ವಿಜ್ಞಾನಿಗಳು ರಾಜಕಾರಣಿಗಳಲ್ಲ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಹಾಗೂ ಇತರ ಮೂವರು ವಿಜ್ಞಾನಿಗಳನ್ನು ಸರ್ಕಾರಿ ಹುದ್ದೆಗಳಿಂದ ದೂರ ಇಡುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ ಹಿರಿಯ ವಿಜ್ಞಾನಿ ಪ್ರೊ. ರೊದ್ದಂ ನರಸಿಂಹ ಬಾಹ್ಯಾಕಾಶ ಆಯೋಗದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಅತ್ಯಂತ ದುರದೃಷ್ಟಕರ. ಪ್ರೊ. ನರಸಿಂಹ ಇಡೀ ದೇಶವೇ ಹೆಮ್ಮೆ ಪಡುವಂತಹ ವಿಜ್ಞಾನಿ. ಅವರ ರಾಜೀನಾಮೆ, ಮುಜುಗರಕ್ಕೆ ಒಳಗಾದ ನಾಲ್ವರು ಇಸ್ರೊ ವಿಜ್ಞಾನಿಗಳಿಗೆ ನೈತಿಕ ಬಲ ನೀಡಿದೆ. ಎಸ್.ಬ್ಯಾಂಡ್ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಇಸ್ರೊದ ವಾಣಿಜ್ಯ ಘಟಕ ಅಂತರಿಕ್ಷ್ ಕಾರ್ಪೋರೇಷನ್ ಮತ್ತು ದೇವಾಸ್ ಮಲ್ಟಿಮೀಡಿಯಾ ನಡುವೆ ಆದ ಒಪ್ಪಂದದ ಸಂದರ್ಭದಲ್ಲಿ ಮಾಧವನ್ ನಾಯರ್ ಮತ್ತು ಇತರ ಮೂವರು ವಿಜ್ಞಾನಿಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಅವರನ್ನು ನಿವೃತ್ತಿಯ ನಂತರ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧಿಸಿತ್ತು. ಒಪ್ಪಂದಕ್ಕೆ ಸಂಬಂಧಿಸಿದಂತೆ ಇಸ್ರೊ ವಿಜ್ಞಾನಿಗಳ ಪಾತ್ರ ಕುರಿತು ವಿಚಾರಣೆ ನಡೆಸಲು ಸರ್ಕಾರ ನೇಮಕ ಮಾಡಿದ್ದ ಮೊದಲ ಉನ್ನತ ಮಟ್ಟದ ಸಮಿತಿಯಲ್ಲಿ ಪ್ರೊ. ನರಸಿಂಹ ಅವರೂ ಸದಸ್ಯರಾಗಿದ್ದರು. ಸರ್ಕಾರ ಇನ್ನೊಂದು ಉನ್ನತ ಮಟ್ಟದ ಸಮಿತಿ ನೇಮಕ ಮಾಡಿತು. ಆ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ನಾಲ್ವರು ವಿಜ್ಞಾನಿಗಳ ಮೇಲೆ ಕ್ರಮ ತೆಗೆದುಕೊಂಡಿತು. ಸಹಜವಾಗಿಯೇ ಅದರಿಂದ ಪ್ರೊ. ನರಸಿಂಹ ಅವರಿಗೆ ಬೇಸರವಾಗಿದೆ. ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳ ಮೂಲಕ ಜಗತ್ತಿನ ಗಮನ ಸೆಳೆದ ಪ್ರೊ. ನಾಯರ್ ಹಾಗೂ ಇತರ ವಿಜ್ಞಾನಿಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಿ ಅವರ ವಿರುದ್ಧ ಆತುರದ ಕ್ರಮ ತೆಗೆದುಕೊಳ್ಳುವ ಮೂಲಕ ಸರ್ಕಾರ ಈಗ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ವಿಷಯದಲ್ಲಿ ಬಾಹ್ಯಾಕಾಶ ಇಲಾಖೆ ಮಾಡಿದ ತಪ್ಪಿಗೆ ತಮ್ಮನ್ನು ಬಲಿಪಶು ಮಾಡಲಾಗಿದೆ ಎಂದೇ ಪ್ರೊ. ನಾಯರ್ ಆರಂಭದಿಂದಲೂ ಹೇಳುತ್ತಿದ್ದಾರೆ. ಅಂತರಿಕ್ಷ್- ದೇವಾಸ್ ನಡುವೆ ಆದ ಒಪ್ಪಂದಗಳ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಅವರು ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ. ಸರ್ಕಾರ ಅವರ ಬೇಡಿಕೆಯನ್ನು ಪರಿಶೀಲಿಸಬೇಕು. 2-ಜಿ ತರಂಗಾಂತರ ಹಂಚಿಕೆಯಲ್ಲಿ ಅವ್ಯವಹಾರಗಳಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾದಂತೆ ಅಂತರಿಕ್ಷ್- ದೇವಾಸ್ ಒಪ್ಪಂದದಲ್ಲೂ ಆಗಿದೆ. ಅದಕ್ಕೆ ಇಸ್ರೊ ವಿಜ್ಞಾನಿಗಳೇ ಕಾರಣ ಎಂಬ ನಿಲುವಿಗೆ ಆಧಾರ ಸಾಲದು. ಈ ಪ್ರಕರಣದ ಬಗ್ಗೆ ಮತ್ತೊಂದು ವಿಚಾರಣೆ ನಡೆಸುವುದರಲ್ಲಿ ತಪ್ಪೇನೂ ಇಲ್ಲ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ವಿಜ್ಞಾನಿಗಳನ್ನು ಭ್ರಷ್ಟ ರಾಜಕಾರಣಿಗಳಂತೆ ನೋಡಬಾರದು. ಸರ್ಕಾರದ ಆತುರದ ಕ್ರಮದಿಂದ ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯವನ್ನು ಕುಗ್ಗಿದೆ. ಅಂತಹ ಇನ್ನಷ್ಟು ಕ್ರಮಗಳಿಗೆ ಸರ್ಕಾರ ಮುಂದಾಗಬಾರದು. ರೊದ್ದಂ ನರಸಿಂಹ ಬಾಹ್ಯಾಕಾಶ ಆಯೋಗದ ಹಿರಿಯ ಸದಸ್ಯರು. ಅವರ ಸೇವೆ ದೇಶಕ್ಕೆ ಅಗತ್ಯವಿದೆ. ಅವರ ರಾಜೀನಾಮೆಯನ್ನು ಸರ್ಕಾರ ಒಪ್ಪಿಕೊಳ್ಳಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.