ಟೆನಿಸ್: ಅತಿರೇಕದ ವಿವಾದ ಭಾರತದ ಟೆನಿಸ್‌ಗೆ ವಿವಾದಗಳಿಂದ ಮುಕ್ತಿಯೇ ಸಿಗುತ್ತಿಲ್ಲ. ಒಲಿಂಪಿಕ್ಸ್‌ಗೆ ತಂಡ ಆಯ್ಕೆ ವಿವಾದವೇ 2012 ರಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೆ ಹೊಸ ವರ್ಷದ ಆರಂಭದಲ್ಲೇ ಮತ್ತೊಂದು ವಿವಾದ ಭಾರತದ ಟೆನಿಸ್ ವ್ಯವಸ್ಥೆಯನ್ನು ಬೀದಿಗೆ ತಂದು ನಿಲ್ಲಿಸಿದೆ. ಇದಕ್ಕೆ ಕಾರಣ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೋಮದೇವ್ ದೇವ್‌ವರ್ಮನ್ ಸಾರಥ್ಯದ ಎಂಟು ಆಟಗಾರರು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ವಿರುದ್ಧ ಬಂಡಾಯ ಸಾರಿರುವುದು. ದಕ್ಷಿಣ ಕೊರಿಯಾ ವಿರುದ್ಧ ನವದೆಹಲಿಯಲ್ಲಿ ನಡೆಯಲಿರುವ ಡೇವಿಸ್ ಕಪ್ ಟೂರ್ನಿಗೆ ಕೆಲವೇ ದಿನಗಳು ಉಳಿದಿರುವಾಗ ಈ ಆಟಗಾರರು ಬಹಿಷ್ಕಾರ ಬೆದರಿಕೆ ಹಾಕಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಅಥವಾ ಪ್ರಮುಖ ಟೂರ್ನಿಗಳಲ್ಲಿ ಈ ಆಟಗಾರರ ಸಾಧನೆ ಅಷ್ಟಕಷ್ಟೇ. ಆದರೆ ಅವರು ಸೃಷ್ಟಿಸುವ ವಿವಾದ ಹಾಗೂ ಬೇಡಿಕೆಗಳಿಗೆ ಮಾತ್ರ ಮಿತಿಯೇ ಇಲ್ಲ. ಕೆಲ ಬೇಡಿಕೆಗಳಿಗೆ ಸಂಸ್ಥೆಯು ಸ್ಪಂದಿಸಿದರೂ ಆಟಗಾರರು ಅದರಿಂದ ಸಂತೃಪ್ತರಾಗಿಲ್ಲ. ಈ ಬೆದರಿಕೆಗೆ ಮಣಿಯದ ಸಂಸ್ಥೆಯು ಈ ಟೂರ್ನಿಗೆ ಹೊಸಬರನ್ನು ಆಯ್ಕೆ ಮಾಡಿದೆ. ಆದರೆ ಈ ಆಟಗಾರರಲ್ಲಿ ಲಿಯಾಂಡರ್ ಪೇಸ್ ಹೊರತುಪಡಿಸಿದರೆ ಉಳಿದ ಯಾರಿಗೂ ಡೇವಿಸ್ ಕಪ್‌ನಲ್ಲಿ ಆಡಿದ ಅನುಭವ ಇಲ್ಲ. ಭೂಪತಿ ಹಾಗೂ ಪೇಸ್ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯವೂ ಈ ವಿವಾದದಲ್ಲಿ ಕೆಲಸ ಮಾಡುತ್ತಿದೆ. ಪೇಸ್ ಅವರ ತಂದೆ ಡಾ.