ಗಾರ್ಮೆಂಟ್ ಕಾರ್ಮಿಕರ ಅಳಲು ಮೂಲಭೂತವಾದ ಮಾನವೀಯ ಹಾಗೂ ಕಾರ್ಮಿಕ ಹಕ್ಕುಗಳನ್ನು ಗಾರ್ಮೆಂಟ್ ಕಾರ್ಮಿಕರಿಗೆ ನಿರಾಕರಿಸಲಾಗಿದೆ. ಹೀಗೆಂದು `ಗಾರ್ಮೆಂಟ್ ಕಾರ್ಮಿಕರಿಗಾಗಿ ಬದುಕುವ ವೇತನ' ಕುರಿತಂತೆ ಬೆಂಗಳೂರಿನಲ್ಲಿ ನಾಲ್ಕು ದಿನ ನಡೆದ `ರಾಷ್ಟ್ರೀಯ ಜನ ನ್ಯಾಯಮಂಡಳಿ' ತೀರ್ಪು ನೀಡಿದೆ. ಈ ತೀರ್ಪು, ಈ ವಲಯದ ಕಾರ್ಮಿಕರ ಸ್ಥಿತಿಗತಿಗಳನ್ನು ಸಮಾಜಕ್ಕೆ ತೆರೆದಿಟ್ಟಿದೆ. ಗಾರ್ಮೆಂಟ್ಸ್ ಕ್ಷೇತ್ರ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುತ್ತಿದೆ ಎಂಬುದು ಗೊತ್ತಿರುವ ಸಂಗತಿ. ಬಹುಶಃ ಬೀಡಿ ಕಾರ್ಖಾನೆಗಳ ನಂತರ ಮಹಿಳೆಗೆ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಿರುವ ವಲಯವೆಂದರೆ ಗಾರ್ಮೆಂಟ್ಸ್ ಕ್ಷೇತ್ರವೇ. `ರಾಷ್ಟ್ರೀಯ ಜನ ನ್ಯಾಯಮಂಡಳಿ' ಎದುರು ಬೆಂಗಳೂರು, ತಿರುಪ್ಪೂರ್ ಹಾಗೂ ಗುಡಗಾಂವ್ ಗಾರ್ಮೆಂಟ್ ಕಾರ್ಖಾನೆಗಳ 250 ಕಾರ್ಮಿಕರು ತಮ್ಮ ಅಳಲುಗಳನ್ನು ತೋಡಿಕೊಂಡಿದ್ದಾರೆ. ದುಡಿಮೆಯ ಅಮಾನವೀಯ ಸ್ಥಿತಿಗತಿಗಳು, ಲೈಂಗಿಕ ದೌರ್ಜನ್ಯ, ಲಿಂಗ ತಾರತಮ್ಯ, ಸರಿಯಾಗಿ ಸಿಗದ ಸಂಬಳ, ಕಾರ್ಮಿಕಸಂಘದ ಹಕ್ಕಿನ ದಮನ -ಹೀಗೆ ಮಾನವ ಹಾಗೂ ಕಾರ್ಮಿಕ ಹಕ್ಕುಗಳ ಉಲ್ಲಂಘನೆಗಳ ಕಥೆಗಳ ಎಳೆಗಳು ಈ ಅಳಲುಗಳಲ್ಲಿ ಹೆಣೆದುಕೊಂಡಿದ್ದವು. ಇಂತಹ ಸ್ಥಿತಿಗತಿಗಳು ಜೀತ ಹಾಗೂ ಬಲಾತ್ಕಾರದಿಂದ ಕೆಲಸ ತೆಗೆಯುವಂತಹ ಅಮಾನವೀಯ ಆಚರಣೆಗೆ ಸರಿಸಮವಾಗಿವೆ ಎಂಬಂತಹ ಸಹಾನುಭೂತಿ ನ್ಯಾಯಮಂಡಳಿಯ ತೀರ್ಪಿನಲ್ಲಿ ವ್ಯಕ್ತವಾಗಿರುವುದು ಸಹಜವಾದದ್ದೆ. ಈ ನಿಟ್ಟಿನಲ್ಲಿ ಸುಧಾರಣೆಗಾಗಿ, ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರತಿನಿಧಿಯನ್ನೂ ತೀರ್ಪುಗಾರರಾಗಿ ಒಳಗೊಂಡಿದ್ದ ನ್ಯಾಯಮಂಡಳಿ, ತನ್ನ 37 ಪುಟಗಳ ವರದಿಯಲ್ಲಿ ಅನೇಕ ಶಿಫಾರಸುಗಳನ್ನು ಮಾಡಿದೆ. ಗಾರ್ಮೆಂಟ್ ಬ್ರಾಂಡ್‌ಗಳು, ಸರಬರಾಜುದಾರರು, ಕಾರ್ಮಿಕ ಸಂಘಗಳು ಹಾಗೂ ಸರ್ಕಾರಿ ಅಧಿಕಾರಿಗಳು ಚರ್ಚೆಗಳನ್ನಾರಂಭಿಸಿ ಕ್ರಿಯಾಯೋಜನೆಗಳನ್ನು ರೂಪಿಸಬೇಕು ಎಂಬಂತಹ ಸಲಹೆಯನ್ನು ಈ ತೀರ್ಪು ನೀಡಿರುವುದು ಸಮಂಜಸ. ಘನತೆಯಿಂದ ಬದುಕುವುದಕ್ಕೆ ಸಾಕಾಗುವಷ್ಟು ವೇತನ ಪಡೆಯುವುದನ್ನು (ಲಿವಿಂಗ್ ವೇಜಸ್) ಮಾನವ ಹಕ್ಕಾಗಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂಬುದಕ್ಕೆ ನ್ಯಾಯಮಂಡಳಿ ಹೆಚ್ಚಿನ ಒತ್ತು ನೀಡಿದೆ. ಎಂದರೆ ಊಟ, ತಿಂಡಿಗೆ ಸಾಕಾಗುವಷ್ಟು ವೇತನ ನೀಡಿದರೆ ಸಾಲದು. ವಸತಿ, ವೈದ್ಯಕೀಯ ಆರೈಕೆ, ಮಕ್ಕಳ ಶಿಕ್ಷಣ, ವಿರಾಮ - ಹೀಗೆ ಘನತೆಯ ಬದುಕಿಗೆ ಅಗತ್ಯವಾದ ಎಲ್ಲಾ ಅಂಶಗಳನ್ನೂ ವೇತನ ಲೆಕ್ಕ ಹಾಕುವಾಗ ಗಣನೆಗೆ ತೆಗೆದುಕೊಳ್ಳಬೇಕು ಎಂದು ಈ ತೀರ್ಪು ವಿವರಿಸಿರುವುದು ವಿಶೇಷವಾದದ್ದು. ಆದರೆ ಈ ತೀರ್ಪಿನ ಎಷ್ಟು ಅಂಶಗಳು ವಾಸ್ತವಿಕವಾಗಿ ಜಾರಿಯಾಗುತ್ತವೆ ಎಂಬುದೇ ದೊಡ್ಡ ಸವಾಲು. ಈ ಕಾರ್ಮಿಕರು ಸಿದ್ಧಪಡಿಸುವ ಬಟ್ಟೆಗಳು ಶ್ರೀಮಂತ ರಾಷ್ಟ್ರಗಳ ಅತ್ಯಾಧುನಿಕ ಅಂಗಡಿಗಳಲ್ಲಿ ಬಿಕರಿಯಾಗುತ್ತವೆ. ಆದರೆ ಅದರ ಹಿಂದಿರುವ ಶ್ರಮ ಜೀವಿಗಳ ಉದ್ಯೋಗದ ಸ್ಥಿತಿಗತಿ ಮಾನವೀಯ ಘನತೆಗೆ ಅನುಗುಣವಾಗಿಲ್ಲದೆ ಇರುವುದು ವಿಷಾದದ ಸಂಗತಿ. ರಾಜ್ಯದಲ್ಲಿ ಹೆಚ್ಚಿನ ಗಾರ್ಮೆಂಟ್ ಕಾರ್ಖಾನೆಗಳು ಬೆಂಗಳೂರಿನಲ್ಲೇ ಇವೆ. ಷೆಡ್, ಗೋಡೌನ್‌ಗಳಲ್ಲಿ ಕಾರ್ಯನಿರ್ವಹಿಸುವಂತಹ ಗಾರ್ಮೆಂಟ್ ಘಟಕಗಳೂ ಇವೆ. ಬಹುತೇಕ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಅಗ್ನಿ ಸುರಕ್ಷತೆಯ ವ್ಯವಸ್ಥೆಯೂ ಇರುವುದಿಲ್ಲ. ಹೀಗಾಗಿ, ಮೊನ್ನೆ ಢಾಕಾದಲ್ಲಿ ಸಂಭವಿಸಿದ ಅಗ್ನಿ ಅನಾಹುತ, ನೂರಾರು ಜೀವಿಗಳನ್ನು ಬಲಿ ತೆಗೆದುಕೊಂಡ ಘಟನೆಯೂ ಇದೇ ಸಂದರ್ಭದಲ್ಲಿ ನಮಗೆ ಎಚ್ಚರಿಕೆ ಗಂಟೆಯಾಗುವುದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.