ಮಾತುಕತೆ ನಡೆಸಿ `ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಪರಸ್ಪರ ಭೇಟಿಮಾಡಿ ಕಾವೇರಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಬೇಕು, ಇದಕ್ಕಾಗಿ ಪ್ರತಿಬಾರಿ ಪ್ರಧಾನಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರ (ಸಿಎಆರ್)ಕ್ಕೆ ಸೂಚನೆ ನೀಡಲು ಸಾಧ್ಯ ಇಲ್ಲ' ಎಂದು ಸುಪ್ರೀಂಕೋರ್ಟ್ ಹೇಳಿರುವುದು ಸರಿಯಾಗಿಯೇ ಇದೆ. ಕಾವೇರಿ ವಿವಾದವನ್ನು ನ್ಯಾಯಮಂಡಳಿ ಇಲ್ಲವೆ ನ್ಯಾಯಾಲಯಗಳ ಮೂಲಕವಾಗಲಿ, ಧರಣಿ, ಬಂದ್ ಮತ್ತು ವೀರಾವೇಶದ ಘೋಷಣೆಗಳಿಂದಾಗಲಿ ಇತ್ಯರ್ಥಗೊಳಿಸಲು ಸಾಧ್ಯ ಇಲ್ಲ ಎನ್ನುವುದು ಎರಡೂ ರಾಜ್ಯಗಳಿಗೆ ಅನುಭವವಾಗಿದೆ. ಹದಿನಾರು ವರ್ಷಗಳಷ್ಟು ದೀರ್ಘ ಕಾಲ ವಿಚಾರಣೆ ನಡೆಸಿ ಕಾವೇರಿ ನ್ಯಾಯಮಂಡಳಿ ನೀಡಿರುವ ಐತೀರ್ಪಿಗೆ ಕೂಡಾ ಶಾಶ್ವತ ಪರಿಹಾರವನ್ನು ಸೂಚಿಸಲಾಗಿಲ್ಲ. ಸರಳವಾಗಿ ಹೇಳುವುದಾದರೆ ಇದು `ಮಳೆ ಇಲ್ಲದ ಕಷ್ಟದ ದಿನಗಳಲ್ಲಿನ ನೀರು ಹಂಚಿಕೆಯ ಸಮಸ್ಯೆ'. ಉಳಿದ ನದಿಗಳಂತಲ್ಲ ಕಾವೇರಿ, ಅದರಲ್ಲಿರುವ ನೀರಿನ ಪ್ರಮಾಣವೇ ಕಡಿಮೆ. ಅದು ಕೇವಲ 740 ಟಿಎಂಸಿ. ಇದನ್ನು ನದಿಕಣಿವೆಯ ರಾಜ್ಯಗಳು ಹಂಚಿಕೊಳ್ಳಬೇಕು. ಈ ಕೆಲಸವನ್ನು ರೈತರಿಗೆ ಬಿಟ್ಟುಬಿಟ್ಟರೆ ಅವರು ಹೆಚ್ಚು ಜಗಳ ಇಲ್ಲದೆ ಹಂಚಿಕೊಳ್ಳುತ್ತಿದ್ದರೋ ಏನೋ, ಆದರೆ ರಾಜಕೀಯ ಪ್ರವೇಶದಿಂದಾಗಿ ಇದು ಬಿಡಿಸಲಾಗದ ಕಗ್ಗಂಟಾಗಿಯೇ ಉಳಿದಿದೆ. ವಿವಾದ ಇತ್ಯರ್ಥಗೊಳ್ಳಬೇಕಾದರೆ ಮುಖ್ಯವಾಗಿ ತಮಿಳುನಾಡು ಕಾವೇರಿ ನೀರನ್ನು ಬಳಸಿಕೊಂಡು ರಾಜಕೀಯದ ಆಟ ಆಡುವುದನ್ನು ನಿಲ್ಲಿಸಬೇಕು. ಸದಾ ಪ್ರಾದೇಶಿಕ ಪಕ್ಷದ ಸರ್ಕಾರವನ್ನೇ ಹೊಂದಿರುವ ತಮಿಳುನಾಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ತನ್ನ ಉದ್ದೇಶ ಸಾಧಿಸಿಕೊಳ್ಳುತ್ತಿದ್ದರೆ, ರಾಷ್ಟ್ರೀಯ ಪಕ್ಷಗಳ ಮುಲಾಜಿನಲ್ಲಿರುವ ಕರ್ನಾಟಕದ ಜನಪ್ರತಿನಿಧಿಗಳು ದನಿ ಕಳೆದುಕೊಂಡವರಂತೆ ವರ್ತಿಸುತ್ತಾ ಬಂದಿದ್ದಾರೆ. ಎರಡೂ ರಾಜ್ಯಗಳ ವೈಯಕ್ತಿಕ ರಾಜಕೀಯ ಹಿತಾಸಕ್ತಿಯನ್ನು ಮೀರಿ ರೈತರ ಹಿತದ ಬಗ್ಗೆ ಯೋಚಿಸಬೇಕಾಗಿದೆ. ಇದಕ್ಕಾಗಿ ಮೊದಲು ಕಾವೇರಿ ಕಣಿವೆಯ ರೈತ ಪ್ರತಿನಿಧಿಗಳನ್ನು ಸಂಧಾನ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಬೇಕು. ಸುಪ್ರೀಂಕೋರ್ಟ್ ಹೇಳಿರುವಂತೆ ನೀರಾವರಿ ತಜ್ಞರ ಸಲಹೆಗಳನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಬೇಕು. ಒಂಬತ್ತು ವರ್ಷಗಳ ಹಿಂದೆ ಕಾವೇರಿ ಬಿಕ್ಕಟ್ಟು ಉಲ್ಬಣಗೊಂಡಿದ್ದಾಗ ಅಸ್ತಿತ್ವಕ್ಕೆ ಬಂದಿದ್ದ `ಕಾವೇರಿ ಕುಟುಂಬ' ಇಂತಹ ಪ್ರಯತ್ನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲು ಸಾಧ್ಯ. ಮೊದಲಿಗೆ ಬೆಳೆ ಪರಿವರ್ತನೆಗೆ ಎರಡೂ ರಾಜ್ಯಗಳ ರೈತರ ಮನವೊಲಿಸುವ ಕೆಲಸ ನಡೆಯಬೇಕು. ಈಗಿನಂತೆ ಅಧಿಕ ನೀರಿನ ಅಗತ್ಯ ಇರುವ ಬತ್ತ-ಕಬ್ಬು ಬೆಳೆಗಳ ಬದಲಿಗೆ ಕಡಿಮೆ ನೀರಿನ ಅವಶ್ಯಕತೆ ಇರುವ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು. ಕಾಲುವೆಗಳ ಸಿಮೆಂಟ್ ಲೈನಿಂಗ್, ಸ್ಲ್ಯೂಸ್‌ಗಳ ದುರಸ್ತಿ, ಉಪಕಾಲುವೆಗಳ ನಿರ್ಮಾಣದಂತಹ ಕ್ರಮಗಳ ಮೂಲಕವೂ ನೀರು ಪೋಲಾಗದಂತೆ ತಡೆಯಲು ಸಾಧ್ಯ. 75ವರ್ಷಗಳಷ್ಟು ಹಳೆಯದಾದ ಮೆಟ್ಟೂರು ಜಲಾಶಯದಲ್ಲಿ ಹೂಳು ತುಂಬಿರುವ ಕಾರಣ ಅದರ ಸಂಗ್ರಹ ಸಾಮರ್ಥ್ಯ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಹೆಚ್ಚುವರಿನೀರು ಸಮುದ್ರಕ್ಕೆ ಹರಿದು ಪೋಲಾಗುತ್ತಿದೆ. ಶೀಘ್ರವಾಗಿ ಅದರಲ್ಲಿರುವ ಹೂಳು ತೆಗೆಯುವ ಕೆಲಸ ನಡೆಯಬೇಕು. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ರೈತರ ಹಿತವನ್ನೇ ಗಮನದಲ್ಲಿಟ್ಟುಕೊಂಡು ಮಾತುಕತೆ ನಡೆಸಿದರೆ ಇವುಗಳಲ್ಲಿ ಯಾವುದೂ ಅಸಾಧ್ಯ ಅಲ್ಲ. ಈ ಪ್ರಯತ್ನಕ್ಕೆ ಶೀಘ್ರ ಚಾಲನೆ ಸಿಗಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.