ಲೋಕಾಯುಕ್ತರ ನೇಮಕ ಆಗಲಿ ಕರ್ನಾಟಕದಲ್ಲಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ನೇಮಕ ಇನ್ನು ತಡ ಆಗಬಾರದು. ಈಗಾಗಲೇ ಈ ಹುದ್ದೆಗಳು ಖಾಲಿ ಉಳಿದು ವರ್ಷ ಕಳೆದುಹೋಗಿದೆ. ರಾಜ್ಯದಲ್ಲಿ ಹಲವು ರಾಜಕೀಯ ಪ್ರಮುಖರು ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಸಮಯದಲ್ಲಿ ಲೋಕಾಯುಕ್ತರನ್ನು ಕೂಡಲೇ ನೇಮಿಸುವುದು ಸೂಕ್ತವಾಗುತ್ತದೆ. ರಾಜ್ಯ ಸರ್ಕಾರ ಚಂದ್ರಶೇಖರಯ್ಯ ಅವರನ್ನು ಉಪಲೋಕಾಯುಕ್ತರನ್ನಾಗಿ ನೇಮಿಸಿದ್ದ ನಿರ್ಧಾರವನ್ನು ಕಳೆದ ವಾರ ಅನೂರ್ಜಿತಗೊಳಿಸಿದ ಸುಪ್ರೀಂ ಕೋರ್ಟ್, ಸಂವಿಧಾನಾತ್ಮಕ ಹುದ್ದೆಗಳ ಸ್ಥಾಪನೆಯಲ್ಲಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ನೇಮಕ ಮಾಡಲು ಮುಖ್ಯಮಂತ್ರಿಗೆ ಪರಮಾಧಿಕಾರ ಇದೆ ಎಂದು ಹೇಳಿದೆ. ಚಂದ್ರಶೇಖರಯ್ಯ ಅವರ ನೇಮಕ ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆಯಾದರೂ, ಇಂಥ ಅರೆ ನ್ಯಾಯಾಂಗ ಹುದ್ದೆಗಳ ಆಯ್ಕೆಗೆ ಸಂಬಂಧಪಟ್ಟಂತೆ ಹೈಕೋರ್ಟ್ ರೂಪಿಸಿರುವ ಹೊಸ ಮಾರ್ಗದರ್ಶಿ ಸೂತ್ರಗಳಲ್ಲಿ ದೋಷಗಳಿವೆ ಎಂದೂ ಹೇಳಿದೆ. ಲೋಕಾಯುಕ್ತರ ನೇಮಕದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಅಭಿಪ್ರಾಯವೇ ಪ್ರಮುಖವಾಗಬೇಕು ಎಂಬ ಹೈಕೋರ್ಟ್ ನಿರ್ದೇಶನ `ಲೋಕಾಯುಕ್ತ ಕಾಯಿದೆ'ಯ ವ್ಯಾಪ್ತಿಯನ್ನು ಮೀರಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಸಂವಿಧಾನಾತ್ಮಕ ಅಧಿಕಾರ ಇರುವ ಮುಖ್ಯ ನ್ಯಾಯಾಧೀಶ, ವಿಧಾನಸಭಾಧ್ಯಕ್ಷರು, ವಿಧಾನ ಪರಿಷತ್ ಅಧ್ಯಕ್ಷರು ಹಾಗೂ ವಿಧಾನಸಭೆ ಹಾಗೂ ಪರಿಷತ್‌ಗಳ ಪ್ರತಿಪಕ್ಷಗಳ ನಾಯಕರುಗಳ ಜೊತೆ ಚರ್ಚಿಸಿದ ನಂತರ, ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ನೇಮಕಕ್ಕೆ ಹೆಸರನ್ನು ಅಂತಿಮಗೊಳಿಸುವ ಅಧಿಕಾರ ಕರ್ನಾಟಕ ಲೋಕಾಯುಕ್ತ ಕಾಯಿದೆ ಪ್ರಕಾರ ಮುಖ್ಯಮಂತ್ರಿಗಳಿಗೆ ಇದೆ. ಆದರೆ ಮುಖ್ಯ ನ್ಯಾಯಾಧೀಶರಿಗೇ ಹೆಸರು ಅಂತಿಮಗೊಳಿಸುವ ಅಧಿಕಾರ ಇರಬೇಕು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸಲಹೆ ನೀಡಿತ್ತು. ರಾಜ್ಯ ಸರ್ಕಾರ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಮುಖ್ಯ ನ್ಯಾಯಾಧೀಶರೂ ಇತರ ಸಮಾಲೋಚಕರಂತೆಯೇ ಒಬ್ಬರಾಗಿದ್ದು, ಅವರ ಸಲಹೆಯನ್ನು ಪರಿಶೀಲಿಸಬಹುದಾದರೂ ಅಂತಿಮ ನಿರ್ಧಾರದ ಅಧಿಕಾರ ಮುಖ್ಯಮಂತ್ರಿಗೇ ಇದೆ ಎಂದು ಸುಪ್ರೀಂ ಕೋರ್ಟ್ ಈಗ ಸ್ಪಷ್ಟಪಡಿಸಿದೆ. ಆದರೆ, ಮಾಜಿ ಮುಖ್ಯಮಂತ್ರಿಯೂ ಸೇರಿ ಹಲವು ರಾಜಕೀಯ ಪ್ರಮುಖರು ಭ್ರಷ್ಟಾಚಾರ ಆರೋಪಗಳಲ್ಲಿ ಸಿಲುಕಿರುವ ಪ್ರಸಕ್ತ ಸನ್ನಿವೇಶದಲ್ಲಿ, ಈ ಕಾನೂನು ಸಮರದಿಂದಾಗಿ ಲೋಕಾಯುಕ್ತರ ಅನುಪಸ್ಥಿತಿ ಎದ್ದು ಕಾಣಿಸುತ್ತಿದೆ. ಈಗ ಕಾನೂನು ಸಮಸ್ಯೆ ಬಗೆಹರಿದಿರುವುದರಿಂದ ಜಗದೀಶ ಶೆಟ್ಟರ ಸರ್ಕಾರ ಕಾಲಹರಣ ಮಾಡದೇ, ಅರ್ಹ ವ್ಯಕ್ತಿಗಳನ್ನು ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಹುದ್ದೆಗೆ ನೇಮಕ ಮಾಡಬೇಕು. ಆದರೆ ಈ ಹುದ್ದೆಗಳ ನೇಮಕ ವಿಚಾರದಲ್ಲಿ ಹೆಚ್ಚಿನ ಸ್ಪಷ್ಟತೆ ಬೇಕು. ಏಕೆಂದರೆ ಗುಜರಾತ್ ಮುಖ್ಯಮಂತ್ರಿಯ ಅಭಿಪ್ರಾಯವನ್ನು ಕಡೆಗಣಿಸಿ ಗುಜರಾತ್ ರಾಜ್ಯಪಾಲರು, ಮುಖ್ಯ ನ್ಯಾಯಾಧೀಶರ ಶಿಫಾರಸಿನಂತೆ ಲೋಕಾಯುಕ್ತರನ್ನು ನೇಮಿಸಿದ್ದನ್ನು ಸುಪ್ರೀಂ ಕೋರ್ಟ್‌ನ ಇನ್ನೊಂದು ಪೀಠ ಊರ್ಜಿತಗೊಳಿಸಿದೆ. ಇಂತಹ ಅಸಂಗತತೆಯನ್ನು ಲೋಕಪಾಲ್ ಹಾಗೂ ಲೋಕಾಯುಕ್ತ ಮಸೂದೆ ಪ್ರತಿಪಾದಿಸುವ ಸಮಗ್ರವಾದ ಕೇಂದ್ರೀಯ ಕಾನೂನು ಬಹುಶಃ ನಿವಾರಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.