ತರಾತುರಿ ನಿರ್ಧಾರ ಏಕೆ? ಈ ಸರ್ಕಾರಕ್ಕೆ ಏನಾಗಿದೆ ಎಂದೇ ಅರ್ಥವಾಗುತ್ತಿಲ್ಲ. ಒಂದು ಕಾಲದಲ್ಲಿ ರಾಜ್ಯಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿದ್ದ ಉನ್ನತ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡಲು ಹೊರಟಿರುವುದರ ಮರ್ಮ ತಿಳಿಯುತ್ತಿಲ್ಲ. ಏಕೆಂದರೆ ಈಗ ಅದರ ವಕ್ರದೃಷ್ಟಿ ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ. ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಕುಲಪತಿಗಳ ಅಧಿಕಾರಾವಧಿಯನ್ನು 5 ವರ್ಷಕ್ಕೆ (ಈಗಿರುವುದು 4 ವರ್ಷ) ಮತ್ತು ನಿವೃತ್ತಿಯ ವಯೋಮಿತಿಯನ್ನು 70 ವರ್ಷಕ್ಕೆ ಹೆಚ್ಚಿಸಲು ಅದು ಎಲ್ಲಿಲ್ಲದ ತರಾತುರಿ ತೋರಿಸುತ್ತಿದೆ. ಅದಕ್ಕಾಗಿ ಕಾನೂನನ್ನೇ ತಿದ್ದಲು ಮುಂದಾಗಿದ್ದು, ಸುಗ್ರೀವಾಜ್ಞೆ ತರುವ ಹುನ್ನಾರದಲ್ಲಿದೆ. ಸದ್ಯದಲ್ಲಿಯೇ ಅಧಿಕಾರದ ಅವಧಿ ಮುಕ್ತಾಯಗೊಳ್ಳಲಿರುವ ಕೆಲ ಕುಲಪತಿಗಳಿಗೆ ಅನುಕೂಲ ಮಾಡಿಕೊಡುವ ತಂತ್ರಗಾರಿಕೆ ಇದರ ಹಿಂದೆ ಎದ್ದು ಕಾಣುತ್ತಿದೆ. ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು, ಇಲಾಖೆಯ ಕೆಲ ಅಧಿಕಾರಿಗಳು ಮತ್ತು ಅವಧಿ ವಿಸ್ತರಣೆಯಾದರೆ ಲಾಭ ಪಡೆಯಲಿರುವ ಕೆಲ `ಫಲಾನುಭವಿ' ಕುಲಪತಿಗಳೆಲ್ಲ ಇದಕ್ಕೆ ಕೈಜೋಡಿಸಿದ್ದಾರೆ ಎಂಬ ವರದಿಯಂತೂ ಆಘಾತಕಾರಿ. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬಂದ ಇಬ್ಬರು `ಮಹಾನುಭಾವರನ್ನು' ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿ ನೇಮಿಸಿದ್ದು ಮಾತ್ರವಲ್ಲದೇ ಅವರ ಹಿತಕಾಯಲು ಕಾನೂನನ್ನೇ ತಿದ್ದಲು ಹೋಗಿ ವಿಧಾನಮಂಡಲದಲ್ಲಿ ಮುಖಭಂಗ ಅನುಭವಿಸಿದ್ದರೂ ಸರ್ಕಾರ ಪಾಠ ಕಲಿತಂತೆ ಕಾಣುತ್ತಿಲ್ಲ. ಸುಗ್ರೀವಾಜ್ಞೆಯೇನಾದರೂ ಹೊರ ಬಿದ್ದಲ್ಲಿ ಬಿಜೆಪಿ ಸರ್ಕಾರದಿಂದ ನೇಮಕಗೊಂಡ ತುಮಕೂರು, ವಿಶ್ವೇಶ್ವರಯ್ಯ ತಾಂತ್ರಿಕ, ಕಿತ್ತೂರು ರಾಣಿ ಚೆನ್ನಮ್ಮ , ಕೃಷ್ಣದೇವರಾಯ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಅನುಕೂಲವಾಗಲಿದೆ. ಅಷ್ಟಕ್ಕೂ ಇಂಥ ಕ್ರಮದ ಅಗತ್ಯವಾಗಲೀ, ಇದಕ್ಕೊಂದು ಸ್ಪಷ್ಟ ಮಾನದಂಡವಾಗಲಿ ಕಾಣುತ್ತಿಲ್ಲ. ಈಗಾಗಲೇ ಕುಲಪತಿ ಹುದ್ದೆಗಳು `ಜಾತಿ, ಪ್ರಭಾವ, ಹಣ, ಅಧಿಕಾರದ' ವಿಷವರ್ತುಲದಲ್ಲಿ ಸಿಕ್ಕು ಗೌರವವನ್ನು ಕಳೆದುಕೊಳ್ಳುತ್ತಿವೆ. ರಾಜಕಾರಣಿಗಳಿಗೆ ದುಂಬಾಲು ಬೀಳುವವರು, ಲಾಬಿ ಮಾಡುವವರು, ಪುಢಾರಿಗಳ ಹಿಂಬಾಲಕರುಗಳು ಕುಲಪತಿ ಹ್ದ್ದುದೆಗಳಿಗೇರಿದ ಅನೇಕ ಉದಾಹರಣೆಗಳಿವೆ. ಹೀಗಾಗಿ ಇದು ರಾಜಕೀಯ ನೇಮಕಾತಿ ರೂಪ ಪಡೆದುಕೊಳ್ಳುತ್ತಿದೆ. ಇದರ ಹಿಂದೆ ಶೈಕ್ಷಣಿಕ, ಆಡಳಿತಾತ್ಮಕ ಮಾನದಂಡ ಕಾಣಿಸುತ್ತಿಲ್ಲ. ಕೆಲವರಂತೂ ಭ್ರಷ್ಟಾಚಾರದ ಕೊಳಕು ಮೈಗೆ ಅಂಟಿಸಿಕೊಂಡಿದ್ದಾರೆ. ಕಾನೂನಿನಲ್ಲಿ ಇರುವ ಸಣ್ಣಪುಟ್ಟ ಲೋಪಗಳನ್ನು ಬಳಸಿಕೊಂಡು `ತಮಗೆ ಬೇಕಾದವರಿಗೆ' ಒಂದು ವಿಶ್ವವಿದ್ಯಾಲಯದ ಅಧಿಕಾರ ಮುಗಿಯುತ್ತಿದ್ದಂತೆ ಮತ್ತೊಂದು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ `ದಯಪಾಲಿಸಿದ' ನಿರ್ಲಜ್ಜ ಉದಾಹರಣೆ ಈಚೆಗೆ ನಡೆದಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ಅಧಿಕಾರಾವಧಿ 5 ವರ್ಷ, ನಿವೃತ್ತಿ ವಯೋಮಿತಿ 70 ವರ್ಷ; ಅದನ್ನೇ ರಾಜ್ಯದಲ್ಲೂ ಅನುಸರಿಸುವುದಾಗಿ ಸರ್ಕಾರ ಸಮರ್ಥನೆ ಮಾಡಿಕೊಳ್ಳಬಹುದು. ಆದರೆ ಇತ್ತೀಚೆಗೆ ಅದು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಧಾರಾಳವಾಗಿ ಅನುಮತಿ ಕೊಡುತ್ತಿದೆ. ಅವನ್ನು ಬಲಗೊಳಿಸಿ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಶಕ್ತಿಹೀನಗೊಳಿಸುವ ತಂತ್ರವಾಗಿ ಕುಲಪತಿ ಹುದ್ದೆಗಳ ಘನತೆ, ಗೌರವ ಹರಾಜು ಹಾಕುತ್ತಿದೆ ಎಂಬ ಶಂಕೆ ಮೂಡುತ್ತಿದೆ. ಅದನ್ನು ನಿರಾಕರಿಸಲು ಸರ್ಕಾರದ ಬತ್ತಳಿಕೆಯಲ್ಲಿ ಏನಾದರೂ ಬಾಣ ಇದೆಯೇ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.