ಅಪರಾಧಿಗಳ ಸ್ಪರ್ಧೆ ನಿಷೇಧಿಸಿ ರಾಜಕೀಯ ಮತ್ತು ಅಪರಾಧ ಪರಸ್ಪರ ಕೈಕೈ ಹಿಡಿದುಕೊಂಡು ದೇಶವನ್ನಾಳುತ್ತಿರುವ ಪರಿಸ್ಥಿತಿಯ ಬಗ್ಗೆ ಕಸಿವಿಸಿಗೊಂಡವರಿಗೆ ಒಂದು ಸಂತಸದ ಸುದ್ದಿ ಇದೆ. ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಹಾಗೂ ಗುರುತರ ಅಪರಾಧ ಮಾಡಿದ ಆಪಾದನೆ ಎದುರಿಸುತ್ತಿರುವ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ಚುನಾವಣಾ ಆಯೋಗ ಶಿಫಾರಸು ಮಾಡಿದೆ. ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಅವರು ಇದು ತತ್‌ಕ್ಷಣದಿಂದಲೇ ಜಾರಿಗೆ ಬರಬೇಕು ಎಂದು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಶಿಸಿದ್ದಾರೆ. ಇದು ಸ್ವಾಗತಾರ್ಹ ನಿರ್ಧಾರ. ಆದರೆ, ನಿರಾಶೆಯ ವಿಷಯವೆಂದರೆ 1998 ರಿಂದಲೂ ಚುನಾವಣಾ ಆಯೋಗ ಇಂತಹ ಸುಧಾರಣಾ ಶಿಫಾರಸುಗಳನ್ನು ಮಾಡುತ್ತಲೇ ಇದೆ. ರಾಜಕೀಯ ಮತ್ತು ಅಪರಾಧ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. 1998 ರ ನಂತರ ಬಂದ ನಾಲ್ಕೂ ಸರ್ಕಾರಗಳೂ ಚುನಾವಣಾ ಆಯೋಗ ಮಾಡಿದ ಶಿಫಾರಸುಗಳನ್ನು ಕಡೆಗಣಿಸಿರುವುದೇ ಇದಕ್ಕೆ ಸಾಕ್ಷಿ. ಏನೇ ಆಗಿರಲಿ ನಮ್ಮ ಕಾನೂನು ವ್ಯವಸ್ಥೆಯ ಕಣ್ಣಿಗೆ ಮಣ್ಣೆರೆಚಿ, ಸಂಸತ್ ಮತ್ತು ವಿಧಾನಸಭೆಗಳಿಗೆ ಪ್ರವೇಶಿಸುವವರಲ್ಲಿ ಹಲವರು ದೊಂಬಿ, ಕೊಲೆ, ಅತ್ಯಾಚಾರ ಮಾಡಿದ ಹಿನ್ನೆಲೆಯವರಿದ್ದಾರೆ ಎನ್ನವುದು ದುರದೃಷ್ಟಕರ. ಇಂತಹ ಪ್ರಶ್ನೆ ಬಂದಾಗಲೆಲ್ಲಾ ಪಕ್ಷಗಳು ಪರಸ್ಪರರನ್ನು ದೂಷಿಸುವ ಕೆಲಸವನ್ನು ಮಾಡುತ್ತವೆ. ಈ ವಿಷಯದಲ್ಲಿ ಯಾವ ಪಕ್ಷವೂ ಪರಿಶುದ್ಧವಾಗಿಲ್ಲ. ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಷಯ ಬಂದಾಗ ಎಲ್ಲ ಪಕ್ಷಗಳು ಒಬ್ಬರನ್ನೊಬ್ಬರು ಮೀರಿಸುವಂತೆ ಅಪರಾಧ ಹಿನ್ನೆಲೆಯಿರುವ ವ್ಯಕ್ತಿಗಳನ್ನು ಪಕ್ಷದ ವತಿಯಿಂದ ಯಾವುದೇ ಸಂಕೋಚವಿಲ್ಲದೆ ಕಣಕ್ಕಿಳಿಸುತ್ತವೆ. ಕಟುಕನೊಬ್ಬನನ್ನು ನಿಲ್ಲಿಸುತ್ತಿದ್ದೇವಲ್ಲಾ ಎನ್ನುವ ಕನಿಷ್ಠ ನಾಚಿಕೆಯೂ ಪಕ್ಷಗಳಲ್ಲಿಲ್ಲ .545 ಸದಸ್ಯ ಬಲದ ಲೋಕಸಭೆಯಲ್ಲಿ ಅಪರಾಧ ಆರೋಪಗಳಿರುವ 162 ಸದಸ್ಯರಿದ್ದಾರೆ. ಕಳೆದ ವರ್ಷ ಚುನಾವಣೆ ನಡೆದ ಉತ್ತರಪ್ರದೇಶದಲ್ಲಿ ಗೆದ್ದ ಅಭ್ಯರ್ಥಿಗಳ ಪೈಕಿ ಅಪರಾಧ ಹಿನ್ನೆಲೆಯುಳ್ಳವರು ಶೇ.35 ರಷ್ಟಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು, ಕಾನೂನು ಮುರಿದವರೇ ಕಾನೂನು ರಚಿಸುವ ಸದನದಲ್ಲಿ ಇರುವುದು ನಮ್ಮ ಶಾಸಕಾಂಗ ವ್ಯವಸ್ಥೆಯ ಕ್ರೂರ ವ್ಯಂಗ್ಯ. ಆದುದರಿಂದ ಈಗಿರುವ ಸಂಬಂಧಿಸಿದ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವುದು ಇಂದಿನ ತುರ್ತು ಅಗತ್ಯ. ಗಂಭೀರವಾದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವವರು, ಶಿಕ್ಷೆಗೆ ಗುರಿಯಾದವರು ಸಂಸತ್ ಮತ್ತು ಶಾಸನಸಭೆಗಳನ್ನು ಪ್ರವೇಶಿಸಿದರೆ ಅಂತಹವರ ಕ್ರಿಮಿನಲ್ ಚಟುವಟಿಕೆಗಳಿಗೆ ಮುಕ್ತ ಪರವಾನಗಿ ನೀಡಿದಂತೆಯೇ. ಕಾನೂನು ರೂಪಿಸುವ ಸ್ಥಳದಲ್ಲಿ ಕಾನೂನು ಭಂಗ ಮಾಡಿದವರನ್ನು ಕೂರಿಸಿದರೆ ಅವರಿಂದ ನ್ಯಾಯ ಹೇಗೆ ಸಿಗಲು ಸಾಧ್ಯ? ಕುರಿ ಕಾಯಲು ತೋಳನನ್ನು ನೇಮಿಸಿದಂತಾಗುತ್ತದೆ. ಹಣ,ಜಾತಿ ತೋಳ್ಬಲಗಳಿಂದ ಆಯ್ಕೆಗೊಳ್ಳುವ ಇಂತಹವರು ತಮ್ಮ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಸತ್ ವ್ಯವಸ್ಥೆಯನ್ನೇ ಮತ್ತಷ್ಟು ದುರುಪಯೋಗ ಮಾಡಿಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ. ಇದು ಅವರು ತನಿಖೆಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ತಾಣಗಳಾಗುವ ಸಂಭವವಿದೆ. ಇಂತಹ ಕ್ರಿಮಿನಲ್ ವ್ಯಕ್ತಿಗಳನ್ನು ಚುನಾವಣೆಗಳಿಂದ ದೂರ ಇಡಲು ಕಾಯ್ದೆಯ ಬೆಂಬಲ ಬೇಕು. ಅಂತಹ ಹಿನ್ನೆಲೆಯ ವ್ಯಕ್ತಿಗಳನ್ನು ಮತದಾರರು ಕೂಡ ತಿರಸ್ಕರಿಸಬೇಕು.ಇಲ್ಲದಿದ್ದರೆ ಚುನಾವಣಾ ಆಯೋಗದ ಶಿಫಾರಸು ಅರಣ್ಯರೋದನವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.