ಸೇವಾಭಾವ ಮೂಡುವುದೆಂದು? ಸ್ನಾತಕ ಮತ್ತು ಸ್ನಾತಕೋತ್ತರ ವೈದ್ಯಕೀಯ ಪದವೀಧರರು ಗ್ರಾಮೀಣ ಪ್ರದೇಶಗಳಲ್ಲಿ ಒಂದು ವರ್ಷ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ ಹೊರಡಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಸರಿದೂಗಿಸಲು ತೆಗೆದುಕೊಂಡಿರುವ ಈ ಕ್ರಮ ಪ್ರಸ್ತುತ ವರ್ಷದಿಂದಲೇ ಜಾರಿಗೆ ಬರಲಿದೆ. ಗ್ರಾಮೀಣ ಪ್ರದೇಶವೇ ಜೀವಾಳವಾಗಿರುವ ನಮ್ಮ ದೇಶದಲ್ಲಿ ಜನ ಹಳ್ಳಿಗಳಲ್ಲಿ ಸೂಕ್ತ ವೈದ್ಯರಿಲ್ಲದೆ ನರಳುತ್ತಿದ್ದಾರೆ. ನಕಲಿ ವೈದ್ಯರ ಬಲೆಗೆ ಬೀಳುತ್ತಿದ್ದಾರೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಈಗ 1.800 ವೈದ್ಯರ ಕೊರತೆ ಇದೆ. ದೇಶದಲ್ಲಿ ಆರು ಲಕ್ಷ ವೈದ್ಯರ, ಎರಡು ಲಕ್ಷ ದಂತ ವೈದ್ಯರ ಕೊರತೆ ಇದೆ. ವಿಶ್ವದಲ್ಲೇ ಅಧಿಕ ಸಂಖ್ಯೆಯ ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ದೇಶದಲ್ಲಿ ಇಂತಹ ಕೊರತೆ ಇರುವುದು ವಿಪರ್ಯಾಸವೇ ಸರಿ. ಹೆಚ್ಚುತ್ತಿರುವ ಜನಸಂಖ್ಯಾವೇಗಕ್ಕೆ ಹೋಲಿಸಿದರೆ ಕೊರತೆ ಪ್ರಮಾಣ ಅಧಿಕ. ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಅಲ್ಲಿ ವೈದ್ಯರು ಇರುವುದೇ ಇಲ್ಲ. ಸಕಾಲಕ್ಕೆ ವೈದ್ಯಕೀಯ ಸೌಲಭ್ಯ ಸಿಗದೆ ಮೃತಪಟ್ಟವರ ಸಂಖ್ಯೆ ಜಾಸ್ತಿಯೇ ಇದೆ. ವೈದ್ಯಕೀಯ ಶಿಕ್ಷಣ ಪಡೆಯುವವರಲ್ಲಿನ ಸೇವಾ ಮನೋಭಾವದ ಕೊರತೆಯೇ ಇಂತಹ ವೈಪರೀತ್ಯಕ್ಕೆ ಕಾರಣವಾಗಿದೆ. ದುಬಾರಿ ಶುಲ್ಕ ನೀಡಿ ವಿದ್ಯಾಭ್ಯಾಸ ಪೂರೈಸಿದ ವೈದ್ಯರಿಗೆ ಹಣ ಮಾಡುವುದೇ ಮೂಲಮಂತ್ರವಾಗಿದೆ. ವೈದ್ಯಕೀಯ ಶಿಕ್ಷಣ ಮುಗಿದ ಕೂಡಲೇ ನಗರಗಳಲ್ಲಿರುವ ಐಷಾರಾಮಿ ಆಸ್ಪತ್ರೆಗಳಲ್ಲಿ, ಪ್ರತಿಷ್ಠಿತ ಎಂದು ಘೋಷಿಸಿಕೊಳ್ಳುತ್ತಾ ಚಿಕಿತ್ಸೆಗೆ ಬಂದವರಿಗೆ ಲಕ್ಷಾಂತರ ವೆಚ್ಚದ ಪ್ಯಾಕೇಜ್ ರೂಪದ ಬಿಲ್ ಕೊಟ್ಟು ಸುಲಿಗೆ ಮಾಡುವ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಎಲ್ಲರೂ ಆಸೆ ಪಡುತ್ತಾರೆ. ಇಲ್ಲವೇ ವಿದೇಶಕ್ಕೆ ಹಾರಲು ಯತ್ನಿಸುತ್ತಾರೆ. ಹಳ್ಳಿಗಳಲ್ಲಿನ ಬಡಜನರ ಹಿತ ಯಾರಿಗೆ ಬೇಕಾಗಿದೆ? ವೈದ್ಯಕೀಯ ಶಿಕ್ಷಣವನ್ನು `ಬಂಡವಾಳ~ ಎಂದು ಭಾವಿಸುವವರು ಇರುವವರೆಗೆ ಬಡವರ ಆರೋಗ್ಯದ ಬಗ್ಗೆ ಕಾಳಜಿ ಹೇಗೆ ಬರಲು ಸಾಧ್ಯ? ವೈದ್ಯಕೀಯ ಎನ್ನುವುದು ಸೇವೆ ಆಗಬೇಕು. ಬಲವಂತವಾಗಿ ಹಳ್ಳಿಗೆ ತೆರಳುವ ವೈದ್ಯ ಒಲ್ಲದ ಮನಸ್ಸಿನಿಂದ ಚಿಕಿತ್ಸೆ ನೀಡುವುದರಿಂದ ವ್ಯತಿರಿಕ್ತ ಪರಿಣಾಮಗಳು ಅಗುವ ಸಂಭವವಿರುತ್ತದೆ. ವೈದ್ಯಕೀಯ ಶಿಕ್ಷಣ ಪಡೆಯುವವರಲ್ಲೇ ಸೇವಾ ಮನೋಭಾವ ಮೂಡುವಂತಹ ಶಿಕ್ಷಣ ವ್ಯವಸ್ಥೆ ಮೂಡಿಬರಬೇಕು. ವೈದ್ಯಕೀಯ ಶಿಕ್ಷಣ ಮಂಡಳಿ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದರೂ ಫಲಿತಾಂಶ ಶೂನ್ಯ. ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದವರಿಗೆ ಸ್ನಾತಕೋತ್ತರ ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯ ಘೋಷಿಸಿದರೂ ಅದಕ್ಕೆ ಯಾರೊಬ್ಬರೂ ಪ್ರತಿಕ್ರಿಯಿಸಿಲ್ಲ ಎನ್ನುವುದು ನಗರದ ಆಕರ್ಷಣೆ ಎಷ್ಟಿದೆ ಎನ್ನುವುದನ್ನು ಸೂಚಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜುಗಳನ್ನು ತೆರೆದು, ಗ್ರಾಮೀಣ ಆರೋಗ್ಯ ರಕ್ಷಣೆಯ ಮೂರುವರ್ಷದ ಪದವಿ ತರಗತಿಗಳನ್ನು ಆರಂಭಿಸುವ ಯೋಜನೆ ಕಾರ್ಯಗತಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ವರ್ಷ ಸೇವೆ ಸಲ್ಲಿಸುವ ಬಗ್ಗೆ ಮುಚ್ಚಳಿಕೆ ಬರೆಯಿಸಿಕೊಳ್ಳುವ ನಿಯಮವೂ ಬರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.