ವಿವೇಚನಾರಹಿತ ಮುಷ್ಕರ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಷ್ಕರ ಹೂಡಿದ ಪರಿಣಾಮ ಬಸ್ ಸೇವೆ ಇಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಷ್ಕರದ ಬಿಸಿ ರಾಜ್ಯದ ಉದ್ದಗಲಕ್ಕೂ ತಟ್ಟಿದೆ. ಮಲೆನಾಡು ಮತ್ತು ಕರಾವಳಿಯ ಕೆಲವು ಸೀಮಿತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಜನಸಾಮಾನ್ಯರ ದೈನಂದಿನ ಓಡಾಟಕ್ಕೆ ತೀವ್ರ ಅಡಚಣೆ ಆಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಸಮಿತಿ ನೀಡಿದ ಕರೆ ಅನ್ವಯ ನೌಕರರು ಕೆಲಸಕ್ಕೆ ಹಾಜರಾಗದ ಕಾರಣ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಇದರಿಂದ ಪ್ರಯಾಣಿಕರು ಪರಿತಪಿಸಬೇಕಾಯಿತು. ಆಟೊ ರಿಕ್ಷಾ ಮತ್ತು ಟ್ಯಾಕ್ಸಿಗಳ ಕೆಲವು ಚಾಲಕರು ಪರಿಸ್ಥಿತಿಯ ದುರ್ಲಾಭ ಪಡೆದ ನಿದರ್ಶನಗಳೂ ವರದಿಯಾಗಿವೆ. ಅಗತ್ಯ ಸೇವೆಗಳಲ್ಲಿ ಸಾರಿಗೆಯೂ ಒಂದು. ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ 1.08 ಲಕ್ಷ ನೌಕರರು ಮತ್ತು ಕಾರ್ಮಿಕರ ವೇತನವನ್ನು ಜನಸಾಮಾನ್ಯರು ಖರೀದಿಸುವ ಟಿಕೆಟ್‌ನಿಂದ ಬರುವ ಆದಾಯದಿಂದಲೇ ಭರಿಸಬೇಕಾಗಿದೆ. ಜನರಿಗೆ ಜವಾಬ್ದಾರಿಯಾಗಿರಬೇಕಾದ ನೌಕರರ ಮುನಿಸು ಈಗ ಸಾರ್ವಜನಿಕರ ಹಿಡಿಶಾಪಕ್ಕೆ ಗುರಿಯಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವ ಬಹುಪಾಲು ಜನರು ಬಡವರು ಮತ್ತು ಮಧ್ಯಮ ವರ್ಗದವರು. ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಬಿಟ್ಟರೆ ಪ್ರಯಾಣಕ್ಕೆ ಬೇರೆ ವ್ಯವಸ್ಥೆ ಇಲ್ಲ. ಮೇಲಾಗಿ ರಾಜ್ಯದಲ್ಲಿ ಈಗ ಭೀಕರ ಬರ ಇದೆ. ಇದನ್ನೆಲ್ಲ ಗ್ರಹಿಸದೆ ಕೈಗೊಂಡಿರುವ ಮುಷ್ಕರದ ನಿರ್ಧಾರ ವಿವೇಚನಾರಹಿತವಾದುದು. 1996ರಿಂದ ಸಾರಿಗೆ ನಿಗಮಗಳ ಆಡಳಿತ ವರ್ಗವು ಕಾರ್ಮಿಕರೊಂದಿಗೆ ಚರ್ಚೆ ನಡೆಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ನೌಕರರ ಯಾವುದೇ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದು ಕಾರ್ಮಿಕ ಸಂಘಗಳ ಜಂಟಿ ಸಮಿತಿ ದೂರಿದೆ. ಸರ್ಕಾರದ ಮುಂದೆ 40ಕ್ಕೂ ಹೆಚ್ಚು ಬೇಡಿಕೆಗಳನ್ನು ಇಟ್ಟಿದೆ. ನೌಕರರ ಬೇಡಿಕೆಗಳು ನ್ಯಾಯಸಮ್ಮತ ಆಗಿರಬಹುದು. ಆದರೆ, ಅವುಗಳನ್ನು ಈಡೇರಿಸಿಕೊಳ್ಳಲು ಮುಷ್ಕರ ಒಂದೇ ಮಾರ್ಗವಲ್ಲ. ಲಕ್ಷಾಂತರ ಜನರಿಗೆ ಅತ್ಯಗತ್ಯವಾಗಿರುವ ಸಾರಿಗೆಯಂಥ ಸೇವೆಗೆ ಅಡಚಣೆ ಉಂಟುಮಾಡುವ ತೀರ್ಮಾನ ಅಕ್ಷಮ್ಯ. ಮುಷ್ಕರದಿಂದ ಸಾರಿಗೆ ನಿಗಮಗಳ ಮೇಲೆ ಮತ್ತು ಒಟ್ಟಾರೆ ರಾಜ್ಯದ ಅರ್ಥ ವ್ಯವಸ್ಥೆ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಕ್ಕೆ ಯಾರು ಹೊಣೆ? ಸರ್ಕಾರ ಮತ್ತು ಕಾರ್ಮಿಕ ಮುಖಂಡರು ಸಮಾಲೋಚನೆ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಸರ್ಕಾರ ಹಾಗೂ ಕಾರ್ಮಿಕ ಮುಖಂಡರು ಪ್ರತಿಷ್ಠೆಗೆ ಅಂಟಿಕೊಳ್ಳುವುದು ತರವಲ್ಲ. ನೌಕರರ ವೇತನದಲ್ಲಿ ಶೇ 18 ರಿಂದ 23 ರಷ್ಟು ಹೆಚ್ಚಳ ಮಾಡಲಾಗಿದೆ. ಇನ್ನಷ್ಟು ಹೆಚ್ಚಿಸುವ ಸಾಮರ್ಥ್ಯ ನಿಗಮಗಳಿಗೆ ಇಲ್ಲ. ಹೆಚ್ಚಿಸಲೇಬೇಕಾದ ಅನಿವಾರ್ಯ ಒದಗಿದರೆ ಅದರ ನೇರ ಪರಿಣಾಮ ಪ್ರಯಾಣಿಕರಿಗೆ ತಟ್ಟುತ್ತದೆ ಎಂದು ಸರ್ಕಾರ ಹೇಳಿದೆ. ಅಂದರೆ ಟಿಕೆಟ್ ದರ ಹೆಚ್ಚಿಸಬೇಕಾಗುತ್ತದೆ ಎಂದರ್ಥ. ಹಿಂದೆ ಮುಷ್ಕರಗಳಿಂದಲೇ ಸಾರಿಗೆ ನಿಗಮ ಅಧೋಗತಿಗೆ ಇಳಿದಿತ್ತು ಎಂಬುದನ್ನು ನೌಕರರು ಮರೆಯಬಾರದು. ರಾಜ್ಯ ಸಾರಿಗೆ ನಿಗಮಕ್ಕೆ ರಾಷ್ಟ್ರ ಮಟ್ಟದಲ್ಲಿ ಈಗ ಒಳ್ಳೆಯ ಹೆಸರಿದೆ. ಅದನ್ನು ಕೆಡಿಸುವ ಮತ್ತು ನಷ್ಟಕ್ಕೆ ದೂಡುವ ಪ್ರಯತ್ನಗಳು ಕೂಡಲೇ ಕೊನೆಗೊಳ್ಳುವುದು ವಿಹಿತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.