ಶಿಸ್ತಿನ ಪಕ್ಷದ ಬಣ್ಣ ಬಯಲು ಹಿರಿಯ ವಕೀಲ ರಾಮ್ ಜೇಠ್ಮಲಾನಿ ಯಾವುದೇ ರಾಜಕೀಯ ಪಕ್ಷದ ಶಿಸ್ತಿನ ಚೌಕಟ್ಟಿಗೆ ಹೊಂದಿಕೊಳ್ಳುವವರಲ್ಲ. ಅವರು ರಾಜಕೀಯ ಪಕ್ಷಗಳನ್ನು ಬಳಸಿಕೊಳ್ಳುತ್ತಿರುವ ಹಾಗೆ, ರಾಜಕೀಯ ಪಕ್ಷಗಳು ಅವರನ್ನು ಬಳಸಿಕೊಳ್ಳುತ್ತಾ ಬಂದಿವೆ. ಹಿಂದೆ ಬಿಜೆಪಿಯಲ್ಲಿದ್ದ ಜೇಠ್ಮಲಾನಿ ಅಲ್ಲಿಂದ ಒಮ್ಮೆ ಹೊರಬಂದು ಇತ್ತೀಚೆಗೆ ಮತ್ತೆ ಪ್ರವೇಶಿಸಿ ಈಗ ಹೊರಹಾಕಿಸಿಕೊಂಡಿದ್ದಾರೆ. ಇತ್ತೀಚಿನ ಕೆಲವು ದಿನಗಳ ಜೇಠ್ಮಲಾನಿಯವರ ಹೇಳಿಕೆಗಳನ್ನು ಗಮನಿಸಿದರೆ ಬಿಜೆಪಿಗೆ ಅವರನ್ನು ಪಕ್ಷದಿಂದ ಅಮಾನತುಗಳಿಸದೆ ಬೇರೆ ದಾರಿಯೂ ಇರಲಿಲ್ಲ. ಸಿಬಿಐ ಮುಖ್ಯಸ್ಥರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ನಿಲುವಿಗೆ ವಿರುದ್ಧವಾಗಿ ಹೇಳಿಕೆ ನೀಡಿರುವುದು ಜೇಠ್ಮಲಾನಿ ಅಮಾನತಿಗೆ ಕಾರಣ ಎಂದು ಮೇಲ್ನೋಟಕ್ಕೆ ಅನಿಸಿದರೂ ಅದು ಸಂಪೂರ್ಣ ಸತ್ಯ ಅಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ನಂತರ ಮೊದಲ ಬಾರಿ ಅವರ ರಾಜೀನಾಮೆಗೆ ಒತ್ತಾಯಿಸಿದವರು ಜೇಠ್ಮಲಾನಿ. ಇದರ ನಂತರ ಜೇಠ್ಮಲಾನಿ ಬಿಜೆಪಿ ರಾಜಕೀಯದ ಪ್ರಮುಖ ಅಸ್ತ್ರವಾಗಿದ್ದ ಶ್ರಿರಾಮನನ್ನು ಟೀಕಿಸಿದ್ದರು. ಇದೀಗ ಸಿಬಿಐ ಮುಖ್ಯಸ್ಥರ ನೇಮಕವನ್ನು ಪ್ರಶ್ನಿಸಿದ್ದ ಪಕ್ಷದ ಇಬ್ಬರು ಹಿರಿಯ ಧುರೀಣರ ಅಭಿಪ್ರಾಯಕ್ಕೆ ವಿರುದ್ಧವಾಗಿ ಪ್ರಧಾನಿಯವರನ್ನು ಬೆಂಬಲಿಸಿದ್ದರು. ಇಷ್ಟಾದ ನಂತರ ಅವರ ಮೇಲೆ ಬಿಜೆಪಿ ಕ್ರಮ ಕೈಗೊಳ್ಳಲೇಬೇಕಾಗಿತ್ತು. ಆದರೆ ಒಬ್ಬ ಜೇಠ್ಮಲಾನಿ ವಿರುದ್ಧದ ಕ್ರಮದಿಂದ ಪಕ್ಷದಲ್ಲಿ ಶಿಸ್ತಿನ ಮರುಸ್ಥಾಪನೆಯಾಗಲಿದೆ ಎಂದು ಹೇಳಲಾಗದು. ಬಿಜೆಪಿಗೆ ಅಂಟಿರುವ ಭಿನ್ನಮತದ ವ್ಯಾಧಿ ಅಷ್ಟೊಂದು ಸುಲಭದಲ್ಲಿ ಬಿಟ್ಟು ಹೋಗುವಂತಹದ್ದಲ್ಲ. ಇದಕ್ಕೆ ಕರ್ನಾಟಕದ ಬಿಜೆಪಿಯೊಳಗಿನ ಭಿನ್ನಮತಕ್ಕಿಂತ ಉತ್ತಮ ಉದಾಹರಣೆ ಬೇರೆ ಇಲ್ಲ. ಪಕ್ಷ ಮತ್ತು ಪಕ್ಷದ ನಾಯಕರ ವಿರುದ್ಧ ನಿತ್ಯ ವಾಗ್ದಾಳಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಕ್ರಮಕೈಗೊಳ್ಳಲಾಗದೆ ಪಕ್ಷ ಕೈಚೆಲ್ಲಿ ಕೂತಿದೆ. ಈಗಿನ ವಿವಾದದಲ್ಲಿಯೂ ಮೇಲ್ನೋಟಕ್ಕೆ ಬೇರೆ ಬೇರೆ ಪಾತ್ರಧಾರಿಗಳು ಕಂಡುಬಂದರೂ ಇದು ಮುಖ್ಯವಾಗಿ ಬಿಜೆಪಿಯೊಳಗೆ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರ ನಡುವಿನ ಶೀತಲ ಸಮರ. ಈ ಭಿನ್ನಮತ ಪಕ್ಷವನ್ನು ಹೆಚ್ಚು ಕಡಿಮೆ ಎರಡು ಹೋಳು ಮಾಡಿದೆ. ಗಡ್ಕರಿ ಅವರನ್ನು ವಿರೋಧಿಸುತ್ತಿರುವುದು ಜೇಠ್ಮಲಾನಿಯೊಬ್ಬರೇ ಅಲ್ಲ. ಹಿರಿಯ ನಾಯಕರಾದ ಜಸ್ವಂತ್‌ಸಿಂಗ್, ಯಶವಂತ್ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಅವರೂ ಗಡ್ಕರಿ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದನ್ನು ವಿರೋಧಿಸಿದ್ದಾರೆ. ಅಷ್ಟು ಮಾತ್ರವಲ್ಲ, ಗಡ್ಕರಿಯವರಿಗೆ ಸಂಬಂಧಿಸಿದ ಹಗರಣಗಳು ಬಯಲಾಗಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೂಡಾ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಇದೆ. ಈ ಒಳಜಗಳ ಒಬ್ಬಿಬ್ಬರ ವಿರುದ್ಧದ ಕ್ರಮದಿಂದ ಬಗೆಹರಿಯುವಂತಹದ್ದಲ್ಲ. ಈ ಬಿಕ್ಕಟ್ಟಿನಿಂದ ಪಾರಾಗಬೇಕಾದರೆ ಅಶಿಸ್ತಿನಿಂದ ವರ್ತಿಸುವವರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ದಿಟ್ಟತನವನ್ನು ಬಿಜೆಪಿ ತೋರಬೇಕು. ಕೆಲವು ವ್ಯಕ್ತಿಗಳನ್ನಷ್ಟೇ ಆಯ್ದು ಶಿಕ್ಷೆಗೊಳಪಡಿಸುವುದು ಪಕ್ಷದ ದೌರ್ಬಲ್ಯದ ಪ್ರದರ್ಶನವಷ್ಟೇ ಆಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.