ಅಣಕು ಕಾರ್ಯಾಚರಣೆ ದುರಂತ ಬೆಂಗಳೂರಿನ ಸಿದ್ಧ ಉಡುಪು ಘಟಕದಲ್ಲಿ ಬೆಂಕಿ ಆಕಸ್ಮಿಕದಿಂದ ಪಾರಾಗುವ ಅಣಕು ಕಾರ್ಯಾಚರಣೆಯಲ್ಲಿ ಘಟಕದ ಕಾರ್ಮಿಕ ಕಲ್ಯಾಣ ಅಧಿಕಾರಿಯಾದ ಯುವತಿಯೊಬ್ಬರು ಮೃತಪಡುವುದಕ್ಕೆ ಅಗ್ನಿಶಾಮಕ ದಳದ ನಿರ್ಲಕ್ಷ್ಯವೇ ಕಾರಣ. ಹಗ್ಗದ ಸಾಮರ್ಥ್ಯವನ್ನು ಪರಿಶೀಲಿಸದೆ ಅದನ್ನು ಯುವತಿಯ ಸೊಂಟಕ್ಕೆ ಕಟ್ಟಿ ಮೂರನೇ ಮಹಡಿಯಿಂದ ಕೆಳಕ್ಕೆ ಧುಮುಕುವಂತೆ ನಡೆಸಿದ ಕಾರ್ಯಾಚರಣೆಯಲ್ಲಿ ಯಾವ ಸುರಕ್ಷತಾ ಕ್ರಮಗಳನ್ನೂ ಅನುಸರಿಸಲಿಲ್ಲವೆಂಬುದು ಪ್ರಾಥಮಿಕ ಸಂಗತಿಗಳಿಂದ ಸ್ಪಷ್ಟವಾಗಿದೆ. ಇದರ ಸಂಪೂರ್ಣ ಹೊಣೆಯನ್ನು ಅಗ್ನಿಶಾಮಕ ದಳವೇ ಹೊರಬೇಕು. ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳುವಾಗ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಖಚಿತವಾದ ನಿರ್ದೇಶನಗಳಿದ್ದರೂ ಅವನ್ನೆಲ್ಲ ನಿರ್ಲಕ್ಷಿಸಲಾಗಿದೆ. ತರಬೇತಿ ಪಡೆದ ತಮ್ಮ ಸಿಬ್ಬಂದಿಯನ್ನು ಬಿಟ್ಟು ಸಿದ್ಧ ಉಡುಪು ಘಟಕದ ಸಿಬ್ಬಂದಿಯನ್ನು ಬಳಸಿಕೊಳ್ಳುವಲ್ಲಿ ಅಗಿಶಾಮಕ ದಳ ಬೇಜವಾಬ್ದಾರಿ ಪ್ರದರ್ಶಿಸಿದೆ. ಅಣಕು ಪ್ರದರ್ಶನಕ್ಕೆ ತಮ್ಮ ಸಿಬ್ಬಂದಿಯನ್ನೇ ಬಳಸಿದರೂ ಮೂರನೇ ಮಹಡಿಯಿಂದ ಕೆಳಕ್ಕೆ ಧುಮುಕುವಂಥ ಅಪಾಯಕಾರಿ ಸಂದರ್ಭದಲ್ಲಿ ಕೆಳಕ್ಕೆ ಬಲೆಯನ್ನು ಒಡ್ಡಿ ರಕ್ಷಿಸುವ ಮುನ್ನೆಚ್ಚರಿಕೆ ಕ್ರಮವನ್ನೂ ಅನುಸರಿಸಲಿಲ್ಲ. ಇದರ ಪರಿಣಾಮ ಅಮಾಯಕ ಯುವತಿ ದಾರುಣವಾಗಿ ಅಂತ್ಯ ಕಾಣಬೇಕಾಯಿತು. ಇದು ಅಗ್ನಿಶಾಮಕ ದಳದ ನಿರ್ಲಕ್ಷ್ಯದಿಂದ ಆದ ಹತ್ಯೆ. ಇದಕ್ಕೆ ಕಾರಣರಾದವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸುವುದು ಸರ್ಕಾರದ ಕರ್ತವ್ಯ. ತಮ್ಮ ಅಸಡ್ಡೆಯಿಂದ ದುರಂತ ಸಂಭವಿಸಿದರೂ, ಅಣಕು ಕಾರ್ಯಾಚರಣೆ ನಡೆಸುವಂತೆ ಕೋರಿದ ಸಿದ್ಧ ಉಡುಪು ಸಂಸ್ಥೆಯ ಮೇಲೆ ಹೊಣೆಯನ್ನು ಹಾಕುವ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳ ವರ್ತನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಿದ್ಧ ಉಡುಪು