ಈ ಜಾಲಕ್ಕೆ ಕೊನೆ ಇಲ್ಲವೇ? ರಾಮನಗರ ಜಿಲ್ಲೆ ವಿಶೇಷವಾಗಿ ಮಾಗಡಿ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಮೂತ್ರಪಿಂಡ ಅಕ್ರಮ ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ ನಂತರ ಎಂಟು ಮಂದಿಯನ್ನು ಬಂಧಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಜಾಲದಿಂದಾಗಿ ಕನಿಷ್ಠ 25 ಮಂದಿ ಮೂತ್ರಪಿಂಡಗಳನ್ನು ಅಕ್ರಮವಾಗಿ ಮಾರಾಟ ಮಾಡಿಕೊಂಡಿರುವುದು ಆಘಾತಕಾರಿ. ಈ ಹಿಂದೆಯೂ, ರಾಜ್ಯದಲ್ಲಿ 1995ರಲ್ಲಿ ಮೊದಲ ಬಾರಿಗೆ ಮೂತ್ರಪಿಂಡ ಅಕ್ರಮ ಮಾರಾಟ ಜಾಲದ ಹಗರಣ ಭಾರಿ ಸುದ್ದಿ ಮಾಡಿತ್ತು. ಭಾರತೀಯ ದಂಡ ಸಂಹಿತೆ ಅನ್ವಯ, ಈ ಪ್ರಕರಣದಲ್ಲಿ ಆರೋಪಗಳನ್ನು ಹೊರಿಸಲಾಗಿತ್ತು. ಆದರೆ ಆರೋಪಗಳನ್ನು ಸಾಬೀತುಪಡಿಸಲಾಗದ ಕಾರಣ, 2012ರ ಜನವರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನೂ ರಾಜ್ಯ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಆದರೆ ಈಗ ಪರಿಸ್ಥಿತಿ ಬೇರೆ ಇದೆ. 1994ರ ಮಾನವ ಅಂಗಾಂಗ ಕಸಿ ಕಾಯಿದೆಯ ಬಲ ಪೊಲೀಸರಿಗಿದೆ. ಮಾನವ ಅಂಗಾಂಗಗಳ ಖರೀದಿ ಹಾಗೂ ಮಾರಾಟವನ್ನು ಅಕ್ರಮ ಎಂದು ಈ ಕಾಯಿದೆ ಹೇಳುತ್ತದೆ. ಆದರೆ ಅಂಗಾಂಗ ಕಸಿಗೆಂದು, ಅಂಗಾಂಗ ದಾನ ಮಾಡಲು ರೋಗಿಯ ರಕ್ತಸಂಬಂಧಿಗಳಿಗೆ ಅವಕಾಶವಿದೆ. ಹಾಗೆಯೇ ರೋಗಿ ಬಗೆಗಿರುವ ಪ್ರೀತಿಯಿಂದ ದಾನ ಮಾಡಲು ಬಯಸುವಂತಹವರಿಗೂ ಈ ಕಾನೂನಿನಲ್ಲಿ ಅವಕಾಶವಿದೆ. ಆದರೆ ಇಂತಹವರ ಪ್ರಾಮಾಣಿಕತೆಯನ್ನು ನಿರ್ಣಯಿಸುವುದಾದರೂ ಹೇಗೆ? ಕಾನೂನಿನ್ಲ್ಲಲಿರುವ ಈ ದೋಷವನ್ನೇ ಚೆನ್ನಾಗಿ ಬಳಸಿಕೊಳ್ಳಲು ಮೂತ್ರಪಿಂಡ ವ್ಯಾಪಾರದಲ್ಲಿ ನಿರತರಾಗಿರುವವರಿಗೆ ಒಳ್ಳೆಯ ಅವಕಾಶವಾಗಿದೆ. ಆದರೆ 2011ರಲ್ಲಿ ಈ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಈ ಪ್ರಕಾರ, ಅಂಗಾಂಗ ದಾನಕ್ಕೆ ಸುಳ್ಳು ದಾಖಲಾತಿ ನೀಡುವವರಿಗೆ ಐದು ವರ್ಷಗಳಿಂದ ಹತ್ತು ವರ್ಷಗಳವರೆಗೆ ಸೆರೆವಾಸ ಹಾಗೂ 20 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ. ಈ ಹಿಂದೆ ಇದ್ದ ಶಿಕ್ಷೆಯ ಪ್ರಮಾಣ 2ರಿಂದ 5 ವರ್ಷ ಸೆರೆವಾಸ ಹಾಗೂ ರೂ10 ಸಾವಿರದಿಂದ 20 ಸಾವಿರ ರೂಪಾಯಿವರೆಗೆ ದಂಡ. ಆದರೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡುವಂತಹ ಈ ತಿದ್ದುಪಡಿಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಇನ್ನೂ ಹೊರಡಿಸಿಲ್ಲ ಎಂಬುದು ಅಕ್ಷಮ್ಯ. ಬಡತನದಿಂದಾಗಿ ಮೂತ್ರಪಿಂಡ ಮಾರಾಟಕ್ಕೆ ಸಿದ್ಧವಿರುವವರು ಹಾಗೂ ಹಣ ನೀಡಲು ತಯಾರಿರುವ ಶ್ರೀಮಂತ ರೋಗಿಗಳಿಂದಾಗಿ ಅಕ್ರಮ ಮೂತ್ರಪಿಂಡ ಮಾರಾಟ ಜಾಲಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಪಿಡುಗಿಗೆ ಪರಿಹಾರವನ್ನು ಕಂಡುಕೊಳ್ಳಲು ಇರುವ ಪರ್ಯಾಯ ವಿಧಾನ ಎಂದರೆ ಮೃತದೇಹಗಳಿಂದ ಅಂಗಾಂಗ ವರ್ಗಾವಣೆ. ಮಿದುಳು ನಿಷ್ಕ್ರಿಯವಾಗಿರುವ ರೋಗಿಗಳ ಅಂಗಾಂಗಗಳ ಕಸಿ, ಲಭ್ಯವಿರುವ ಮತ್ತೊಂದು ಅವಕಾಶ. ತಮ್ಮ ಪ್ರೀತಿಪಾತ್ರರ ಅಂಗಾಂಗ ದಾನಕ್ಕೆ ಅವಕಾಶ ನೀಡಲು ಭಾವನೆಗಳು ಹಾಗೂ ಧಾರ್ಮಿಕ ನಂಬಿಕೆಗಳು ಅಡ್ಡಿಯಾಗಬಹುದು. ಆದರೆ ಇದು ಸಾಯುವ ಸ್ಥಿತಿಯಲ್ಲಿರುವ ರೋಗಿಗಳಿಗೆ ಹೊಸಬಾಳು ನೀಡುತ್ತದೆಂಬ ಪ್ರಚಾರ ಜನರ ಮನ ಒಲಿಸುವಂತಾಗಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮೃತದೇಹ ದಾನ ಬಹಳ ಜನಪ್ರಿಯವಾಗಿದೆ. ದೇಹದಾನದಿಂದಲೇ ಆ ದೇಶಗಳಲ್ಲಿ ಶೇ 70ರಿಂದ 80ರಷ್ಟು ಅಂಗಾಂಗ ಕಸಿ ಸಮಸ್ಯೆ ಪರಿಹಾರವಾಗುತ್ತದೆ ಎಂಬುದು ನಮಗೆ ಮಾದರಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.