ಭಕ್ತರ ರಕ್ಷಣೆಗೆ ಕ್ರಮ ಅಗತ್ಯ ಅಮರನಾಥ ಯಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. 39 ದಿನಗಳ ಈ ವರ್ಷದ ಯಾತ್ರೆಗೆ ಇದುವರೆಗೆ ಆರು ಲಕ್ಷಕ್ಕೂ ಹೆಚ್ಚುಮಂದಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದಾರೆ. ದಿನಕ್ಕೆ ನಲವತ್ತು ಸಾವಿರ ಜನ ದರ್ಶನ ಪಡೆಯುತ್ತಿದ್ದಾರೆ. ಆದರೆ ಭಕ್ತಾದಿಗಳ ಸುರಕ್ಷತೆ ವಿಷಯದಲ್ಲಿ ಅಭದ್ರತೆ ಕಾಡುತ್ತಿರುವುದು ಆತಂಕದ ವಿಷಯ. ನಾಲ್ಕು ವಾರದಲ್ಲಿ 97 ಯಾತ್ರಾರ್ಥಿಗಳು ಸತ್ತಿರುವುದು ದುರದೃಷ್ಟಕರ ಸಂಗತಿ. ಸುಪ್ರಿಂಕೋರ್ಟ್ ಕೂಡ ಈ ಬಗ್ಗೆ ಕಳವಳ ವ್ಯಕ್ತ ಪಡಿಸಿ ಯಾತ್ರಾರ್ಥಿಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದು, ಪರಿಸ್ಥಿತಿಯ ಖುದ್ದು ಅರಿವಿಗೆ ಉನ್ನತಮಟ್ಟದ ಸಮಿತಿಯನ್ನು ನೇಮಿಸಿರುವುದು ವಿಷಯದ ಗಂಭೀರತೆಯನ್ನು ಸೂಚಿಸುತ್ತದೆ. 12.755 ಅಡಿ ಎತ್ತರದ ಈ ಶಿಖರ ಪ್ರದೇಶದ ಪ್ರವಾಸಕ್ಕೆ ಗುಂಡಿಗೆ ಗಟ್ಟಿಯಿರುವವರು ಮಾತ್ರ ಹೋಗಲು ಸಾಧ್ಯ. ಆದರೆ ಭಗವಂತ ಎಷ್ಟು ಎತ್ತರದಲ್ಲಿದ್ದರೂ ಭಕ್ತರು ಅವನ ಬಳಿ ಹೋಗಲು ತವಕಿಸುವುದು ನಮ್ಮ ನಡುವಿನ ನಂಬಿಕೆ. ಆ ನಂಬಿಕೆಯನ್ನು ಕಾಪಾಡುವ ಹೊಣೆ ಇಡೀ ಪ್ರದೇಶದ ಹೊಣೆಹೊತ್ತುಕೊಳ್ಳುವ ಶ್ರೀ ಅಮರನಾಥ ಶ್ರೀಕ್ಷೇತ್ರ ಮಂಡಳಿಯದ್ದು. ಅಲ್ಲಿನ ನಿಯಮಗಳ ಪ್ರಕಾರ ಪ್ರವಾಸಿಗರು ಆರೋಗ್ಯ ತಪಾಸಣೆಗೊಳಗಾಗಿ ವೈದ್ಯಕೀಯ ಪ್ರಮಾಣ ಪತ್ರ ತರುವುದು ಕಡ್ಡಾಯ. ಬಹಳಷ್ಟು ಪ್ರಕರಣಗಳಲ್ಲಿ ಭಕ್ತಾದಿಗಳು ನಕಲಿ ಪ್ರಮಾಣಪತ್ರ ತರುತ್ತಾರೆ. ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಗದ ಅಸಹಾಯಕ ಪರಿಸ್ಥಿತಿ ಅಲ್ಲಿದೆ. ಅಮರನಾಥ ಯಾತ್ರೆ ಸಮಯವನ್ನು 39 ದಿನಗಳಿಗೆ ನಿಗದಿ ಮಾಡಿರುವುದರ ಬಗ್ಗೆಯೂ ಆಕ್ಷೇಪವಿದೆ. ದರ್ಶನದ ಅವಧಿ ಕಡಿಮೆಯಾಗಿರುವುದರಿಂದ ಅದನ್ನು ಮೂರು ತಿಂಗಳ ಮಟ್ಟಿಗೆ ವಿಸ್ತರಣೆ ಮಾಡುವಂತೆ ಬಿಜೆಪಿ ವಾದಿಸುತ್ತಲೇ ಬಂದಿದೆ. ಈ ಹಿಂದಿನ ವರ್ಷಗಳಲ್ಲಿ ವಿಸ್ತರಣೆ ಮಾಡಿದ ಉದಾಹರಣೆಗಳೂ ಇದೆ. ಕಡೇ ದಿನಗಳಲ್ಲಿ ದರ್ಶನಾಕಾಂಕ್ಷಿಗಳ ಒತ್ತಡ ಹೆಚ್ಚುವುದರಿಂದ ಸಾವುನೋವುಗಳು ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಆದರೆ ದರ್ಶನದ ಸಮಯ ವಿಸ್ತರಣೆಗೆ ಮಂಡಳಿ ಒಪ್ಪಿಲ್ಲ. ಮುಂದಿನ ದಿನಗಳಲ್ಲಿ ಹಿಮಸುರಿತ ಹೆಚ್ಚಾಗುವುದರಿಂದ ಪ್ರವಾಸಿಗರಿಗೆ ಅನಾನುಕೂಲವಾಗುವ ಸಾಧ್ಯತೆಯೇ ಹೆಚ್ಚು ಎಂದು ಅದು ವಾದಿಸುತ್ತಿದೆ. ಹೀಗಾಗಿ ಪ್ರತಿಷ್ಠೆಯೇ ಇಲ್ಲಿ ತೊಡಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಅಮರನಾಥಕ್ಕೆ ತೆರಳುವುದರಿಂದ ಅಲ್ಲಿ ವಿವಿಧ ಹಂತಗಳಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ದೇವಸ್ಥಾನ ಮಂಡಳಿಯ ಕರ್ತವ್ಯವೂ ಆಗಿದೆ. ಅಲ್ಲದೆ, ಸುರಕ್ಷಿತ ರಸ್ತೆ ನಿರ್ಮಾಣವೂ ಅಗತ್ಯ. ಕಿರಿದಾದ ಪಥ ಅಗಲೀಕರಣ ಆಗಲೇ ಬೇಕಾದ ಕೆಲಸ. ವೈದ್ಯಕೀಯ ಸೌಲಭ್ಯವೂ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಏಕೆ ಕಲ್ಪಿಸಿಲ್ಲ ಎಂದು ಸುಪ್ರಿಂಕೋರ್ಟ್ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೂ, ಕೇಂದ್ರ ಸರ್ಕಾರಕ್ಕೂ ವಿವರಣೆ ಕೇಳಿರುವುದು ಸೂಕ್ತವಾಗಿಯೇ ಇದೆ. ಇದು ಸರ್ಕಾರದ ಕೆಲಸವೂ ಹೌದು. ಸಾಂಸ್ಕೃತಿಕವಾಗಿಯೂ ಮಹತ್ವದ್ದಾಗಿರುವ, ಪ್ರವಾಸೋದ್ಯಮ ದೃಷ್ಟಿಯಿಂದಲೂ ಗಣನೀಯವಾದ ಅಮರನಾಥ ಕ್ಷೇತ್ರದಲ್ಲಿ ಸುರಕ್ಷತೆ ನಿಯಮಗಳನ್ನು ಬಿಗಿಗೊಳಿಸಬೇಕಾದ್ದು ಸರ್ಕಾರದ ಕರ್ತವ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.