ಬಿಬಿಎಂಪಿ ದುರಾಡಳಿತ ಹಣಕಾಸಿನ ಕೊರತೆಯಿಂದಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಲಾಗಿರುವ ಕಾಮಗಾರಿಗಳನ್ನು ಕೈಬಿಡುವ ದಿವಾಳಿ ಸ್ಥಿತಿಗೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ತಲುಪಿರುವುದು ಅನಿರೀಕ್ಷಿತವೇನಲ್ಲ. ನಗರದ ನಾಗರಿಕರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿ ರಾಜ್ಯದ ರಾಜಧಾನಿಯನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸುವ ಹೊಣೆ ಹೊತ್ತಿರುವ ಬಿಬಿಎಂಪಿ ತನ್ನ ಕರ್ತವ್ಯ ಮರೆತು ಬಹಳ ದಿನಗಳಾಗಿವೆ. ಅದು ಭ್ರಷ್ಟಾಚಾರದ ಕೊಂಪೆಯಾಗಿ ಹೋಗಿದೆ. ಭ್ರಷ್ಟ ಅಧಿಕಾರಿಗಳು, ದುಷ್ಟ ಗುತ್ತಿಗೆದಾರರು ಮತ್ತು ಹೊಣೆಗೇಡಿ ಜನಪ್ರತಿನಿಧಿಗಳು ಪರಸ್ಪರ ಷಾಮೀಲಾಗಿ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ನಡೆಸುತ್ತಿದ್ದಾರೆ ಎನ್ನುವ ಆರೋಪಗಳನ್ನು ಇತ್ತೀಚೆಗೆ ಬಯಲಾಗಿರುವ ಬಿಬಿಎಂಪಿಯ ಸರಣಿ ಭ್ರಷ್ಟಾಚಾರದ ಹಗರಣಗಳು ಪುಷ್ಟೀಕರಿಸುತ್ತವೆ. ಬಿಬಿಎಂಪಿಯ ಕೇಂದ್ರ ಮೀಸಲು ನಿಧಿಯ ಬಳಕೆಯಲ್ಲಿಯೂ ಸುಮಾರು 220 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಮಾಹಿತಿ ಹಕ್ಕು ಕಾರ‌್ಯಕರ್ತರು ಆರೋಪಿಸಿರುವುದು ಭ್ರಷ್ಟಾಚಾರಗಳ ಸರಣಿಗೆ ಇತ್ತೀಚಿನ ಸೇರ್ಪಡೆ. ನಗರದ ಮೂರು ವಿಭಾಗಗಳಲ್ಲಿ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದಿರುವ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿಗಳು ಈಗಾಗಲೇ ಸಿಐಡಿಗೆ ಒಪ್ಪಿಸಿದ್ದಾರೆ. ಈ ಹಗರಣ ಬಯಲಾದ ಕೂಡಲೇ ದಾಖಲೆಗಳಿದ್ದ ಕೋಣೆಗೆ ಬೆಂಕಿ ಬಿದ್ದದ್ದು ಅಪರಾಧಿಗಳು ಎಂತಹ ಪ್ರಚಂಡರಿದ್ದಾರೆನ್ನುವುದಕ್ಕೆ ಸಾಕ್ಷಿ. ಭ್ರಷ್ಟತೆಯಲ್ಲಿ ತಾವೂ ಷಾಮೀಲಾಗಿರುವುದರಿಂದ ಜನಪ್ರತಿನಿಧಿಗಳಿಗೆ ಅಧಿಕಾರಿಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿ ಬಿಬಿಎಂಪಿಯ ಆಡಳಿತ ಸಂಪೂರ್ಣವಾಗಿ ಹಳಿ ತಪ್ಪಿದೆ. ಒಂದೆಡೆ ಭ್ರಷ್ಟಾಚಾರದಿಂದ ಹಣ ಸೋರಿ ಹೋಗುತ್ತಿದ್ದರೆ ಇನ್ನೊಂದೆಡೆ ತೆರಿಗೆ ಸಂಗ್ರಹವಾಗದೆ ಬೊಕ್ಕಸ ಬರಿದಾಗುತ್ತಿದೆ. ತೆರಿಗೆ ವಂಚಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ಬುದ್ಧಿ ಕಲಿಸುವ ಬದಲಿಗೆ ಅವರ ಮನೆ ಎದುರು ತಮಟೆ ಬಾರಿಸುವ ಬಾಲಿಶ ಕ್ರಮಕ್ಕೆ ಬಿಬಿಎಂಪಿ ಇಳಿದಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಷಾಮೀಲಾಗದೆ ತೆರಿಗೆಯನ್ನು ವಂಚಿಸುವ ಧೈರ್ಯವನ್ನು ಯಾರು ತೋರುತ್ತಾರೆ? ಈ ಸ್ಥಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ದುಡ್ಡು ಎಲ್ಲಿಂದ ಬರಬೇಕು? ಇದಕ್ಕೆ ಇರುವ ಏಕೈಕ ಉಪಾಯವೆಂದರೆ ಕಾಮಗಾರಿಗಳನ್ನೇ ನಡೆಸದೆ ಕೈತೊಳೆದುಕೊಂಡು ಬಿಡುವುದು ಎಂಬ ಬೇಜವಾಬ್ದಾರಿ ನಿರ್ಧಾರಕ್ಕೆ ಬಿಬಿಎಂಪಿ ಬಂದಂತಿದೆ. ಇದು ಜನದ್ರೋಹದ ಕೆಲಸ. ಬಿಬಿಎಂಪಿ ಮೊದಲು ಭ್ರಷ್ಟಾಚಾರದಿಂದ ಸೋರಿಹೋಗುತ್ತಿರುವ ಹಣವನ್ನು ತಡೆಗಟ್ಟಿ ಮತ್ತು ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ಮಾಡಿ ಸಂಪನ್ಮೂಲವನ್ನು ಕ್ರೋಡೀಕರಿಸಿದರೆ ಅಗತ್ಯ ಕಾಮಗಾರಿಗಳನ್ನು ನಡೆಸಲು ಬೇರೆ ಮೂಲಗಳಿಂದ ಹಣ ಕೇಳುವ ಅವಶ್ಯಕತೆಯೇ ಉದ್ಭವಿಸಲಾರದು. ಈ ಪ್ರಯತ್ನವನ್ನು ಬಿಬಿಎಂಪಿ ಪ್ರಾಮಾಣಿಕವಾಗಿ ಪ್ರಾರಂಭಿಸಬೇಕು. ಪ್ರತಿ ಬಾರಿ ರಾಜ್ಯಸರ್ಕಾರದ ಮುಂದೆ ಭಿಕ್ಷಾಪಾತ್ರೆ ಹಿಡಿದುಕೊಂಡು ಹೋಗುವುದು ಸರಿಯಲ್ಲ. ರಾಜ್ಯ ಸರ್ಕಾರ ಕೂಡಾ ಬಿಬಿಎಂಪಿಗೆ ಆರ್ಥಿಕ ನೆರವು ನೀಡುವ ಮೊದಲು ಅಲ್ಲಿನ ಭ್ರಷ್ಟಾಚಾರ ಮತ್ತು ದುರಾಡಳಿತದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ದಿಟ್ಟತನ ತೋರಬೇಕು. ತಮ್ಮದೇ ಪಕ್ಷದ ಆಡಳಿತ ಇದೆ ಎನ್ನುವ ಕಾರಣಕ್ಕೆ ಔದಾರ‌್ಯ ತೋರುವುದು ಸರಿಯಲ್ಲ. ನಗರಾಭಿವೃದ್ಧಿ ಖಾತೆ ಮುಖ್ಯಮಂತ್ರಿಗಳ ಕೈಯಲ್ಲೇ ಇರುವುದರಿಂದ ಅವರಿಗೆ ಹೆಚ್ಚಿನ ಜವಾಬ್ದಾರಿ ಇದೆ ಎನ್ನುವುದನ್ನು ಮರೆಯಬಾರದು. . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.