ದೇಣಿಗೆಯ ದುರಾಸೆ ಭ್ರಷ್ಟಾಚಾರ ಎಲ್ಲ ರಾಜಕೀಯ ಪಕ್ಷಗಳ ಮೂಲಬೇರಿನಲ್ಲೇ ಇದೆ. ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ `ದೇಣಿಗೆ~ ಎನ್ನುವ ಹೆಸರಿನಲ್ಲಿ ಸಂಗ್ರಹಿಸಿರುವ ಅಪಾರ ಪ್ರಮಾಣದ ಹಣದ ಮೊತ್ತವನ್ನು ಕಂಡಾಗ ದಿಗಿಲಾಗುತ್ತದೆ. ನಮ್ಮ ರಾಜಕೀಯ ಪಕ್ಷಗಳ ಕೊಳಕು ಮುಖ ಬಹಿರಂಗವಾಗಿದೆ. ಇದು ನಾಚಿಕೆಗೇಡಿನ ವಿಷಯ. `ಪ್ರಜಾಪ್ರಭುತ್ವದಲ್ಲಿ ಸುಧಾರಣೆ ತರಲು ಸಂಘಟನೆ~ಯ ರಾಷ್ಟ್ರೀಯ ಚುನಾವಣಾ ಕಾವಲು ಸಮಿತಿಯು ಮಾಹಿತಿ ಹಕ್ಕು ಕಾಯ್ದೆ ಮೂಲಕ ಆದಾಯ ತೆರಿಗೆ ಇಲಾಖೆಯಿಂದ ಪಡೆದ ದಾಖಲಾತಿಗಳಲ್ಲಿ ಬಂದಿರುವ ವಿವರ ದಿಗಿಲು ಹುಟ್ಟಿಸುವಂತಿದೆ. ಈ ವರದಿಯ ಪ್ರಕಾರ ಕಾಂಗ್ರೆಸ್ ರೂ.1.492.35 ಕೋಟಿ ಸಂಗ್ರಹಿಸಿದೆ. ಬಿಜೆಪಿ ರೂ.769.81 ಕೋಟಿ, ಜೆಡಿಎಸ್ ರೂ.4.63 ಕೋಟಿ ದೇಣಿಗೆ ಸಂಗ್ರಹಿಸಿದೆ. ಪಕ್ಷಗಳು ಘೋಷಿಸಿಕೊಂಡ ದೇಣಿಗೆಯೇ ಇಷ್ಟಿದೆ. ಇನ್ನು ಘೋಷಿಸದೇ ಇರುವ ಆದಾಯದ ಪ್ರಮಾಣ ಅನಂತಪದ್ಮನಾಭ ದೇವಸ್ಥಾನದ ನೆಲಮಾಳಿಗೆಯಲ್ಲಿರುವ ಸಂಪತ್ತನ್ನೂ ಮೀರಿಸುತ್ತದೇನೋ! ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಕ್ಕೆ ಕೂಪನ್ ಮುದ್ರಿಸುವುದು, ಬೇರೆಬೇರೆ ಯೋಜನೆಗಳನ್ನು ರೂಪಿಸಿ ಅದರ ಮೂಲಕ ಹಣ ಸಂಗ್ರಹಿಸುವುದು ಅಕ್ರಮಮಾರ್ಗವೆಂದೇ ಹೇಳಬಹುದು. ಇದನ್ನು ಪಕ್ಷಗಳ ಮುಖಂಡರು ಸಮರ್ಥಿಸಿಕೊಳ್ಳುತ್ತಿರುವುದೂ ಕೂಡ ವಿಪರ್ಯಾಸವೇ ಸರಿ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ಹಾಗೂ ರಾಜಕೀಯ ಪಕ್ಷಗಳು ಪರಸ್ಪರ ಕೈಕೈಹಿಡಿದು ನಡೆಯುತ್ತಿರುವುದು ಸ್ಪಷ್ಟ.