ಅನಿವಾರ್ಯವಾದ ಕ್ರಮ ತರಂಗಾಂತರ ಹಂಚಿಕೆಯ ಹಗರಣ ಇನ್ನೊಬ್ಬ ಡಿಎಂಕೆ ಸಚಿವ ದಯಾನಿಧಿ ಮಾರನ್ ಸ್ಥಾನಕ್ಕೆ ಚ್ಯುತಿ ತಂದಿರುವುದು ನಿರೀಕ್ಷಿತ. ಮಾರನ್ ಹಿಂದಿನ ಯುಪಿಎ ಸರ್ಕಾರದಲ್ಲಿ ದೂರಸಂಪರ್ಕ ಖಾತೆ ನಿರ್ವಹಿಸುತ್ತಿದ್ದಾಗ ನಡೆಸಿದ ಭಾನಗಡಿಗೆ ಈಗ ಬೆಲೆ ತೆರಬೇಕಾಗಿ ಬಂದಿದೆ. ಸಮ್ಮಿಶ್ರ ಸರ್ಕಾರಕ್ಕೆ ಅವಶ್ಯಕವಿದ್ದ ಬೆಂಬಲ ನೀಡಿದ ಮಾತ್ರಕ್ಕೆ ಅಧಿಕಾರದ ಅಮಲು ಏರಿದವರಂತೆ ವರ್ತಿಸುತ್ತಿದ್ದ ಡಿಎಂಕೆ ಮುಖಂಡರಿಗೆ ಇನ್ನಾದರೂ ಅಧಿಕಾರ ದುರುಪಯೋಗದ ಪರಿಣಾಮಗಳು ಅರಿವಿಗೆ ಬರಬೇಕು. ಕೇಂದ್ರದಲ್ಲಿ ಸಿಕ್ಕಿದ ಅಧಿಕಾರವನ್ನು ಸ್ವಂತದ ವಾಣಿಜ್ಯ ವ್ಯವಹಾರಗಳಿಗೆ ಸಂಪೂರ್ಣ ದುರುಪಯೋಗ ಪಡಿಸಿಕೊಂಡ ಮಾರನ್, ಸಿಬಿಐ ತನಿಖೆ ಮುಂದುವರಿದಂತೆ ತನ್ನದೇ ಪಕ್ಷದ ಸಹೋದ್ಯೋಗಿ ಎ.ರಾಜಾನ ಜೊತೆಗೂಡುವುದು ಅಸಂಭವವೇನೂ ಅಲ್ಲ. ತಮ್ಮ ವಿರುದ್ಧ ಕೇಳಿಬರುತ್ತಿದ್ದ ಆರೋಪಗಳನ್ನೆಲ್ಲ ಮಾಧ್ಯಮಗಳ ಕಲ್ಪನೆ ಎಂದು ತುಚ್ಛವಾಗಿ ಕಾಣುತ್ತಿದ್ದ ಎ.ರಾಜಾ ಇದೀಗ ತಿಹಾರ್ ಜೈಲಿನಲ್ಲಿದ್ದು ವಿಚಾರಣೆಯ ದಿನಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರ ದುರುಪಯೋಗದ ಆರೋಪಗಳು ಪ್ರಕಟವಾದಾಗ ಮಾರನ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮಾಧ್ಯಮಗಳನ್ನು ಬೆದರಿಸುತ್ತಿದ್ದರು. ಭ್ರಷ್ಟಾಚಾರದಲ್ಲಿ ಭಾಗಿಯಾದ ತನ್ನ ಇಬ್ಬರು ನಿಕಟವರ್ತಿಗಳು ಸಚಿವಸ್ಥಾನ ಕಳೆದುಕೊಂಡರೂ, ಸ್ವಂತ ಮಗಳು, ಕನಿಮೊಳಿ, ಅದೇ ಹಗರಣದಲ್ಲಿ ಸಿಲುಕಿ ಜೈಲು ಸೇರಿದ್ದರೂ ಯುಪಿಎ ಮೈತ್ರಿಕೂಟವನ್ನು ತ್ಯಜಿಸುವ ಸ್ಥಿತಿಯಲ್ಲಿ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಇಲ್ಲ. ಈಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮಿಳುನಾಡು ಜನತೆ ಡಿಎಂಕೆ ಪಕ್ಷಕ್ಕೆ ಹೀನಾಯವಾದ ಸೋಲು ಉಣಿಸಿದ್ದಾರೆ. ಕೇವಲ 23 ಸ್ಥಾನಗಳನ್ನಷ್ಟೇ ನೀಡಿ ಅಧಿಕೃತ ವಿರೋಧ ಪಕ್ಷವಾಗುವ ಅರ್ಹತೆಯನ್ನೂ ನಿರಾಕರಿಸಿದ್ದಾರೆ. ಆದ್ದರಿಂದ ಕೇಂದ್ರದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯಿಂದ ಇರುವುದು ಅಸ್ತಿತ್ವ ಉಳಿಸಿಕೊಳ್ಳುವ ದೃಷ್ಟಿಯಿಂದ ಡಿಎಂಕೆ ಪಕ್ಷಕ್ಕೆ ಅನಿವಾರ್ಯವೇ ಆಗಿದೆ. ಸಮ್ಮಿಶ್ರ ಸರ್ಕಾರದ ಮೈತ್ರಿಧರ್ಮದ ನೆಪದಲ್ಲಿ ಬೊಕ್ಕಸದ ಲೂಟಿಗೆ ನೆಪವಾಗಿದ್ದ ತರಂಗಾಂತರ ಹಂಚಿಕೆಯ ಹಗರಣ ಯುಪಿಎ ಸರ್ಕಾರದ ಅವಧಿಗಷ್ಟೇ ಸೀಮಿತವಾದದ್ದಲ್ಲ. ದೂರಸಂಪರ್ಕ ಕ್ಷೇತ್ರದಲ್ಲಿ ಖಾಸಗಿಯವರಿಗೂ ಅವಕಾಶ ನೀಡಿದಂದಿನಿಂದ ಬೊಕ್ಕಸಕ್ಕೆ ಕನ್ನ ಕೊರೆಯಲಾಗಿದೆ. ಯುಪಿಎಗಿಂತಲೂ ಮೊದಲು ತರಂಗಾಂತರ ಹಂಚಿಕೆಯನ್ನು ಆರಂಭಿಸಿದ ಎನ್‌ಡಿಎ ಅವಧಿಯ ಆಡಳಿತಾತ್ಮಕ ನಿರ್ಧಾರಗಳೂ ತನಿಖೆಗೆ ಒಳಪಡಬೇಕಾಗಿದೆ. ಸುಪ್ರೀಂ ಕೋರ್ಟ್ ಕಣ್ಗಾವಲಿನಲ್ಲಿ ಸಿಬಿಐ ನಡೆಸುತ್ತಿರುವ ತರಂಗಾಂತರ ಹಂಚಿಕೆಯ ತನಿಖೆ ತ್ವರಿತವಾಗಿ ನಡೆದು ಆರೋಪಿಗಳು ಕಾನೂನು ಕ್ರಮಕ್ಕೆ ಒಳಪಡಬೇಕಾಗಿದೆ. ಅಷ್ಟೇ ಅಲ್ಲದೆ, ದೂರಸಂಪರ್ಕ ಸೇವೆಗೆ ಸಂಬಂಧಿಸಿದ ಒಪ್ಪಂದದ ಲೋಪಕ್ಕಾಗಿ ಖಾಸಗಿ ಸಂಸ್ಥೆಗಳಿಂದ ಸರ್ಕಾರಕ್ಕೆ ಬರಬೇಕಿದ್ದ ದಂಡದ ಹಣಕ್ಕೆ ಸಚಿವರ ವಿವೇಚನಾ ಅಧಿಕಾರದ ಬಳಕೆಯ ನೆಪದಲ್ಲಿ ರಿಯಾಯಿತಿ ನೀಡಿದ ಸಂದರ್ಭಗಳು ಕೂಡ ತನಿಖೆಯ ವ್ಯಾಪ್ತಿಗೆ ಬರಬೇಕಿದೆ. ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವುದರ ಜೊತೆಗೆ ಸರ್ಕಾರಕ್ಕೆ ಸಲ್ಲಬೇಕಾದ ಹಣವನ್ನು ಪತ್ತೆ ಮಾಡಿ ಮುಟ್ಟುಗೋಲು ಹಾಕಿಕೊಳ್ಳುವ ದಿಟ್ಟ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳದಿದ್ದರೆ ಸಿಬಿಐ ತನಿಖೆಯ ಶ್ರಮ ವ್ಯರ್ಥವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.