ವಿವಾಹ ನೋಂದಣಿ ಕಡ್ಡಾಯವಾಗಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹಗಳ ಪ್ರಮಾಣ ಆತಂಕಕಾರಿಯಾದುದು. ಶೇ 22ರಷ್ಟು ಹೆಣ್ಣು ಮಕ್ಕಳು 18 ತುಂಬುವ ಮೊದಲೇ ವಿವಾಹ ಬಂಧನಕ್ಕೆ ಸಿಲುಕುತ್ತಿದ್ದಾರೆ. ಇಂತಹ ವಿವಾಹಗಳ ನಿಯಂತ್ರಣಕ್ಕೆ ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸಬೇಕೆಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ನೇತೃತ್ವದ ಉನ್ನತ ಮಟ್ಟದ ಸಮಿತಿ ರಾಜ್ಯ ಸರ್ಕಾರಕ್ಕೆ ಮಾಡಿರುವ ಶಿಫಾರಸು ಸ್ವಾಗತಾರ್ಹ. ವಿವಾಹ ನಡೆದ 30ದಿನಗಳ ಒಳಗೆ ವಿವಾಹವನ್ನು ನೋಂದಣಿ ಮಾಡದಿದ್ದರೆ ಸೆರೆವಾಸ ಹಾಗೂ ಭಾರಿ ದಂಡ ವಿಧಿಸುವ ಪ್ರಸ್ತಾವಗಳನ್ನೂ ಈ ಸಮಿತಿ ಮುಂದಿಟ್ಟಿದೆ. ನಿಜ. ಈಗ ಕೂಡ 1976ರ ಕರ್ನಾಟಕ ವಿವಾಹ ನೋಂದಣಿ ಕಾಯಿದೆಯ ಸೆಕ್ಷನ್ 3ರ ಪ್ರಕಾರ, ವಿವಾಹ ನೋಂದಣಿ ಕಡ್ಡಾಯ. ಆದರೂ ಇದನ್ನು ಜಾರಿಗೊಳಿಸಲೇಬೇಕೆಂಬ ನಿರ್ಬಂಧ ಇಲ್ಲ. ವಿವಾಹವನ್ನು ನೋಂದಣಿ ಮಾಡದಿದ್ದರೆ ಅದೇನೂ ಅನೂರ್ಜಿತವಾಗುವುದಿಲ್ಲ ಎಂದು ಇದೇ ಕಾಯಿದೆಯ ಸೆಕ್ಷನ್ 8 ಸ್ಪಷ್ಟಪಡಿಸುತ್ತದೆ. ಹೀಗಾಗಿಯೇ ವಿವಾಹ ನೋಂದಣಿಯ ವಿಚಾರವನ್ನು ಸಮಾಜ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜೊತೆಗೆ, ವಿವಾಹ ನೋಂದಣಿ ಪ್ರೇಮ ವಿವಾಹಗಳಿಗೆ ಮಾತ್ರ ಎಂಬಂತಹ ಕಲ್ಪನೆಯೂ ಬೇರೂರಿದೆ. ಇಂತಹ ಸನ್ನಿವೇಶದಲ್ಲಿ, ಈಗಿರುವಂತಹ ಕಾಯಿದೆಗೆ ಹೊಸ ಸೆಕ್ಷನ್ (ಸೆಕ್ಷನ್ 8 ಎ) ಸೇರಿಸಿ, ವಿವಾಹಗಳ ನೋಂದಣಿ ಮಾಡದಿರುವುದನ್ನು ಶಿಕ್ಷಾರ್ಹ ಅಪರಾಧವಾಗಿಸಲು ನೀಡಿರುವ ಸಲಹೆ ಸೂಕ್ತವಾದದ್ದು. ವಧು, ವರ, ಛತ್ರದ ಮಾಲೀಕರು ಹಾಗೂ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಸಂಘಟಕರನ್ನೂ ಈ ನಿಯಮದ ವ್ಯಾಪ್ತಿಗೆ ತರುವ ಪ್ರಸ್ತಾವ, ಬಾಲ್ಯ ವಿವಾಹದ ಪಿಡುಗಿನ ಕುರಿತು ಜನ ಹೆಚ್ಚು ಎಚ್ಚರ ವಹಿಸಲು ಸಹಕಾರಿಯಾಗುವ ನಿರೀಕ್ಷೆಯಿದೆ. ಬಿಗಿ ಕಾನೂನು ಇಲ್ಲದಿರುವುದರಿಂದ ರಾಜ್ಯದಲ್ಲಿ ಬಹಳ ಕಡಿಮೆ ಪ್ರಮಾಣದ ವಿವಾಹಗಳು ನೋಂದಣಿಯಾಗುತ್ತಿವೆ. ಕಳೆದ ವರ್ಷ ಸುಮಾರು 43,000 ವಿವಾಹಗಳು ಮಾತ್ರ ನೋಂದಣಿಯಾಗಿವೆ. ಈಗ ದಂಡ ವಿಧಿಸಬೇಕೆಂಬ ಸಮಿತಿಯ ಸಲಹೆಯಿಂದ ವಿವಾಹಗಳ ನೋಂದಣಿ ಪ್ರಮಾಣ ಹೆಚ್ಚಾಗಬಹುದು. ಬಾಲ್ಯ ವಿವಾಹಗಳ ತಡೆಗೆ ಇದೊಂದು ಪರಿಣಾಮಕಾರಿ ಸಾಧನ. ವಿವಾಹ ನೋಂದಣಿಯನ್ನು ಕಡ್ಡಾಯ ಮಾಡಬೇಕೆಂದು 2006ರಲ್ಲೇ ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಬಡತನ, ಮೂಢನಂಬಿಕೆ, ಸಾಂಪ್ರದಾಯಿಕ ಆಚರಣೆಗಳು, ಕುಟುಂಬಗಳ ಕಟ್ಟುಪಾಡುಗಳು ಬಾಲ್ಯವಿವಾಹಕ್ಕೆ ಮುಖ್ಯ ಕಾರಣ. ಅನಕ್ಷರತೆ ಹಾಗೂ ಕಾನೂನು ಅರಿವಿನ ಕೊರತೆಯೂ ಈ ಪಿಡುಗಿಗೆ ಕಾರಣ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ನಿರ್ಲಕ್ಷ್ಯ, ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿ ಇಲಾಖಾ ಶಿಸ್ತು ಕ್ರಮಗಳನ್ನು ಜರುಗಿಸುವ ಬಗ್ಗೆಯೂ ಸಮಿತಿ ಶಿಫಾರಸು ಮಾಡಿದ್ದು ಈ ಶಿಫಾರಸುಗಳ ಪ್ರಾಮಾಣಿಕ ಜಾರಿಗೆ ಸರ್ಕಾರ ಮುಂದಾಗಬೇಕಿದೆ. ವಿವಾಹ ನೋಂದಣಿಯಂತಹ ಸರಳ ವಿಧಾನದಿಂದಾಗುವ ಸದುಪಯೋಗ ಅಪಾರ. ವಿವಾಹದ ಹೆಸರಲ್ಲಿ ನಡೆಯುವ ವಂಚನೆಗಳ ನಿಯಂತ್ರಣಕ್ಕೂ ಇದು ಸಹಕಾರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.