ತಪ್ಪಿಗೆ ತಕ್ಕ ಶಿಕ್ಷೆ ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ಹನ್ನೆರಡು ವರ್ಷಗಳ ಹಿಂದೆ ಮಾಡಿದ ಅಕ್ರಮಗಳಿಗೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌತಾಲಾ (78) ಈಗ ಇಳಿವಯಸ್ಸಿನಲ್ಲಿ ಶಿಕ್ಷೆ ಅನುಭವಿಸಬೇಕಾಗಿದೆ. 1999-2000ರ ಅವಧಿಯಲ್ಲಿ ಚೌತಾಲಾ ಅವರು ಮುಖ್ಯಮಂತ್ರಿಯಾಗಿದ್ದಾಗ ಕಿರಿಯ ಶಾಲೆಗಳ 3.206 ಶಿಕ್ಷಕರನ್ನು ವಾಮಮಾರ್ಗದಲ್ಲಿ ನೇಮಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ, ಅವರ ಪುತ್ರ ಅಜಯ್ ಚೌತಾಲಾ ಸೇರಿದಂತೆ 53 ಮಂದಿ ಅಪರಾಧಿಗಳಾಗಿದ್ದಾರೆ. ಇವರಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಈ ಸಂಬಂಧ ಮಹತ್ವದ ತೀರ್ಪು ನೀಡಿರುವ ದೆಹಲಿ ಸಿಬಿಐ ನ್ಯಾಯಾಲಯ ಅವರನ್ನು ತಿಹಾರ್ ಜೈಲಿಗೆ ಅಟ್ಟಿದೆ. ಈ ತೀರ್ಪು ದೇಶದ ಉನ್ನತ ಸ್ಥಾನಗಳಲ್ಲಿನ ಭ್ರಷ್ಟಾಚಾರದ ವಿರುದ್ಧದ ಸಮರಕ್ಕೆ ಹೆಚ್ಚಿನ ಬಲ ನೀಡಿದೆ. ದೇಶದಲ್ಲಿ ಭ್ರಷ್ಟಾಚಾರ ಉನ್ನತಸ್ಥಾನಗಳಲ್ಲಿ ಮಡುಗಟ್ಟಿರುವ ದಿನಗಳಲ್ಲಿ , ಭ್ರಷ್ಟಾಚಾರದ ವಿರುದ್ಧದ ಸಮರಕ್ಕೆ ಧೈರ್ಯಕೊಡಲು ಇಂತಹ ತೀರ್ಪು ಸಹಕಾರಿ. ಅಕ್ರಮ ಮತ್ತು ಭ್ರಷ್ಟಾಚಾರಗಳಲ್ಲಿ ತೊಡಗಿರುವ ರಾಜಕಾರಣಿಗಳು ತಮ್ಮ ಅಧಿಕಾರಾವಧಿಯಲ್ಲಿ ತಮಗೆ ತೋಚಿದಂತೆ ಮೊಂಡುಧೈರ್ಯದಿಂದ ಅವ್ಯವಹಾರಗಳಲ್ಲಿ ತೊಡಗಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಇದು ಯಾವ ಪಕ್ಷದ ರಾಜಕಾರಣಿಗಳನ್ನೂ ಬಿಟ್ಟಿಲ್ಲ. ಅರವಿಂದ ಕೇಜ್ರಿವಾಲ್ ಅವರಂಥವರು ಭ್ರಷ್ಟಾಚಾರವನ್ನು ಬಯಲಿಗೆಳೆಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಆದರೂ ಅಧಿಕಾರದ ಬಲದಿಂದ ಅದನ್ನೂ ಅರಗಿಸಿಕೊಂಡ ಭಂಡ ರಾಜಕಾರಣಿಗಳು ನಮ್ಮ ನಡುವೆ ಇದ್ದಾರೆ. ಚೌತಾಲಾ ಮತ್ತು ಅವರ 53 ಮಂದಿ ಭ್ರಷ್ಟಕೂಟಕ್ಕೆ ಆಗಿರುವ ಶಿಕ್ಷೆ ಇತರ ರಾಜಕಾರಣಿಗಳಿಗೆ ಒಂದು ಪಾಠ. ಹರಿಯಾಣದಲ್ಲಿ ಶಿಕ್ಷಕರ ನೇಮಕಾತಿಗಾಗಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯೊಂದು ಶಿಕ್ಷಕರ ನಕಲಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿತ್ತು. ಸಿಬ್ಬಂದಿ ಆಯ್ಕೆ ಆಯೋಗದ ಗಮನಕ್ಕೇ ಬಾರದಂತೆ ಈ ಪಟ್ಟಿಗಳನ್ನು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ನೀಡಿ ನೇಮಕಾತಿ ಆದೇಶ ಹೊರಡಿಸಲಾಯಿತು.ಇದನ್ನು ಆಕ್ಷೇಪಿಸಿದ ಇಬ್ಬರು ಪ್ರಾಮಾಣಿಕ ಐಎಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಇಂಡಿಯನ್ ನ್ಯಾಷನಲ್ ಲೋಕದಳದ ಮುಖ್ಯಸ್ಥರೂ ಆಗಿರುವ ಓಂ ಪ್ರಕಾಶ್ ಚೌತಾಲ ಅವರ ಗಮನಕ್ಕೆ ಬಾರದೆ ಈ ಎಲ್ಲ ವ್ಯವಹಾರ ನಡೆದಿರಲಿಕ್ಕೆ ಸಾಧ್ಯವಿಲ್ಲ. ನಾಲ್ಕುಬಾರಿ ಮುಖ್ಯಮಂತ್ರಿಯಾಗಿದ್ದ ಹಿರಿಯ ನಾಯಕರಿಗೆ ಈ ವಿಷಯ ಗೊತ್ತಿರದೆ ಇರಲು ಸಾಧ್ಯವಿಲ್ಲ. ಈ ಬಗ್ಗೆ ಪ್ರಬಲ ಸಾಕ್ಷ್ಯಾಧಾರಗಳನ್ನು ಸಿಬಿಐ ಸಂಗ್ರಹಿಸಿದೆ. ಇಂತಹ ಅಕ್ರಮದ ಬಗ್ಗೆ ಆರೋಪಗಳು ಬಂದಾಗಲೂ ಮುಖ್ಯಮಂತ್ರಿಯಾಗಿ ಚೌತಾಲಾ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸಹಜವಾಗಿಯೇ ಈಗ ಈ ಬಂಧನಕ್ಕೆ ಕಾಂಗ್ರೆಸ್ ಪಕ್ಷವನ್ನು ದೂರಲಾಗುತ್ತಿದೆ. ಇಂತಹ ಶಿಕ್ಷೆಗಳು ಪ್ರಕಟವಾದಾಗ ಪರಸ್ಪರರನ್ನು ದೂಷಿಸುವುದು ರಾಜಕೀಯ ಗುಣ. ಚೌತಾಲಾ ಕೂಡ ಅದನ್ನೇ ಮಾಡಿದ್ದಾರೆ. ಆದರೆ ದೂರುವ ಮುನ್ನ ಸರ್ಕಾರದ ಕಾನೂನು ನಿಯಮಗಳನ್ನೆಲ್ಲಾ ಬದಿಗೊತ್ತಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡದ್ದು ನ್ಯಾಯಸಮ್ಮತವೇ ಎನ್ನುವ ಪ್ರಶ್ನೆಯನ್ನು ಅವರು ಕೇಳಿಕೊಳ್ಳಲಿ. ರಾಜಕಾರಣಿಗಳ ಇಂತಹ ಅಕ್ರಮಮಾರ್ಗಗಳಿಂದಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಬಲಿಪಶುವಾಗದೇ ಇರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.