ಅನುಷ್ಠಾನದಲ್ಲಿ ಎಚ್ಚರ ಇರಲಿ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ನಗದು ರೂಪದ ಸರ್ಕಾರಿ ನೆರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾದುದು. ಪ್ರಾರಂಭದ ಹಂತದಲ್ಲಿ ಇದು ಹದಿನಾರು ರಾಜ್ಯಗಳ 51 ಜಿಲ್ಲೆಗಳಿಗೆ ಮತ್ತು 29 ಯೋಜನೆಗಳಿಗೆ ಮಾತ್ರ ಸೀಮಿತವಾಗಿದ್ದರೂ ಇದನ್ನು ಇಡೀ ದೇಶಕ್ಕೆ ಮತ್ತು ಎಲ್ಲ ಯೋಜನೆಗಳಿಗೆ ಅನ್ವಯಿಸುವ ಆಶ್ವಾಸನೆಯನ್ನು ಕೇಂದ್ರ ಸರ್ಕಾರ ನೀಡಿದೆ. ನಮ್ಮಲ್ಲಿ ಸರ್ಕಾರಿ ಯೋಜನೆಗಳಿಗೇನೂ ಕೊರತೆ ಇಲ್ಲ, ಸಮಸ್ಯೆ ಅವುಗಳ ಅನುಷ್ಠಾನದ್ದು. ಒಂದು ರೂಪಾಯಿಯ ಸರ್ಕಾರಿ ಸೌಲಭ್ಯವನ್ನು ಫಲಾನುಭವಿಗಳಿಗೆ ತಲುಪಿಸಲು ಐದು ರೂಪಾಯಿ ಖರ್ಚಾಗುತ್ತದೆ ಎಂದು ಇತ್ತೀಚಿನ ಒಂದು ಸಮೀಕ್ಷೆ ಹೇಳಿತ್ತು. ಸರ್ಕಾರಿ ಸೌಲಭ್ಯಗಳು ಅರ್ಹರನ್ನು ತಲುಪದೆ ಅನರ್ಹರ ಕೈಸೇರಿ ಪೋಲಾಗುತ್ತಿರುವುದು ಎಲ್ಲ ಸರ್ಕಾರಗಳು ಎದುರಿಸುತ್ತಾ ಬಂದಿರುವ ಸಮಸ್ಯೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣದ ವರ್ಗಾವಣೆಯ ನಿರ್ಧಾರ ಕಲ್ಯಾಣ ಯೋಜನೆಗಳ ಅನುಷ್ಠಾನದ ಬಹುದೊಡ್ಡ ಸಮಸ್ಯೆಯಾದ ಸೋರಿಕೆಯನ್ನು ತಡೆಗಟ್ಟಲು ಖಂಡಿತ ನೆರವಾಗಬಲ್ಲದು. ಇದರ ಜತೆಗೆ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗಾಗಿ ನೀಡುವ ವಿವಿಧ ರೀತಿಯ ಸಹಾಯಧನ ಅನರ್ಹರನ್ನು ತಲುಪಿ ಪೋಲಾಗುವುದನ್ನು ಕೂಡಾ ತಪ್ಪಿಸಿದಂತಾಗುತ್ತದೆ. ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗಳಲ್ಲಿ ಬೆರಳಚ್ಚುಗಳೇ `ಪಾಸ್‌ವರ್ಡ್'ಗಳಾಗಿರುವುದರಿಂದ ಅರ್ಹ ಫಲಾನುಭವಿಗಳ ಬದಲಿಗೆ ಬೇರೊಬ್ಬರು ಹಣ ದುರುಪಯೋಗ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಸಹಾಯಧನ ಸದ್ಬಳಕೆಯಾಗುವಂತೆ ಮಾಡಲು ಇದೊಂದು ಉತ್ತಮ ಯೋಜನೆ. ಬ್ಯಾಂಕ್ ಖಾತೆಗೆ ಜಮೆಗೊಳ್ಳುವ ಹಣವನ್ನು ಫಲಾನುಭವಿಗಳು ನಿಗದಿತ ಉದ್ದೇಶಕ್ಕೆ ಬಳಸದೆ ದುರುಪಯೋಗ ಮಾಡುವ ಸಾಧ್ಯತೆ ಈ ಯೋಜನೆಯ ಮುಖ್ಯ ಲೋಪ. ಇದನ್ನು ತಡೆಯಲು ಹಣವನ್ನು ಮನೆಯಲ್ಲಿರುವ ಪುರುಷರ ಬದಲಿಗೆ ಮಹಿಳೆಯರ ಖಾತೆಗಳಿಗೆ ವರ್ಗಾಯಿಸುವ ಬಗ್ಗೆಯೂ ಯೋಚನೆ ಮಾಡಬಹುದಾಗಿದೆ. `ಆಧಾರ್' ಕಾರ್ಡ್‌ಗಳ ವಿತರಣೆ ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ಈ ಯೋಜನೆಯನ್ನು ಆ ಕಾರ್ಡ್ ಉಳ್ಳವರಿಗೆ ಮಾತ್ರ ಸೀಮಿತಗೊಳಿಸಿದರೆ ದೊಡ್ಡ ಸಂಖ್ಯೆಯ ಫಲಾನುಭವಿಗಳು ಇದರಿಂದ ವಂಚಿತರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆಧಾರ್‌ಕಾರ್ಡ್‌ಗಳ ವಿತರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಹೊಸ ಯೋಜನೆ `ಸಹಾಯಧನ ಕಡಿತಗೊಳಿಸುವ ಕುತಂತ್ರ' ಎನ್ನುವ ವಿರೋಧಪಕ್ಷಗಳ ಆರೋಪಕ್ಕೆ ಆಧಾರಗಳು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ. ಸಹಾಯಧನ ಬೇಕೆ,ಬೇಡವೇ ಎನ್ನುವುದು ಪ್ರತ್ಯೇಕ ಚರ್ಚೆ. ಇರುವ ಸಹಾಯಧನ ಸಮರ್ಪಕ ಬಳಕೆಯಾಗುವಂತೆ ನೋಡಿಕೊಳ್ಳುವುದು ಸದ್ಯದ ಆದ್ಯತೆ. ಕೂಲಿಕಾರ್ಮಿಕರ ಬೆರಳಚ್ಚು ಬದಲಾವಣೆಯಾಗುತ್ತದೆ ಎನ್ನುವ ಆತಂಕಕ್ಕೆ ಆಧಾರಗಳಿದ್ದರೆ ಅದಕ್ಕೆ ತಾಂತ್ರಿಕವಾಗಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡಬೇಕು. ಇಂತಹದ್ದೊಂದು ಯೋಜನೆಯ ಹಿಂದೆ ರಾಜಕೀಯ ಲಾಭ ಪಡೆಯುವ ಉದ್ದೇಶ ಆಡಳಿತಾರೂಢ ಪಕ್ಷ ಹೊಂದಿರುವುದನ್ನು ನಿರಾಕರಿಸಲಾಗದು. ಜನತೆಯ ಪಾಲಿಗೆ ಯೋಜನೆಗಳೂ ನಿಜಕ್ಕೂ ಕಲ್ಯಾಣಕಾರಿಯಾಗಿದ್ದರೆ ಅದರ ಲಾಭವನ್ನು ಯಾವುದೇ ರಾಜಕೀಯ ಪಕ್ಷ ಪಡೆದರೆ ಅದನ್ನು ತಪ್ಪು ಎನ್ನಲಾಗದು. ಘೋಷಣೆಯಲ್ಲಿ ಆಕರ್ಷಕವಾಗಿ ಕಾಣುವ ಯೋಜನೆಗಳು ಅನುಷ್ಠಾನದಲ್ಲಿ ವಿಫಲವಾಗಬಾರದು. ಆ ಎಚ್ಚರ ಸರ್ಕಾರಕ್ಕೆ ಇರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.