ರಾಜಕೀಯ ಪಕ್ಷಗಳ ಆಸ್ತಿ ಹಾಗೂ ಅವು ಮಾಡುತ್ತಿರುವ ಖರ್ಚುವೆಚ್ಚದ ಮೇಲೆ ನಿಗಾ ಇಡಲು ಪ್ರತ್ಯೇಕ ಕಾನೂನೇ ಬೇಕಾಗುತ್ತದೆ. ನಮ್ಮ ದೇಶದ ಯಾವುದೇ ಪಕ್ಷವೂ ತಮ್ಮ ಪಕ್ಷಕ್ಕೆ ಬರುವ ಇಲ್ಲವೇ ಪಕ್ಷದ ನಾಯಕನಿಗೆ ಬರುವ ಉಡುಗೊರೆಗಳ ಬಗ್ಗೆಯಾಗಲಿ, ದೇಣಿಗೆಯ ಬಗ್ಗೆಯಾಗಲಿ ವರದಿ ಸಲ್ಲಿಸುವುದಿಲ್ಲ. ಲೆಕ್ಕಪತ್ರಗಳನ್ನೂ ಇಡುವುದಿಲ್ಲ. ಅದನ್ನು ಎಲ್ಲೂ ಬಹಿರಂಗ ಮಾಡುವುದಿಲ್ಲ. ತೆರಿಗೆ ಪಾವತಿಯಿಂದ ವಿನಾಯಿತಿ ಇರುವುದರಿಂದ ರಾಜಕೀಯ ಪಕ್ಷಗಳ ಆರ್ಥಿಕ ಕಾರ್ಯನಿರ್ವಹಣೆ ಪಾರದರ್ಶಕವಾಗಿರುವುದಿಲ್ಲ. ದೇಣಿಗೆ ಪಡೆಯುವುದೂ ಕೂಡ ಲಂಚ. ಆಡಳಿತ ಪಕ್ಷಗಳು ದೇಣಿಗೆ ಪಡೆಯಲು ಕಂಪೆನಿಗಳಿಗೆ ಮೊರೆ ಹೋಗುತ್ತವೆ. ಇಲ್ಲವೇ ತಮ್ಮ ಕಾರ್ಯಸಾಧನೆಗಾಗಿ ಕಂಪೆನಿಗಳೇ ಲಂಚ ರೂಪದ್ಲ್ಲಲಿ ದೇಣಿಗೆ ಸಲ್ಲಿಸುತ್ತವೆ. ಇದು ಎರಡೂ ಕಡೆಯಿಂದ ನಡೆಯುವ ಅವ್ಯವಹಾರ. ಪರಸ್ಪರ ಅನೈತಿಕ ಒಪ್ಪಂದ. ರಾಜಕೀಯ ಪಕ್ಷಗಳು ಮತದಾರರಿಗೆ ಜವಾಬ್ದಾರಿಯುತವಾಗಿಲ್ಲ. ಯಾವುದೇ ಸಿದ್ಧಾಂತವಿಲ್ಲದ ರಾಜಕಾರಣಿಗಳು ಹಣಸಂಗ್ರಹಣೆಯನ್ನೇ ಅಭಿವೃದ್ಧಿಕಾರ್ಯ ಎಂದುಕೊಂಡಿರುವಂತಿದೆ. ಚುನಾವಣೆಯ ಸಮಯದಲ್ಲಿ ಮತದಾರರಿಗೆ ಟೀವಿ ನೀಡುವ, ಬೈಸಿಕಲ್‌ಗಳನ್ನು ಕೊಡುವ, ಗ್ರೈಂಡರ್, ಮಿಕ್ಸಿ ನೀಡುವ, ಸೀರೆ, ಓಲೆ ನೀಡುವ ಬಹಿರಂಗ ಆಮಿಷ ಒಡ್ಡುವ ರಾಜಕೀಯ ಪಕ್ಷಗಳು ಅದನ್ನು ಮುಂದಿನ ದಿನಗಳಲ್ಲಿ ಶ್ರೀ ಸಾಮಾನ್ಯನ ಹಣದಿಂದ ಕೊಡಲು ಮುಂದಾಗುತ್ತವೆ. ಪಕ್ಷದ ಹೆಸರಿನ್ಲ್ಲಲಿ ಸಂಗ್ರಹಿಸುವ ಹಣವನ್ನು ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತವೆ. ಪೊಳ್ಳು ಸಿದ್ಧಾಂತಗಳನ್ನೇ ಮೈತುಂಬ ತುಂಬಿಕೊಂಡಿರುವ, ಹಣಸಂಗ್ರಹವನ್ನೇ ಗುರಿಯಾಗಿಟ್ಟುಕೊಂಡಿರುವ ಆಸೆಬಾಕ ರಾಷ್ಟ್ರೀಯ ಪಕ್ಷಗಳಿಂದ ಪ್ರಜಾಪ್ರಭುತ್ವದ ಬೇರುಗಳೇ ಸಡಿಲವಾಗುತ್ತಿವೆ. ರಾಜಕೀಯ ಪಕ್ಷಗಳು ಯದ್ವಾತದ್ವಾ ದೇಣಿಗೆ ಪಡೆಯುವುದಕ್ಕೆ ಬಿಗಿಯಾದ ಬೇಲಿ ಹಾಕುವ ಕಾಲ ಈಗ ಸನ್ನಿಹಿತವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.