ಆ್ಯಸಿಡ್ ದಾಳಿ ತಡೆಗೆ ಕ್ರಮ ಎಲ್ಲಿ? ಮಹಿಳೆಯರ ಮೇಲಿನ ಆ್ಯಸಿಡ್ ದಾಳಿ ನಿಯಂತ್ರಣಕ್ಕಾಗಿ ರಾಷ್ಟ್ರದಲ್ಲಿ ಆ್ಯಸಿಡ್ ಮಾರಾಟ ತಡೆಗೆ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕೇಳಿರುವುದು ಸರಿಯಾಗಿಯೇ ಇದೆ. ಈ ನಿಟ್ಟಿನಲ್ಲಿ ಸಮಗ್ರ ಪ್ರಮಾಣಪತ್ರ ಸಲ್ಲಿಸಬೇಕೆಂದು ಕೇಂದ್ರ ಗೃಹ ಸಚಿವಾಲಯಕ್ಕೆ ಕೋರ್ಟ್ ನಿರ್ದೇಶಿಸಿರುವುದು ಮಹತ್ವದ ಹೆಜ್ಜೆ. ಈ ಸಂಬಂಧದಲ್ಲಿ 2011ರ ಫೆಬ್ರುವರಿಯಲ್ಲಿ ಕೋರ್ಟ್ ನೀಡಿದ್ದ ಸೂಚನೆಗೆ ತಮ್ಮ ಉತ್ತರಗಳನ್ನು ನೀಡಬೇಕೆಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮಹಿಳೆಯರ ವಿರುದ್ಧದ ಆ್ಯಸಿಡ್ ದಾಳಿ ಪ್ರಕರಣಗಳನ್ನು ಹೆಚ್ಚು ಗಂಭೀರವಾಗಿ ಸಮಾಜ ಹಾಗೂ ಸರ್ಕಾರಗಳು ಪರಿಗಣಿಸಬೇಕಿರುವ ಅಗತ್ಯದತ್ತ ಬೆರಳು ಮಾಡುವ ನಿರ್ದೇಶನ ಇದು. ಜೊತೆಗೆ ಆ್ಯಸಿಡ್ ದಾಳಿ ಸಂತ್ರಸ್ತರತ್ತ ನಮ್ಮ ಸರ್ಕಾರಗಳು ತೋರುತ್ತಿರುವ ನಿಧಾನಗತಿಯ ಸ್ಪಂದನಕ್ಕೆ ಬೀಸಿರುವ ಚಾಟಿಯೇಟು ಸಹ ಆಗಿದೆ. ಮಹಿಳೆಯ ಮೇಲೆ ನಡೆಯುವಂತಹ ಅತಿ ಘೋರ ಅಪರಾಧ ಆ್ಯಸಿಡ್ ದಾಳಿ. ತನ್ನ ವಿರುದ್ಧ ಸೆಡ್ಡುಹೊಡೆದಾಕೆಗೆ ಆ್ಯಸಿಡ್ ಸುರಿದು ಮುಖಹೀನಗೊಳಿಸುವ ವಿಕೃತತೆ ನಾಗರಿಕ ಸಮಾಜದ ದೊಡ್ಡ ಕಳಂಕ. ಇಂತಹ ದಾಳಿಗಳನ್ನು ಸಾಮಾನ್ಯವಾಗಿ ನಡೆಸಿರುವವರು ಪತಿ, ಪ್ರಿಯಕರ, ಮದುವೆಯಾಗೆಂದು ಪೀಡಿಸುವವರು, ಮನೆ ಮಾಲೀಕರು ಅಥವಾ ಉದ್ಯೋಗದಾತ. ಮಹಿಳೆಯ ಮೇಲೆ ಅಧಿಕಾರದ ಹಿಡಿತ ಸಾಧಿಸಲು ಯತ್ನಿಸುವಂತಹವರು ಇವರು. ಆದರೆ ಇದನ್ನು ಪ್ರಶ್ನಿಸುವ ಮಹಿಳೆಯ ವಿರುದ್ಧ ಹಗೆತನ ಸಾಧಿಸಲು ಪುರುಷರಿಗೆ ಆ್ಯಸಿಡ್ ಪ್ರಬಲ ಅಸ್ತ್ರವಾಗಿರುವುದು ದುರದೃಷ್ಟಕರ. ರಾಜ್ಯದಲ್ಲಿ 1999ರಿಂದ 2011ರವರೆಗೆ 65ಕ್ಕಿಂತ ಹೆಚ್ಚು ಮಹಿಳೆಯರು ಆ್ಯಸಿಡ್ ದಾಳಿಗೆ ಗುರಿಯಾಗಿದ್ದಾರೆ. ಆ್ಯಸಿಡ್ ದಾಳಿಗಳಿಗೆ ನಿರ್ದಿಷ್ಟವಾದ ಕಾನೂನುಗಳನ್ನು ರೂಪಿಸುವಲ್ಲಿ ಕಾನೂನು ಇನ್ನೂ ಮುಂದಡಿ ಇಡಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆ್ಯಸಿಡ್‌ನ ಸುಲಭ ಲಭ್ಯತೆಯನ್ನು ನಿಯಂತ್ರಿಸುವುದು ಮುಖ್ಯ. ನೆರೆಯ ಬಾಂಗ್ಲಾದೇಶದಲ್ಲಿ ಆ್ಯಸಿಡ್ ಬಳಕೆಯನ್ನು ಈಗಾಗಲೇ ನಿಷೇಧಿಸಿರುವುದು ನಮಗೆ ಮಾದರಿಯಾಗಬೇಕು. ಆ್ಯಸಿಡ್ ದಾಳಿಯನ್ನು ಗಂಭೀರ ಅಪರಾಧವಾಗಿಸಲು ರಾಷ್ಟ್ರೀಯ ಮಹಿಳಾ ಆಯೋಗ ಕರಡು ವಿಧೇಯಕವೊಂದನ್ನು ಮಂಡಿಸಿದೆ. ವಾಣಿಜ್ಯ ಹಾಗೂ ವೈಜ್ಞಾನಿಕ ಉದ್ದೇಶಗಳಿಗೆ ಹೊರತುಪಡಿಸಿ ಆ್ಯಸಿಡ್ ಮಾರಾಟ ಹಾಗೂ ವಿತರಣೆ ನಿಷೇಧಿಸಬೇಕು ಎಂದು 2009ರ ಜುಲೈ ತಿಂಗಳಲ್ಲಿ ಕಾನೂನು ಆಯೋಗ ಸಲ್ಲಿಸಿರುವ ತನ್ನ 226ನೇ ವರದಿಯಲ್ಲಿ ತಿಳಿಸಿದೆ. ಆ್ಯಸಿಡ್ ಖರೀದಿದಾರರ ವಿವರಗಳನ್ನು ದಾಖಲು ಮಾಡಿಕೊಳ್ಳಬೇಕೆಂಬ ಶಿಫಾರಸನ್ನೂ ಅದು ಮಾಡಿದೆ. ಈ ಮಧ್ಯೆ `1973ರ ಅಪರಾಧ ಪ್ರಕ್ರಿಯೆ ಸಂಹಿತೆ~ಯನ್ನು 2009ರಲ್ಲಿ ತಿದ್ದುಪಡಿ ಮಾಡಿ ಸೆಕ್ಷನ್ 357ಎ ಯನ್ನು ಸೇರಿಸಲಾಗಿದೆ. ಈ ಪ್ರಕಾರ, ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಹಣಕಾಸು ನೆರವಿನ ಪರಿಹಾರ ನೀಡಲು ಕೇಂದ್ರದ ಜೊತೆಗೂಡಿ ಪ್ರತಿ ರಾಜ್ಯ ಸರ್ಕಾರಗಳೂ ಯೋಜನೆಗಳನ್ನು ರೂಪಿಸಬೇಕಿದೆ. ಆದರೆ ಈ ಸೆಕ್ಷನ್ ಜಾರಿಯಾಗಿ ಒಂದು ವರ್ಷಕ್ಕಿಂತ ಹೆಚ್ಚಾಗಿದ್ದರೂ ಏನೂ ಕ್ರಮ ಕೈಗೊಳ್ಳದ ಬಗೆಗೂ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈಗಲಾದರೂ ಸರ್ಕಾರಗಳು ಕೂಡಲೇ ಕಾರ್ಯ ಪ್ರವೃತ್ತವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.