ಲೋಕದ ಕಣ್ಣಲ್ಲಿ ಇಂಗ್ಲೆಂಡ್ ಗಲಭೆ ಹಿಂಸಾಚಾರ ಭುಗಿಲೆದ್ದಾಗ ಬಹುತೇಕ ಪ್ರತಿಕ್ರಿಯೆಗಳು ರಾಜಕೀಯ ನಂಬಿಕೆಗಳಿಂದ ಹೊರಹೊಮ್ಮುತ್ತವೆ. ಅದಕ್ಕೆ ಸಿಗುವ ಕಾರಣಗಳು ಹಲವು. ಅವುಗಳಲ್ಲಿ ಕೆಲವು ಅನುಕೂಲಸಿಂಧುವೂ ಆಗಿರುತ್ತವೆ. ಇಂಗ್ಲೆಂಡ್‌ನಲ್ಲಿ ಸಮಸ್ಯೆಯಂತೂ ಇತ್ತು. ಗಲಭೆಗಳ ಮೂಲಕ ಅದೀಗ ಜಗಜ್ಜಾಹೀರಾಗಿದೆಯಷ್ಟೆ. ಯುರೋಪ್‌ನಲ್ಲಿ ಗಲಭೆಕೋರರು ನಡೆಸಿರುವ ಹಿಂಸಾಚಾರವನ್ನು ಖಂಡಿಸಿರುವವರ ಪ್ರಕಾರ `ಇದು ಆಡಳಿತದ ಕಠಿಣ ಧೋರಣೆಯಿಂದ ಬೇಸತ್ತು ಭವಿಷ್ಯದ ಕುರಿತು ಭರವಸೆ ಕಳೆದುಕೊಂಡವರು ಅನಿವಾರ್ಯವಾಗಿ ನಡೆಸಿರುವ ಕೃತ್ಯ~. ಇನ್ನು ಕೆಲವರು, ಇದನ್ನು `ಕಳೆದ 15 ವರ್ಷಗಳಿಂದ ಬೇರೂರಿರುವ ಗ್ಯಾಂಗ್ ಸಂಸ್ಕೃತಿಯ ಅಟ್ಟಹಾಸ~ ಎಂದು ಬಣ್ಣಿಸಿದ್ದಾರೆ. ಸಾರ್ವಜನಿಕ ಸೇವೆಗಳ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ಹಣ ಹರಿಸಿದ ಮೇಲೂ ಈ ಘಟನೆ ನಡೆದಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯುರೋಪನ್ನು ಈಗ ಜಗತ್ತು ಕಣ್ಣಗಲಿಸಿಕೊಂಡು ನೋಡುತ್ತಿದೆ. ಅಲ್ಲಿನ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಗಲಭೆಯ ಕುರಿತ ವರದಿಗಳಿಗೆ ಪ್ರಾಮುಖ್ಯ ನೀಡಿವೆ. ಅವನ್ನು ತೋರುವ ಧೈರ್ಯ ಮಾಡಿವೆಯೆಂದೂ ಹೇಳಬೇಕು. `ಡಿಸ್‌ಯುನೈಟೆಡ್ ಕಿಂಗ್‌ಡಮ್~ (ಒಡಕು ಕೂಟದ ಕಿಂಗ್‌ಡಮ್) ಎಂದು ಫ್ರೆಂಚ್ ಪತ್ರಿಕೆ `ಲಿಬರೇಷನ್~ ತಲೆ ಬರೆಹ ಪ್ರಕಟಿಸಿದೆ. `ಲೀ ಮೊಂಡೆ~ ಪತ್ರಿಕೆಯ ಮುಖಪುಟದ ತಲೆಬರೆಹ `ಇಂಗ್ಲೆಂಡ್ ಇನ್ ಫ್ಲೇಮ್ಸ~ (ಉರಿ ಕೆನ್ನಾಲಗೆಯಲ್ಲಿ ಇಂಗ್ಲೆಂಡ್). ಎಡಪಂಥೀಯ ಪತ್ರಿಕೆಯಾದ `ಲಿಬರೇಷನ್~ ಗಲಭೆಗಳ ಕುರಿತು ವಿಸ್ತೃತವಾಗಿ ಬರೆದಿದೆ. ಅದರ ಒಂದು ಅಂಶ ಹೀಗಿದೆ: `ಲಂಡನ್‌ನ ಗಲಭೆಗಳು ಇಂಗ್ಲೆಂಡ್‌ನ ಪಾಲಿಗಷ್ಟೇ ಅಲ್ಲ; ಅಸಮಾನತೆ ಇರುವ ಎಲ್ಲಾ ಪಾಶ್ಚಿಮಾತ್ಯ ಸಮಾಜಗಳಿಗೂ ಎಚ್ಚರಿಕೆಯ ಗಂಟೆಯಾಗಿದೆ~. `ಲಿಟ್ಲ್ ಎಕ್ಸ್‌ಪ್ರೆಸ್~ ಕೂಡ `ಇಂದು ಲಂಡನ್, ನಾಳೆ ಪ್ಯಾರಿಸ್?~ ಎಂಬ ಪ್ರಶ್ನೆಯನ್ನು ಎತ್ತಿದೆ. `ನಮ್ಮಲ್ಲಿ ಏಕ ಪ್ರಕಾರದ ಯುವಜನತೆ ಇದ್ದು, ಒಗ್ಗಟ್ಟೆಂಬುದು ಇಲ್ಲ. ನಿರುದ್ಯೋಗದ ಸಮಸ್ಯೆ ಇದ್ದು, ಅವರಲ್ಲಿ ಮನೋಸ್ಥೈರ್ಯ ಕುಸಿದಿದೆ. ಆರ್ಥಿಕ ಬಿಕ್ಕಟ್ಟಿನ ಹೊಡೆತ ಕೂಡ ಅವರಿಗೆ ಬಿದ್ದಿದೆ~ ಎಂದು ಆ ಪತ್ರಿಕೆ ಅಭಿಪ್ರಾಯಪಟ್ಟಿದೆ. ಭಯ, ಆತಂಕ: ಪ್ಯಾರಿಸ್‌ನ ಉಪನಗರಗಳಲ್ಲಿ ಇದ್ದ ಯುವಜನತೆಯ ಕುದಿಯ ಕುರಿತೂ ವಿಸ್ತೃತ ವರದಿಗಳು ಬಂದಿದ್ದವು. ಅಲ್ಲಿನ ಸ್ಥಿತಿಗೂ ಇಂಗ್ಲೆಂಡ್ ಪರಿಸ್ಥಿತಿಗೂ ಸಾಮ್ಯತೆ ಇರುವಂತೆ ವ್ಯತ್ಯಾಸವೂ ಇದೆ. 2005ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಗಲಭೆಯು ಫ್ರೆಂಚ್ ಬಂಡವಾಳಶಾಹಿಗಳ ವಿರುದ್ಧವಷ್ಟೇ ಆಗಿತ್ತು. `ಲಂಡನ್‌ನಲ್ಲೂ ಬಡವರ ಮನೆಗಳಿರುವ ಬದಿಯಲ್ಲೇ ಶ್ರೀಮಂತರ ಮಹಲುಗಳಿವೆ. ಈ ಕಾರಣಕ್ಕೇ ಲಂಡನ್‌ನ ಗಲಭೆಗಳಿಂದ ಕುಮ್ಮಕ್ಕು ಸಿಗುವ ಸಾಧ್ಯತೆ ಇದೆ. ಹಾಗಾಗಿ ಲಂಡನ್‌ನ ಗಲಭೆ ಇಲ್ಲೂ ಭಯ ಹುಟ್ಟಿಸಿದೆ~ ಎಂದು ಫ್ರೆಂಚ್ ಪತ್ರಿಕೆಯೊಂದು ಆತಂಕ ವ್ಯಕ್ತಪಡಿಸಿದೆ. ಫ್ರಾನ್ಸ್, ಇಂಗ್ಲೆಂಡ್ ಎರಡೂ ದೇಶಗಳಲ್ಲಿ ಬಂಡವಾಳ ಹೂಡಿಕೆಯೇನೋ ಚೆನ್ನಾಗಿದೆ. ಆದರೆ, ಈ ವಿಷಯದಲ್ಲಿ ಸಾರ್ವಜನಿಕರನ್ನು ಗಣನೆಗೆ ತೆಗೆದುಕೊಳ್ಳುವಾಗ ಅಲ್ಪ ಸಂಖ್ಯಾತರನ್ನು ಓಲೈಸಲಾಗುತ್ತಿದೆ ಎಂಬ ಭಾವನೆ ಕೆಲವರದ್ದು. ಸಮಾಜದ ಹೊರಗಿನವರಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಬಹುಸಂಖ್ಯಾತರು ಭಾವಿಸಿದ್ದಾರೆ. ಉದ್ಯೋಗದ ವಿಷಯದಲ್ಲೂ ಇದೇ ಜನಾಭಿಪ್ರಾಯವಿದೆ. ಯುರೋಪ್‌ನಲ್ಲಿ ಸುಮಾರು ಎರಡು ಕೋಟಿ ನಲವತ್ತು ಲಕ್ಷ ನಿರುದ್ಯೋಗಿಗಳಿದ್ದಾರೆ. ಹೊಸ ಉದ್ಯೋಗಾಕಾಂಕ್ಷಿಗಳು ಸೇರ್ಪಡೆಯಾಗುವ ಸಂದರ್ಭದಲ್ಲೇ ದೀರ್ಘಕಾಲದಿಂದ ಆ ಸಮಸ್ಯೆ ಎದುರಿಸುವವರೂ ಅವರೊಟ್ಟಿಗೆ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ಇದೆ. ನಾನೊಮ್ಮೆ ಬಾರ್ಕಿಂಗ್ ಹಾಗೂ ಡೆಂಜೆನ್‌ಹ್ಯಾಮ್‌ಗೆ ಭೇಟಿ ನೀಡಿದ್ದೆ. ಅಲ್ಲಿ ಹೆಚ್ಚುತ್ತಿರುವ ವಲಸಿಗರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದವರಲ್ಲಿ ಬಹುಪಾಲು ಮಂದಿ ಆಫ್ರಿಕಾದಿಂದ ವಲಸೆ ಬಂದವರೇ ಆಗಿದ್ದರು. ತಾವು ನೆಲೆ ನಿಂತ ಸಮಾಜ ದಲ್ಲಿ ಬೇರೆಯವರು ಬಂದು ತಮ್ಮ ಬೇರುಗಳನ್ನೇ ಎಲ್ಲಿ ಅಲ್ಲಾಡಿಸುವರೋ ಎಂಬ ಆತಂಕದಲ್ಲಿ ಅವರು ವಲಸಿಗರನ್ನು ಬದಮಾಡಿಕೊಳ್ಳುವುದನ್ನು ವಿರೋಧಿಸುತ್ತಿದ್ದರು. ಯುರೋಪ್‌ನ ಹಲವು ಸಮಾಜಗಳಲ್ಲಿ ಈಗ ಒಗ್ಗಟ್ಟಿಲ್ಲ. ಆರ್ಥಿಕ ಕುಸಿತವೂ ಆಗುತ್ತಿರುವ ಸಂದರ್ಭದಲ್ಲಂತೂ ಈ ಬೆಳವಣಿಗೆ ಬಿಸಿತುಪ್ಪವೇ ಸರಿ. ಕತ್ರಿನಾ ಚಳವಳಿ: ಯುರೋಪ್‌ನ ಮಾಧ್ಯಮದಲ್ಲಿ ಗ್ಯಾಂಗ್ ಸಂಸ್ಕೃತಿಯ ಬಣ್ಣನೆಗೆ ಹೆಚ್ಚು ಸ್ಥಳ ಸಿಕ್ಕಿಲ್ಲ. ಇಂದು ಬಹುತೇಕ ಯುವಕರಲ್ಲಿ ತಾಂಡವವಾಡುತ್ತಿರುವುದು ಗ್ಯಾಂಗ್ ಸಂಸ್ಕೃತಿ. ಕೆಲವು ಗಲಭೆಕೋರರಿಗೆ ಲೂಟಿಯೇ ಗ್ಯಾಂಗ್ ಚಟುವಟಿಕೆ. ಹೀಗೆ ಮಾಡುವುದರಿಂದ ವಿರೋಧಿ ಗ್ಯಾಂಗ್‌ನವರನ್ನು ತಲ್ಲಣಗೊಳಿಸುವವರೂ ಉಂಟು. ಇನ್ನು ಕೆಲವೆಡೆ ಹಲವು ಗ್ಯಾಂಗ್‌ಗಳು ಒಗ್ಗೂಡಿ ದಾಂಧಲೆ ನಡೆಸುತ್ತಿವೆ. ಗ್ಯಾಂಗ್‌ಗಳ ಹುಟ್ಟಿನಲ್ಲೇ ಸಮಾಜ ಹಾಗೂ ಕುಟುಂಬ ವ್ಯವಸ್ಥೆಯ ವೈಫಲ್ಯ ಕಾಣುತ್ತದೆ. ಸಾರ್ವಜನಿಕ ವಲಯದಲ್ಲಿ ಗಮನಾರ್ಹ ಆರ್ಥಿಕ ನೆರವು ಹರಿದಿದ್ದರೂ ಲಂಡನ್‌ನಲ್ಲಿ ಗ್ಯಾಂಗ್ ಸಂಸ್ಕೃತಿ ವ್ಯಾಪಕವಾಗಿರುವುದು ಏಕೆ ಎಂಬ ಪ್ರಶ್ನೆ ಇದೆ. ಅದರ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು. ಸಮುದಾಯ ಸೌಹಾರ್ದತೆಯನ್ನು ಬಲಪಡಿಸುವ ಉದ್ದೇಶದಿಂದ ಸ್ಥಳೀಯ ಆಡಳಿತಗಳು ಈಗಾಗಲೇ ಸಲಹೆಗಾರರನ್ನು ನೇಮಿಸಿಕೊಂಡಿವೆ. ಅವರ ನಡುವೆ ಗ್ಯಾಂಗ್ ಸಂಸ್ಕೃತಿಯ ವ್ಯಾಪಕತೆಯ ಚರ್ಚೆ ಆಗಬೇಕು. `ಪ್ಯಾರಿಸ್ ಹಾಗೂ ಲಂಡನ್‌ನ ಗಲಭೆಗಳು~ ಎಂಬ ಒಂದು ಲೇಖನದಲ್ಲಿ ಬ್ರೂಸ್ ಕ್ರೂಮ್ಲಿ `ಮುಂದೇನಾದೀತು?~ ಎಂಬ ಆತಂಕವನ್ನೂ ತೋಡಿಕೊಂಡಿದ್ದಾರೆ. `ರಾತ್ರೋರಾತ್ರಿ ಹೀಗೆ ದಾಂಧಲೆಗಳಾದಾಗ ಬಹು ಸಂಸ್ಕೃತೀಕರಣದ ಮೇಲೆ ಬ್ರಿಟನ್‌ನಲ್ಲಿ ಇನ್ನೆಂಥಾ ದಾಳಿಗಳು ನಡೆಯಬಹುದು ಎಂಬ ಚಿಂತನೆ ಮಾಡುವ ಸ್ಥಿತಿಯೇ ಇಲ್ಲವಾಗಿ ಎಲ್ಲರೂ ಜೋಮು ಹತ್ತಿದವರಂತೆ ಆಗುತ್ತಾರೆ~ ಎಂಬುದು ಬ್ರೂಸ್ ಕ್ರೂಮ್ಲಿ ಆತಂಕ. `2005ರಲ್ಲಿ ಫ್ರೆಂಚ್ ಗಲಭೆಗಳಾದ ನಂತರ ಉಪನಗರಗಳಿಗೆ ಹೆಚ್ಚು ಆರ್ಥಿಕ ನೆರವು ನೀಡುವುದಾಗಿ ಪ್ಯಾರಿಸ್ ಸ್ಥಳೀಯ ಆಡಳಿತ ಭರವಸೆ ಕೊಟ್ಟಿತ್ತು. ಅಧ್ವಾನವಾದ ಗೃಹ ನಿರ್ಮಾಣ ಯೋಜನೆಗಳನ್ನು ಉತ್ತಮ ಯೋಜನೆಗಳಾಗಿ ಬದಲಿಸುವ ಮಾತನ್ನೂ ಆಡಿತ್ತು. ಆದರೆ, ಇಲ್ಲಿ ಡೇವಿಡ್ ಕ್ಯಾಮರಾನ್ ಹತ್ತಿರ ಹಣವಿಲ್ಲ~ ಎಂದೂ ಬ್ರೂಸ್ ಕ್ರೂಮ್ಲಿ ವ್ಯಂಗ್ಯವಾಡಿದ್ದಾರೆ. ಜರ್ಮನ್ ನಿಯತಕಾಲಿಕ `ಡೆರ್ ಸ್ಪೀಗೆಲ್~ನ ಲೇಖನದ ಸಾಲು ಹೀಗಿದೆ- `ಕೆಲವು ಲಂಡನ್‌ವಾಸಿಗಳು ಯೂರೋಸ್ಟಾರ್ ಖಂಡಕ್ಕೆ ಹಾರುತ್ತಿದ್ದಾರೆ~. ಪೊಲೀಸ್ ಪಡೆಯ ನಿಷ್ಕ್ರಿಯತೆಯನ್ನೂ ಅದು ಬಣ್ಣಿಸಿದೆ. `ಟೀವಿ ಚಿತ್ರಗಳು ಮೊಗದಿಶು ಮಾತನ್ನು ನೆನಪಿಸಿದವು. ಅವರ ಪ್ರಕಾರ ಲಂಡನ್ ಗಲಭೆಗಳು ಡೇವಿಡ್ ಕ್ಯಾಮರಾನ್‌ನ ಕತ್ರಿನಾ ಚಳವಳಿ. ನ್ಯೂ ಆರ್ಲಿಯಾನ್ಸ್‌ಗೆ ಕತ್ರಿನಾ ಚಂಡಮಾರುತ ಲಗ್ಗೆ ಇಟ್ಟಾಗ ಆಗಿನ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಹೇಗೆ ಪರಿಸ್ಥಿತಿಯನ್ನು ಹದ್ದುಬಸ್ತಿಗೆ ತರಲಿಲ್ಲವೋ ಕ್ಯಾಮರಾನ್ ಕೂಡ ಹಾಗೆಯೇ ಮಾಡುತ್ತಿದ್ದಾರೆ~ ಎಂಬುದು `ಡೆರ್ ಸ್ಪೀಗೆಲ್~ ವಿಶ್ಲೇಷಣೆ. ಭರವಸೆ ಇಲ್ಲದ ಶಿಸ್ತು : ಕಳೆದೊಂದು ವರ್ಷದಲ್ಲಿ ಪದೇ ಪದೇ ಒಲಿಂಪಿಕ್ ಪ್ರಸ್ತಾಪವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರಿಟನ್‌ನ ಗತ್ತು ಗೈರತ್ತು ಕಡಿಮೆಯಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಸ್ಪೇನ್‌ನ ಪತ್ರಿಕೆ ಯೊಂದು ಇಂಗ್ಲೆಂಡ್‌ನ ಅಶಾಂತಿ ಹೋಗಲಾಡಿಸುವಲ್ಲಿ ಪ್ರಾತಿನಿಧಿಕ ಪ್ರಜಾಪ್ರಭುತ್ವಕ್ಕೆ ಸಾಧ್ಯವಾಗುತ್ತಿಲ್ಲವೇನೋ ಎಂದು ಬರೆದಿದೆ. ಯೂರೋಪ್‌ನ ಎಲ್ಲೆಡೆ ಸಾರ್ವಜನಿಕ ವಲಯಗಳಲ್ಲಿ ಹರಿಯುತ್ತಿರುವ ಆರ್ಥಿಕ ನೆರವು, ಸಾಮಾಜಿಕ ಕಾರ್ಯಕ್ರಮಗಳು, ಸಮಾಜೋದ್ಧಾರದ ಕೆಲಸಗಳ ಸುದ್ದಿ ಇದೆ. ಆದರೆ, ಸುರಕ್ಷತೆಯ ಜಾಲ ವಿಫಲವಾಗಿದೆ. ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಯುರೋಪ್‌ನ ಬದುಕಿನ ಶೈಲಿ ಬದಲಾಗುತ್ತಿದೆ. ಹೆಚ್ಚೇ ಆತಂಕಕಾರಿಯಾಗಿರುವ ನಿರುದ್ಯೋಗದ ಸಮಸ್ಯೆ ಇರುವಾಗಲೇ ಇವೆಲ್ಲಾ ಆಗುತ್ತಿರುವುದು ಪರಿಸ್ಥಿತಿ ಇನ್ನಷ್ಟು ಪ್ರಕೋಪಕ್ಕೆ ಹೋಗಲು ಕಾರಣವಾಗಿದೆ. ಗ್ರೀಸ್‌ನಲ್ಲಿ ಶೇ 40, ಸ್ಪೇನ್‌ನಲ್ಲಿ ಶೇ 43 ಹಾಗೂ ನಾನು ಕೂತು ಈ ಲೇಖನ ಬರೆಯುತ್ತಿರುವ ನೇಪಲ್ಸ್‌ನಲ್ಲಿ ಶೇ 60ರಷ್ಟು ನಿರುದ್ಯೋಗ ಸಮಸ್ಯೆ ಇದೆ. ಯುರೋಪ್‌ನ ಕೆಲವು ಭಾಗಗಳಲ್ಲಿ ಸಾಂಸ್ಕೃತಿಕ ಕ್ರಾಂತಿ ನಡೆಯುತ್ತಿದೆ. ಸಮಾಜ ಕಲ್ಯಾಣ ಕಾರ್ಯಕ್ರಮಗಳ ವ್ಯಾಪಕತೆಯಲ್ಲಿ ಮುಳುಗಿರುವ ಹಳೆಯ ಯುರೋಪ್‌ಗಂತೂ ಈಗ ಗಂಡಾಂತರ. ಸೌಕರ್ಯಗಳು ಸಮಾಜ ಕುರಿತ ಬದ್ಧತೆಯನ್ನು ಬಲಪಡಿಸುತ್ತದೋ, ದುರ್ಬಲಗೊಳಿಸುತ್ತದೋ ಎಂದು ವಾದ-ಪ್ರತಿವಾದ ಮಾಡಲು ಇದು ಸಕಾಲ. ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಯೋಜನೆಗಳು ಪುಂಖಾನುಪುಂಖವಾಗಿ ಅನುಷ್ಠಾನಕ್ಕೆ ಬಂದಿದ್ದರೂ ಒಂದು ದುರ್ಬಲ ವರ್ಗ ಸಮಾಜದಿಂದ ಹೊರತಾಗಿಯೇ ಉಳಿದುಬಿಡುತ್ತಿದೆ. ಇದು ಯಾಕೆ ಎಂಬುದು ಪ್ರಶ್ನೆ. ಕಳೆದ ವರ್ಷ ನಾನು ಡಬ್ಲಿನ್‌ಗೆ ಹೋಗಿದ್ದಾಗ ಬಿಲ್ ಕ್ಲಿಂಟನ್ ಕೂಡ ಅಲ್ಲಿದ್ದರು. ಭರವಸೆಯನ್ನೇ ನೀಡದೆ ಶಿಸ್ತನ್ನು ಹೇರುವುದರಿಂದ ಆಗುವ ಅನಾಹುತಗಳನ್ನು ಕುರಿತು ಅವರು ಮಾತಾಡಿದ್ದರು. ಬ್ರಿಟನ್‌ನಲ್ಲಿ ಆಗಿರುವ ಗಲಭೆಗಳ ಹಿನ್ನೆಲೆಯಲ್ಲಿ ಯುರೋಪ್‌ಗೆ ಅನ್ವಯಿಸಬಹುದಾದ ಮಾತು ಅದು. ಅಭಿವೃದ್ಧಿಯಿಂದ ಜಾರಿಕೊಳ್ಳುವ ಅನಿವಾರ್ಯತೆ, ಹಿಂದೆಂದಿಗಿಂತ ಹೆಚ್ಚು ಹಣಕಾಸಿನ ಕೊರತೆ, ಉತ್ತಮ ಶಿಕ್ಷಣ ಪಡೆದ ಮಕ್ಕಳಿಗೂ ತಮ್ಮ ತಂದೆ-ತಾಯಿಯಂತೆ ಬದುಕಲಾದೀತೆ ಎಂಬ ಆತಂಕ- ಇವೆಲ್ಲವೂ ಇರುವ ಯುರೋಪ್‌ಗೆ ಇದು ಸವಾಲಿನ ಪರಿಸ್ಥಿತಿ. (ಸೌಜನ್ಯ: ನ್ಯೂಯಾರ್ಕ್ ಟೈಮ್ಸ್ ಸಿಂಡಿಕೇಟ್) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.