ಪೋಲಿಯೊ ನಿರ್ಮೂಲನೆಯತ್ತ... ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಯಾವುದೇ ಪೋಲಿಯೊ ಪ್ರಕರಣಗಳು ವರದಿಯಾಗಿಲ್ಲ. ಇದೇನೂ ಕಡಿಮೆ ಸಾಧನೆಯಲ್ಲ. ಪೋಲಿಯೊ ಸೋಂಕಿನ ವಿರುದ್ಧ ಭಾರತದ ಈ ವಿಜಯ, ಇತ್ತೀಚಿನ ದಶಕಗಳಲ್ಲಿ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದ ಯಶೋಗಾಥೆ ಎಂದು ಜಾಗತಿಕವಾಗಿ ಪರಿಗಣಿಸಲಾಗುತ್ತಿದೆ. 2011ರ ಜನವರಿ 13ರಂದು ಪಶ್ಚಿಮ ಬಂಗಾಳದ ಹೌರಾದಲ್ಲಿ ಕಾಣಿಸಿಕೊಂಡ ಪೋಲಿಯೊ ಪ್ರಕರಣ ಭಾರತದಲ್ಲಿ ಕಟ್ಟಕಡೆಯದು. ನಂತರ 2012ರ ಫೆಬ್ರುವರಿಯಲ್ಲಿ ಪೋಲಿಯೊ ಸೋಂಕಿರುವ ರಾಷ್ಟ್ರಗಳ ಪಟ್ಟಿಯಿಂದ ಭಾರತವನ್ನು ವಿಶ್ವ ಆರೋಗ್ಯ ಸಂಸ್ಥೆ ತೆಗೆದುಹಾಕಿತ್ತು. ಬಾಯಿಗೆ ಹಾಕುವ ಪೋಲಿಯೊ ಲಸಿಕೆಯಿಂದ ಸೋಂಕು ರಕ್ಷಣೆ ಕಾರ್ಯಕ್ರಮ 1978ರಲ್ಲಿ ಆರಂಭವಾಗುವ ಮುಂಚೆ ರಾಷ್ಟ್ರದಲ್ಲಿ ಪ್ರತಿ ದಿನ ಸುಮಾರು 500 ಮಕ್ಕಳು ಪೋಲಿಯೊದಿಂದ ಅಂಗವಿಕಲರಾಗುತ್ತಿದ್ದರು. ಈ ರಾಷ್ಟ್ರೀಯ ಸೋಂಕು ರಕ್ಷಣೆ ಕಾರ್ಯಕ್ರಮ ಆರಂಭವಾದ ನಂತರ ಪೋಲಿಯೊ ಪ್ರಕರಣಗಳು ಶೇಕಡ 80ರಷ್ಟು ಕಡಿಮೆಯಾದವು. 1995ರಲ್ಲಿ ಸಾಮೂಹಿಕ ಪೋಲಿಯೊ ಲಸಿಕೆ ಪ್ರಚಾರಾಂದೋಲನ ಆರಂಭವಾಯಿತು. ಈ ಕಾರ್ಯಕ್ರಮ ಆರಂಭವಾದ ನಂತರ ಸಂಪೂರ್ಣ ಪೋಲಿಯೊ ಮುಕ್ತ ರಾಷ್ಟ್ರವಾಗಲು ಭಾರತಕ್ಕೆ 16 ವರ್ಷಗಳು ಹಿಡಿದಿವೆ. ಪೋಲಿಯೊ ವಿರುದ್ಧದ ಈ ಸಮರ ಸುದೀರ್ಘವಾದದ್ದು ಹಾಗೂ ಪ್ರಯಾಸಕರವಾದದ್ದು. ಭಾರತದಂತಹ ಬೃಹತ್ ಜನಸಂಖ್ಯೆಯ ರಾಷ್ಟ್ರವನ್ನು ಇಡಿಯಾಗಿ ತಲುಪುವುದೇನೂ ಸುಲಭದ ಮಾತಲ್ಲ. ನಗರಗಳು, ಗ್ರಾಮಗಳಲ್ಲದೆ ಬಗೆ ಬಗೆಯ ಭೂ ಪ್ರದೇಶಗಳು ನಮ್ಮಲ್ಲಿವೆ. ಕೂಲಿ ಅರಸಿ ಬೇರೆಬೇರೆ ಸ್ಥಳಗಳಿಗೆ ಹೋಗುವ ವಲಸಿಗ ಸಮುದಾಯಗಳಿವೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ನಂಬಿಕೆಗಳು, ಆಚರಣೆಗಳಲ್ಲಿ ಅಪಾರ ವ್ಯತ್ಯಾಸಗಳಿವೆ. ಪೋಲಿಯೊ ಹನಿ ಹಾಕಿಸಿದರೆ ಮಕ್ಕಳಿಗೆ ತೊಂದರೆಯಾಗಬಹುದು ಎಂಬಂಥ ಮೂಢನಂಬಿಕೆಗಳಿಗೂ ಕೊರತೆ ಇಲ್ಲ. ಜೊತೆಗೆ ಆರೋಗ್ಯ ಮೂಲ ಸೌಕರ್ಯಗಳೂ ಎಲ್ಲೆಡೆ ಇಲ್ಲ. ಇಷ್ಟೆಲ್ಲಾ ಪ್ರತಿಕೂಲ ಸನ್ನಿವೇಶಗಳಲ್ಲಿ ಎಲ್ಲಾ ಎಳೆ ಮಕ್ಕಳನ್ನು ಪೋಲಿಯೊ ಸೋಂಕಿನ ವಿರುದ್ಧದ ಕಾರ್ಯಕ್ರಮದಡಿ ತರುವುದು ಸವಾಲಿನ ಕೆಲಸವೆ. ಹೀಗಿದ್ದೂ ಸರ್ಕಾರಗಳ ಬದ್ಧತೆ, ಸ್ಥಳೀಯ ನಾಯಕತ್ವ ಹಾಗೂ ಸಮುದಾಯಗಳ ಭಾಗವಹಿಸುವಿಕೆಯಿಂದ ಪೋಲಿಯೊ ನಿರ್ಮೂಲನೆಯ ಕಾರ್ಯಕ್ರಮದಲ್ಲಿ ಯಶಸ್ಸು ಸಾಧಿಸುವುದು ಸಾಧ್ಯವಾಗಿದೆ. ಸಾರ್ವಜನಿಕ ಆರೋಗ್ಯ ಕುರಿತಾದ ಈ ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಓ), ಯೂನಿಸೆಫ್ ಹಾಗೂ ರೋಟರಿ ಮತ್ತಿತರ ಸಂಘಸಂಸ್ಥೆಗಳು ಮೌಲಿಕ ಕೊಡುಗೆ ನೀಡಿವೆ. ಪೋಲಿಯೊ ಲಸಿಕೆ ಕುರಿತಂತೆ ಜನಸಾಮಾನ್ಯರಲ್ಲಿನ ಆತಂಕಗಳು, ಮೂಢನಂಬಿಕೆಗಳ ನಿವಾರಣೆಗೆ ಭಾರತದ ಪ್ರಸಿದ್ಧ ವ್ಯಕ್ತಿಗಳನ್ನು ಪ್ರಚಾರ ರಾಯಭಾರಿಗಳಾಗಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೂ ಈ ಕಾರ್ಯಕ್ರಮದ ವಿಶೇಷ. ರಾಷ್ಟ್ರದ ಮೂಲೆಮೂಲೆಗಳಲ್ಲಿರುವ ಮಕ್ಕಳನ್ನು ತಲುಪುವಲ್ಲಿ ಸುಮಾರು 23 ಲಕ್ಷ ಸ್ವಯಂಸೇವಕರ ಪಾತ್ರ ಮಹತ್ವದ್ದು. ಈ ಯಶಸ್ಸಿನ ಸಾಧನೆಯ ನಡುವೆಯೇ ರಾಷ್ಟ್ರದೊಳಗೆ ಸೋಂಕು ಮರಳಬಹುದಾದ ಬೆದರಿಕೆಯೇನೂ ತಪ್ಪಿಲ್ಲ. ನಮ್ಮ ನೆರೆ ರಾಷ್ಟ್ರಗಳಿನ್ನೂ ಪೋಲಿಯೊ ಮುಕ್ತವಾಗಿಲ್ಲ ಎಂಬುದು ನಮ್ಮ ನೆನಪಲ್ಲಿರಬೇಕು. ಹೀಗಾಗಿ ಸೋಂಕು ಮರಳಬಹುದಾದ ಅಪಾಯ ಇದ್ದೇ ಇದೆ. ಇಂತಹ ಸಂದರ್ಭಗಳನ್ನು ನಿಭಾಯಿಸುವ ತುರ್ತು ಸನ್ನದ್ಧತೆ ನಮ್ಮಲ್ಲಿರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.