹನಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಇವು ಸೂಸುವ ಹೊಗೆಯಿಂದ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಲೇ ಇದೆ. ಇದರ ಜತೆಜತೆಗೇ ಶಬ್ದ ಮಾಲಿನ್ಯ ವಿಪರೀತ ಕಾಟ ಕೊಡುತ್ತಿದೆ. ಬೆಂಗಳೂರಿಗೆ ಭೂಷಣಪ್ರಾಯವಾಗಿದ್ದ ಹಸಿರು ಪ್ರದೇಶ ಕಡಿಮೆಯಾಗಿ ಎಲ್ಲೆಂದರಲ್ಲಿ ಕಟ್ಟಡಗಳು ತಲೆಯೆತ್ತುತ್ತಿವೆ. ಇವೆಲ್ಲವೂ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿವೆ. ಸುಂದರ ನಗರ, ನಿವೃತ್ತರ ಸ್ವರ್ಗ, ಉದ್ಯಾನ ನಗರಿ ಎಂಬ ಕೀರ್ತಿಯನ್ನು ಕಸಿದುಕೊಂಡು ಮಾಲಿನ್ಯ ನಗರ, ತಿಪ್ಪೇಗುಂಡಿ ನಗರ ಎಂಬ ಹೊಸ ಹೊಸ ಬಿರುದು ಜೋಡಿಸುತ್ತಿವೆ. 2009ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಮ್ಮ ದೇಶದ ಪ್ರಮುಖ ಕೈಗಾರಿಕಾ ನಗರಗಳಲ್ಲೊಂದಾದ ಬಫೆಲೊ ಜತೆ ಬೆಂಗಳೂರನ್ನು ಹೋಲಿಕೆ ಮಾಡಿದ್ದರು. ಜಾಗತಿಕ ಐಟಿ ಸಂಸ್ಥೆಗಳನ್ನು ಬೆಂಗಳೂರು ಸೆಳೆಯುತ್ತಿದ್ದ ಪರಿ ಮತ್ತು ಅದರಿಂದ ಇಲ್ಲಿ ಸೃಷ್ಟಿಯಾಗುತ್ತಿದ್ದ ಉದ್ಯೋಗದ ಅವಕಾಶಗಳು ಅವರ ಕಣ್ಣು ಕೆಂಪು ಮಾಡಿದ್ದವು. ಆದರೂ ಅದು ಬೆಂಗಳೂರಿನ ಪಾಲಿಗೆ ಹೆಮ್ಮೆಯ ಸಂಗತಿಯಾಗಿತ್ತು. ಅಂತಹ ಕಾಲ, ಕೀರ್ತಿ, ಆಕರ್ಷಣೆಯನ್ನು ಬೆಂಗಳೂರು ಮತ್ತೆ ಗಳಿಸಿಕೊಳ್ಳಬೇಕಾದರೆ ನಾಗರಿಕರು, ಸಂಘ ಸಂಸ್ಥೆಗಳು, ಸರ್ಕಾರ ಹೀಗೆ ಎಲ್ಲರೂ ಕೈಜೋಡಿಸಬೇಕು. ಕಸ ವಿಲೇವಾರಿಯನ್ನು ಜವಬ್ದಾರಿಯಿಂದ ನಿರ್ವಹಿಸಬೇಕು. ಸಮೂಹ ಸಾರಿಗೆಯನ್ನು ಹೆಚ್ಚಾಗಿ ಬಳಸಬೇಕು, ಎಲ್ಲ ಬಗೆಯ ಮಾಲಿನ್ಯಕ್ಕೆ ಕಡಿವಾಣ ಹಾಕಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.