ಗುಟ್ಕಾ: ಜಾಗೃತಿಯ ಮದ್ದು ಗುಟ್ಕಾ ತಯಾರಿಕೆ ಹಾಗೂ ಮಾರಾಟದ ನಿಷೇಧವನ್ನು ಜಾರಿಗೆ ತರಬೇಕೆಂದು ಭಾರತೀಯ ವೈದ್ಯಕೀಯ ಸಂಘ ( ಐಎಂಎ) ಹಾಗೂ ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಐಡಿಎ) ರಾಜ್ಯಸರ್ಕಾರವನ್ನು ಒತ್ತಾಯಿಸಿವೆ. ಈ ಮಧ್ಯೆ ನೆರೆಯ ಆಂಧ್ರಪ್ರದೇಶ ಸರ್ಕಾರ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಗುಟ್ಕಾ ನಿಷೇಧವನ್ನು ಜಾರಿಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಆರಂಭವಾಗಿರುವ ಬೃಹತ್ ಸಾರ್ವಜನಿಕ ಆರೋಗ್ಯ ಆಂದೋಲನ ಇದಾಗಿದ್ದು, ಕಳೆದ ಆರು ತಿಂಗಳಲ್ಲಿ ರಾಷ್ಟ್ರದ ಹಲವಾರು ರಾಜ್ಯಗಳು ಈ ನಿಷೇಧವನ್ನು ಹೇರಿವೆ. ರಾಷ್ಟ್ರದಲ್ಲಿ ಕೋಟ್ಯಂತರ ಜನರು ಒಂದಲ್ಲ ಒಂದು ವಿಧದಲ್ಲಿ ತಂಬಾಕು ಜಗಿಯುವ ಪ್ರವೃತ್ತಿ ಹೊಂದಿದ್ದಾರೆ. ಈ ಚಟವೇನೂ ಇತ್ತೀಚಿನದಲ್ಲ. ಮೊಘಲ್ ದೊರೆಗಳ ಕಾಲದಿಂದಲೂ ಅಷ್ಟೇನೂ ತೀಕ್ಷ್ಣವಿಲ್ಲದ ಈ ಬಗೆಯ ಉದ್ದೀಪನ ವಸ್ತುವಿನ ಬಳಕೆ ಜನರಲ್ಲಿ ಇತ್ತು ಎನ್ನಲಾಗಿದೆ. ಗುಟ್ಕಾ ಬಹಿಷ್ಕಾರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶನವಿದೆ. ಆಹಾರ ಸುರಕ್ಷತೆ ಹಾಗೂ ಮಾನದಂಡ ಕಾಯಿದೆಯ (ಎಫ್‌ಎಸ್‌ಎಸ್‌ಎ) ಅಡಿ ಗುಟ್ಕಾವನ್ನು ಆಹಾರ ಪದಾರ್ಥವಾಗಿ ಘೋಷಿಸಲಾಗಿದೆ. ಹೀಗಾಗಿ ತಂಬಾಕು ಅಂಶ ಇರುವ ಆಹಾರ ಪದಾರ್ಥಗಳನ್ನು ಬಹಿಷ್ಕರಿಸಬೇಕೆಂಬುದನ್ನು ಅನೇಕ ನ್ಯಾಯಾಲಯ ತೀರ್ಪುಗಳು ಸಾರಿ ಹೇಳಿವೆ. ಗುಟ್ಕಾದಲ್ಲಿ ಮುಖ್ಯವಾಗಿ 4000 ರಾಸಾಯನಿಕಗಳಿವೆ. ಇವುಗಳಲ್ಲಿ 70ರಿಂದ 100 ರಾಸಾಯನಿಕಗಳು ಕ್ಯಾನ್ಸರ್‌ಕಾರಕ ಎಂಬುದು ವೈದ್ಯರ ವಿವರಣೆ. ಬಾಯಿಯ ಕ್ಯಾನ್ಸರ್ ಹಾಗೂ ತಂಬಾಕು ಜಗಿಯುವಿಕೆ ಮಧ್ಯೆ ಸಂಬಂಧ ಇರುವುದನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ. ಸುಲಭ ಲಭ್ಯತೆ, ಕಡಿಮೆ ಬೆಲೆಗಳು ಹಾಗೂ ಆಕರ್ಷಕ ಮಾರಾಟ ವಿಧಾನಗಳಿಂದಾಗಿ ಗುಟ್ಕಾ ಉತ್ಪನ್ನಗಳು ಕಳೆದ ಕೆಲವು ವರ್ಷಗಳಲ್ಲಿ ಶಾಲೆಗಳಿಗೆ ಹೋಗುವ ಮಕ್ಕಳು ಹಾಗೂ ಹದಿವಯಸ್ಕರ್ಲ್ಲಲೂ ಹೆಚ್ಚು ಬಳಕೆಯಲ್ಲಿವೆ ಎಂಬುದು ಆತಂಕಕಾರಿ. ಪ್ರತಿ ದಿನ ಅನೇಕ ಮಂದಿ ಗುಟ್ಕಾಸೇವನೆ ಚಟಕ್ಕೆ ಬಲಿಯಾಗುವುದೂ ಮುಂದುವರಿದಿದೆ ಎನ್ನುತ್ತವೆ ಅಧ್ಯಯನಗಳು. ಆದರೆ ಸಾರ್ವಜನಿಕ ಆರೋಗ್ಯ ಕಾಪಾಡುವಿಕೆಗೆ ಗುಟ್ಕಾ ಬಹಿಷ್ಕಾರವೇ ಪೂರ್ಣ ಮದ್ದಲ್ಲ. ಚಟ ಅಂಟಿಸಿಕೊಂಡವರು ಅಷ್ಟು ಸುಲಭವಾಗಿ ವ್ಯಸನಮುಕ್ತರಾಗಲಾರರು ಎಂಬ ವಾಸ್ತವಿಕತೆಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಗುಟ್ಕಾ ಬಹಿಷ್ಕಾರದಿಂದ ಈ ಉದ್ಯಮಗಳು ಭೂಗತವಾಗಬಹುದು ಅಥವಾ ಅಕ್ರಮ ಮಾರಾಟ ಚಟುವಟಿಕೆಗಳು ಆರಂಭವಾಗಬಹುದು ಎಂಬುದು ಕಟುವಾಸ್ತವ. ತಂಬಾಕು ಜಗಿಯುವ ವ್ಯಸನಕ್ಕೆ ಬಿದ್ದವರು ಕಳ್ಳದಾರಿ ಹಿಡಿದೇ ಹಿಡಿಯುತ್ತಾರೆ. ಹೀಗಾಗಿಯೇ ಜಾಗೃತಿ ಕಾರ್ಯಕ್ರಮಗಳ ಪಾತ್ರ ಇಲ್ಲಿ ಬಹು ಮುಖ್ಯ. ಗುಟ್ಕಾದಿಂದಾಗಬಹುದಾದ ಆರೋಗ್ಯ ಸಮಸ್ಯೆ ಕುರಿತಾದ ಅರಿವು ವ್ಯಕ್ತಿಯ ಒಳಗೇ ಮೂಡುವಂತೆ ಮಾಡುವ ಪ್ರಯತ್ನಗಳು ಹೆಚ್ಚು ಫಲಕಾರಿ. ಈಗಾಗಲೇ ಸಿಗರೇಟ್ ಮಾರಾಟ, ಬಳಕೆ ಕುರಿತಂತೆ ಅನೇಕ ನಿರ್ಬಂಧಗಳು ಜಾರಿಯಲ್ಲಿವೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆಗೆ ನಿರ್ಬಂಧವಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲ. ಹಾಗೆಯೇ ಸಿಗರೇಟ್ ಸೇವನೆ ಬಗ್ಗೆ ಶಾಸನಬದ್ಧ ಎಚ್ಚರಿಕೆಯನ್ನೂ ಪ್ಯಾಕ್‌ಗಳ ಮೇಲೆ ನಮೂದಿಸಲಾಗುತ್ತದೆ. ಗುಟ್ಕಾ ಸೇವನೆ ಕುರಿತಂತೆಯೂ ಈ ಬಗೆಯ ಜಾಗೃತಿ ಕಾರ್ಯಕ್ರಮಗಳು ಅತ್ಯಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.