ವೇಸ್ ಪೇಸ್ ಅವರನ್ನು ಭಾರತ ತಂಡದ ವೈದ್ಯರ ಸ್ಥಾನದಿಂದ ಕೆಳಗಿಳಿಸಬೇಕೆಂಬ ಬೇಡಿಕೆಯೇ ಅದಕ್ಕೊಂದು ಉದಾಹರಣೆ. ತಾವು ಸೂಚಿಸಿದ ಸಹಾಯಕ ಸಿಬ್ಬಂದಿಯನ್ನು ನೇಮಿಸಬೇಕು, ಬಹುಮಾನದ ಹಣ ಹಂಚಿಕೆ ವಿಧಾನದಲ್ಲಿ ಬದಲಾವಣೆಯಾಗಬೇಕು ಹಾಗೂ ತಾವು ಹೇಳಿದ ಸ್ಥಳದಲ್ಲಿ ಡೇವಿಸ್ ಕಪ್ ಟೂರ್ನಿ ಆಯೋಜಿಸಬೇಕೆಂಬುದು ಬಂಡಾಯ ಎದ್ದಿರುವ ಆಟಗಾರರ ಬೇಡಿಕೆ. ಆದರೆ ಈ ಬಂಡಾಯದಲ್ಲಿ ಯುವ ಆಟಗಾರರೂ ಕೈಜೋಡಿಸಿದ್ದಾರೆ ಎಂಬ ವಿಷಯ ಆಘಾತ ಮೂಡಿಸುವಂಥದ್ದು. ತಾವು ತೆಗೆದುಕೊಂಡಿರುವ ಕ್ರಮ ಭಾರತದ ಟೆನಿಸ್‌ನ ಹಿತದೃಷ್ಟಿಯಿಂದ ಉತ್ತಮವಾಗಿಯೇ ಇದೆ ಎಂಬುದು ಈ ಆಟಗಾರರ ಸಮರ್ಥನೆ. ತಮಗೆ ಬೇಕಾದ ಸೌಲಭ್ಯದ ಬಗ್ಗೆ ಧ್ವನಿ ಎತ್ತಲು ಆಟಗಾರರಿಗೆ ಹಕ್ಕಿದೆ. ಆದರೆ ಆಯ್ಕೆ ವಿಚಾರದಲ್ಲಿ ಅವರು ತಲೆಹಾಕುತ್ತಿರುವುದು ದುರದೃಷ್ಟಕರ. ಭಾರತದಲ್ಲಿ ಕೆಲವು ಕ್ರೀಡಾ ಸಂಸ್ಥೆಗಳ ಆಡಳಿತ ಯಾವ ರೀತಿ ಇದೆ ಎಂಬುದಕ್ಕೆ ಈ ವಿವಾದ ಪ್ರಮುಖ ಉದಾಹರಣೆ ಕೂಡ. ಲಂಡನ್ ಒಲಿಂಪಿಕ್ಸ್‌ಗೆ ಭಾರತ ತಂಡ ಆಯ್ಕೆ ವಿಷಯದಲ್ಲಿ ಆಟಗಾರರಿಗೆ ಎಐಟಿಎ ತಲೆ ಬಾಗಿತ್ತು. ಇದರಿಂದ ಎಐಟಿಎನೊಳಗಿನ ವೃತ್ತಿಪರತೆಯ ಕೊರತೆ ಮುನ್ನೆಲೆಗೆ ಬಂದಿತ್ತು. ಹಾಗಾಗಿ ತಂಡವನ್ನು ಆಯ್ಕೆ ಮಾಡಲು ಪರಿಣತರ ಆಯ್ಕೆ ಸಮಿತಿಗೆ ಎಐಟಿಎ ಪೂರ್ಣ ಸ್ವತಂತ್ರ ನೀಡಬೇಕು. ಆಯ್ಕೆ ವಿಚಾರದಲ್ಲಿ ಸಂಸ್ಥೆಯ ಹಸ್ತಕ್ಷೇಪ ಇರಕೂಡದು. ಪ್ರಮುಖವಾಗಿ ಸಂಸ್ಥೆಯು ಗುಂಪುಗಾರಿಕೆ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ವೃತ್ತಿಪರತೆ ಅಳವಡಿಸಿಕೊಳ್ಳಬೇಕಾಗಿದೆ. ಆಟಗಾರರು ಕೂಡ ಬಹಿಷ್ಕಾರ ಬೆದರಿಕೆ ಕೈಬಿಟ್ಟು ಸಾಧನೆಯತ್ತ ಚಿತ್ತಹರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.