ಸ್ವಾಗತಾರ್ಹ ಸರಣಿ ಕ್ರಿಕೆಟ್ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳಂತಾಗಿರುವ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ಪುನರಾರಂಭವಾಗುತ್ತಿರುವುದು ಸ್ವಾಗತಾರ್ಹ. ಎರಡೂ ದೇಶಗಳ ನಡುವಣ ಕ್ರಿಕೆಟ್ ಪಂದ್ಯಗಳೆಂದರೆ ಒಂದು ರೀತಿಯ ಮದ್ದು ಗುಂಡಿಲ್ಲದ ಸಮರವೇ ಆದರೂ ಕ್ರೀಡೆ ಬಾಂಧವ್ಯ ಬೆಸೆಯುವ ಅಸ್ತ್ರ ಎಂಬ ನಂಬಿಕೆ ಇನ್ನೂ ಉಳಿದಿದೆ. ಪಾಕಿಸ್ತಾನ ವಿರುದ್ಧ ಇರುವ ಮೂಲ ಆರೋಪ ಅದು ಭಯೋತ್ಪಾದನೆಯನ್ನು ಪ್ರಚೋದಿಸುತ್ತಿದೆ ಎಂಬುದು. ಈ ಅಂಶವೇ ಎರಡೂ ರಾಷ್ಟ್ರಗಳ ನಡುವೆ ಕ್ರಿಕೆಟ್ ಸಂಬಂಧ ಹಳಸಲು ಕಾರಣವಾಗಿತ್ತು. 2008 ರಲ್ಲಿ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ನಡೆಸಿ ನೂರಾರು ಜನರನ್ನು ಕೊಂದ ನಂತರ ಕ್ರಿಕೆಟ್ ಸರಣಿ ನಿಂತುಹೋಗಿತ್ತು. ಆ ದುರಂತದ ತನಿಖೆ ಇನ್ನೂ ನಡೆಯುತ್ತಿದ್ದು ಪಾಕಿಸ್ತಾನ ಸಕಾರಾತ್ಮಕವಾಗಿ ಸಹಕರಿಸುತ್ತಿಲ್ಲ ಎಂಬ ಆರೋಪ ಇದ್ದೇ ಇದೆ. ಇದೇ ಕಾರಣಕ್ಕಾಗಿ ಕ್ರಿಕೆಟ್ ಸರಣಿ ಪುನರಾರಂಭಕ್ಕೆ ಸುನೀಲ್ ಗಾವಸ್ಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಒಪ್ಪಬಹುದಾದರೂ, ಈ ಸರಣಿಯಿಂದ ವಿರಸ ಕೊನೆಗೊಂಡು ಎರಡೂ ದೇಶಗಳ ಜನರು ಸೌಹಾರ್ದದಿಂದ ಬಾಳಬಹುದು ಎಂಬ ದೂರದ ಆಸೆಯೊಂದು ಚಿಗುರುತ್ತದೆ ಎಂಬುದು ಸುಳ್ಳೇನಲ್ಲ. ಈ ಹಿಂದೆ ಇಂಥದೇ ಕಾರಣಗಳಿಂದ ಹಾಗೂ ಕಾರ್ಗಿಲ್ ಯುದ್ಧದಿಂದ ಕ್ರೀಡಾ ಸಂಬಂಧ ಹಳಸಿಹೋಗಿತ್ತು. ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ನವಾಜ್ ಷರೀಫ್ ಶಾಂತಿಯ ಮಾತುಕತೆಗಳನ್ನಾಡಿದಾಗ ಪಾಕಿಸ್ತಾನ ತಂಡ ಭಾರತಕ್ಕೆ ಬಂದಿತ್ತು. ಕಳೆದ ವರ್ಷ ಭಾರತದಲ್ಲಿ ನಡೆದ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಚಂಡೀಗಢದಲ್ಲಿ ಆಡಲು ಪಾಕಿಸ್ತಾನ ಬಂದಿತ್ತು. ಆಗ ಪ್ರಧಾನಿ ಮನಮೋಹನ್ ಸಿಂಗ್ ಪಾಕ್ ಪ್ರಧಾನಿ ಗಿಲಾನಿ ಅವರನ್ನು ಆಮಂತ್ರಿಸಿದ್ದರು. ಇದು ರಾಜಕೀಯವಾಗಿ ಹೆಚ್ಚು ಫಲಕಾರಿಯಾಗದಿದ್ದರೂ ಸರಣಿ ಪುನರಾರಂಭದ ಸೂಚನೆ ನೀಡಿತ್ತು. ಭಾರತ-ಪಾಕಿಸ್ತಾನ ಸರಣಿ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗೇನೂ ಇಲ್ಲ. ಆಟಗಾರರೂ ಉದ್ವಿಗ್ನಗೊಳ್ಳುತ್ತಾರೆ. ಎರಡೂ ಕಡೆಯ ಜನರಲ್ಲೂ ಏನೇ ಆದರೂ ತಮ್ಮ ತಂಡ ಸೋಲಬಾರದು ಎಂಬ ಛಲ ಮೂಡುತ್ತದೆ. ದೇಶದ ಕ್ರೀಡಾ ವ್ಯವಸ್ಥೆಯಿಂದ ಹೊರಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ, ಪಾಕಿಸ್ತಾನ ವಿರುದ್ಧದ ಸರಣಿಯಿಂದ ಹೆಚ್ಚು ಹಣ ಬರುತ್ತದೆ ಎಂದು ಗೊತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಉದ್ದೇಶವೂ ಆರ್ಥಿಕ ಲಾಭವೇ ಆಗಿದೆ. ಆದರೆ ಆಟದ ದೃಷ್ಟಿಯಿಂದ ಹಾಗೂ ಕ್ರಿಕೆಟ್‌ಪ್ರೇಮಿಗಳ ದೃಷ್ಟಿಯಿಂದ ನೋಡುವುದಾದರೆ ಈ ಪಂದ್ಯಗಳಲ್ಲಿ ರೋಚಕ ಹೋರಾಟ ಕಂಡುಬರುವುದಂತೂ ಖಂಡಿತ. ಜನರು ಮತಾಂಧ ಯೋಚನೆಗಳಿಗೆ ಅವಕಾಶ ಕೊಡದೇ ಸೋಲು-ಗೆಲುವನ್ನು ಒಂದೇ ಭಾವದಿಂದ ನೋಡಿದಾಗ ಮಾತ್ರ ಕ್ರಿಕೆಟ್ ಎರಡೂ ದೇಶಗಳನ್ನು ಒಂದುಗೂಡಿಸಲು ಸಾಧ್ಯ. ಈ ದಿಶೆಯಲ್ಲಿ ಪಾಕಿಸ್ತಾನ ಹೆಚ್ಚು ಮುತುವರ್ಜಿ ವಹಿಸಬೇಕಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದೊಡನೆ ಕೈಜೋಡಿಸಬೇಕಾಗುತ್ತದೆ. ಇಲ್ಲದಿದ್ದರೆ ಈ ಸರಣಿಯೂ ಹಿಂದಿನ ಕ್ರಿಕೆಟ್ ರಾಯಭಾರಗಳು ವಿಫಲವಾದಂತೆ ಅರ್ಥಹೀನವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.