ಘಟಕ, ಆಕಸ್ಮಿಕಗಳು ಸಂಭವಿಸಿದಾಗ ಅದನ್ನು ಎದುರಿಸುವುದಕ್ಕೆ ಅಗತ್ಯವಾದ ಅಗ್ನಿನಂದಕ ವಸ್ತುಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದೇ ವಿನಾ ಕಟ್ಟಡದ ಮೇಲಿಂದ ಧುಮುಕುವಂಥ ಸಂದರ್ಭದಲ್ಲಿ ರಕ್ಷಣೆಗೆ ಬಲೆಗಳನ್ನು ಇಟ್ಟುಕೊಳ್ಳಬೇಕೆಂದು ನಿರೀಕ್ಷಿಸಲಾಗದು. ಅಂಥ ಸಂದರ್ಭಗಳಲ್ಲಿ ಅಗ್ನಿಶಾಮಕ ದಳವನ್ನೇ ರಕ್ಷಣಾ ಕಾರ್ಯಕ್ಕೆ ಅವಲಂಬಿಸಲಾಗುತ್ತದೆ. ರಕ್ಷಣೆಯ ಪರಿಕರಗಳು ಮತ್ತು ತುರ್ತು ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಯನ್ನು ಅಗ್ನಿಶಾಮಕ ದಳ ವೃತ್ತಿಪರತೆಯಿಂದ ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಸಿದ್ಧ ಉಡುಪು ಸಂಸ್ಥೆಯ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡುವುದಕ್ಕೆ ಆಧಾರವಿಲ್ಲ. ಅಗ್ನಿಶಾಮಕ ದಳದ ವರಿಷ್ಠರು ಘಟನೆಯ ತನಿಖೆಗೆ ಆದೇಶ ನೀಡಿದ್ದಾರಾದರೂ ಇದು ದಳದ ಕರ್ತವ್ಯಲೋಪವನ್ನು ಮುಚ್ಚಿಹಾಕುವ ತಂತ್ರವಾಗಬಾರದು. ದಳದ ನಿರ್ಲಕ್ಷ್ಯದಿಂದ, ಕಾರ್ಮಿಕ ಕಲ್ಯಾಣ ಹುದ್ದೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಯುವ ಅಧಿಕಾರಿಯ ಪ್ರಾಣಹರಣವಾಗಿದೆ. ಅಧಿಕಾರಿಯ ಕುಟುಂಬಕ್ಕೆ ಸಿದ್ಧ ಉಡುಪು ಸಂಸ್ಥೆ ಪರಿಹಾರ ಕೊಡುವುದು ಮಾನವೀಯ ನಡವಳಿಕೆ. ಅದಕ್ಕಿಂತಲೂ ಹೆಚ್ಚಿನ ಹೊಣೆ ರಾಜ್ಯ ಸರ್ಕಾರದ್ದು. ಮೃತರ ಕುಟುಂಬಕ್ಕೆ ಘೋಷಿಸಿದ ಒಂದು ಲಕ್ಷ ರೂಪಾಯಿ ಪರಿಹಾರ, ಆಗಿರುವ ದುರಂತಕ್ಕೆ ಪರ್ಯಾಯವಲ್ಲ. ಮೃತ ಅಧಿಕಾರಿಯನ್ನು ಅವಲಂಬಿಸಿದ ಕುಟುಂಬಕ್ಕೆ ಸೂಕ್ತ ಉದ್ಯೋಗ ಕಲ್ಪಿಸುವ ಹೊಣೆಗಾರಿಕೆ ಸರ್ಕಾರದ್ದಾಗಿದೆ. ಜೊತೆಗೆ ನಿರ್ಲಕ್ಷ್ಯದಿಂದ ವರ್ತಿಸಿ ಪ್ರಾಣಹಾನಿಗೆ ಕಾರಣರಾದ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಮುಂದೆ ಇಂಥ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳುವ ಹೊಣೆಯೂ ಸರ್ಕಾರದ್ದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.