ಚುನಾವಣಾ ವ್ಯವಸ್ಥೆ ವೈಫಲ್ಯ ದೇಶದ ಚುನಾವಣೆಗಳಲ್ಲಿ ಹಣದ ಪ್ರಭಾವ ಹೆಚ್ಚುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೇಶಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಚಾರಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. ಕಪ್ಪುಹಣದ ಬಳಕೆಗೆ ಕಡಿವಾಣ ಹಾಕಲು ಆಯೋಗ ಕೈಗೊಂಡ ಕ್ರಮಗಳು ಫಲ ನೀಡಿಲ್ಲ ಎಂಬ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ. ಚುನಾವಣಾ ವ್ಯವಸ್ಥೆ ಸುಧಾರಣೆಗೆ ಅವರು ಮಾಡಿರುವ ಸಲಹೆಗಳು ಪರಾಮರ್ಶೆಗೆ ಅರ್ಹವಾಗಿವೆ. ದೇಶದ ಚುನಾವಣಾ ವ್ಯವಸ್ಥೆ ಪಾರದರ್ಶಕವಾಗಿರಬೇಕು ಎಂದೇ ದೇಶದ ಜನರು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ವ್ಯವಸ್ಥೆ ಸುಧಾರಣೆಗೆ ಆಯೋಗ ಕಾಲಕಾಲಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಬಂದಿದೆ. ರಾಜಕೀಯ ಪಕ್ಷಗಳು ಚುನಾವಣಾ ನೀತಿ ಸಂಹಿತೆಗೆ ಬದ್ಧವಾಗಿರುವುದಾಗಿ ಹೇಳುತ್ತಲೇ ಒಟ್ಟಾರೆ ವ್ಯವಸ್ಥೆಯನ್ನೇ ಹದಗೆಡಿಸುತ್ತಿವೆ. ಕಪ್ಪು ಹಣದ ಬಳಕೆ ಮತ್ತು ಅಕ್ರಮಗಳನ್ನು ತಡೆಯಲು ಆಯೋಗ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡರೂ ಅಭ್ಯರ್ಥಿಗಳು ಅವನ್ನು ದುರ್ಬಲಗೊಳಿಸುತ್ತಿದ್ದಾರೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಚುನಾವಣಾ ಆಯೋಗದ್ದೇ ಆದರೂ ಅದು ರಾಜಕೀಯ ಪಕ್ಷಗಳ ಹಾಗೂ ಮತದಾರರ ಸಹಕಾರವನ್ನು ಅವಲಂಬಿಸಿದೆ. ಹೇಗಾದರೂ ಸರಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಬೇಕು ಎಂಬುದು ಎಲ್ಲಾ ರಾಜಕೀಯ ಪಕ್ಷಗಳ ಗುರಿ. ಅದಕ್ಕಾಗಿ ಅವು ಏನು ಮಾಡಲೂ ಹಿಂಜರಿಯುವುದಿಲ್ಲ. ಹೀಗಾಗಿ ಸುಧಾರಣಾ ಪ್ರಯತ್ನಗಳೆಲ್ಲ ವಿಫಲವಾಗುತ್ತಿವೆ. ಈ ಬೆಳವಣಿಗೆ ನಿಜಕ್ಕೂ ದುರದೃಷ್ಟಕರ. ದೇಶದ ಪ್ರತಿಯೊಬ್ಬ ಅರ್ಹ ಪ್ರಜೆಯೂ ಮತದಾನದಲ್ಲಿ ಭಾಗವಹಿಸುವ ಮೂಲಕ ಜನತಂತ್ರ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬುದು ಸಂವಿಧಾನದ ಆಶಯ. ಆದರೆ ಮತದಾರರು ಸಿನಿಕತನ ಬೆಳೆಸಿಕೊಂಡಿದ್ದಾರೆ. ರಾಜಕಾರಣಿಗಳೆಲ್ಲರೂ ಭ್ರಷ್ಟರು ಎಂಬ ಭಾವನೆ ಅವರಲ್ಲಿದೆ. ನಗರ ಪ್ರದೇಶಗಳ ಜನರಿಗೆ ಮತದಾನ ಮಾಡುವ ಆಸಕ್ತಿ ಇಲ್ಲ. ಮತದಾನದ ಮೂಲಕವೇ ಭ್ರಷ್ಟ ರಾಜಕಾರಣಿಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಚುನಾವಣೆ ಸಂದರ್ಭದಲ್ಲಿ ಆಯೋಗ ಮತದಾನದ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತದೆ. ಆದರೆ ಈ ಕೆಲಸ ನಿರಂತರವಾಗಿ ನಡೆಯಬೇಕು. ಪ್ರಜ್ಞಾವಂತರು ಹಾಗೂ ಜನಪರ ಸಂಘಟನೆಗಳು ಈ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು. ಅಣ್ಣಾ ಹಜಾರೆ ಅವರಂತಹ ಸಮಾಜ ಸೇವಕರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಟೀಕಿಸುವ ಬದಲು ಅದರ ಉತ್ತಮ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂಬ ಚುನಾವಣಾ ಆಯುಕ್ತರ ಸಲಹೆ ಒಪ್ಪುವಂಥದ್ದು. ಒಮ್ಮೆ ಆಯ್ಕೆಯಾದ ಶಾಸಕ ಅಥವಾ ಸಂಸದ ವೈಯಕ್ತಿಕ ಅಥವಾ ರಾಜಕೀಯ ಕಾರಣಗಳಿಗೆ ರಾಜೀನಾಮೆ ನೀಡಿದರೆ ಆ ಕ್ಷೇತ್ರಕ್ಕೆ ಮರುಚುನಾವಣೆ ನಡೆಸುವ ಬದಲು ಎರಡನೇ ಸ್ಥಾನದಲ್ಲಿದ್ದ ಅಭ್ಯರ್ಥಿಯನ್ನೇ ಜನ ಪ್ರತಿನಿಧಿ ಎಂದು ಪರಿಗಣಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂಬ ಆಯುಕ್ತರ ಸಲಹೆ ಕುರಿತು ಸಾರ್ವಜನಿಕ ಚರ್ಚೆ ಆಗಬೇಕು. ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಯಾದರೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದೀತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಸುಧಾರಣಾ ಸಲಹೆಗಳನ್ನು ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.