ಈ ವೈಭೋಗ ಸರಿಯೆ? ಆಂಧ್ರಪ್ರದೇಶ ಸಾರಿಗೆ ಸಚಿವ ಬೊತ್ಸ ಸತ್ಯನಾರಾಯಣ ಅವರ ಮಗಳ ವೈಭವೋಪೇತ ವಿವಾಹ ವಿವಾದವನ್ನು ಸೃಷ್ಟಿಸಿದೆ. ಈ ವಿವಾಹದ ಐಭೋಗದ ಸಿರಿ ಕಂಡವರಿಗೆ ಅಚ್ಚರಿಯ ಆಘಾತ ಹಾಗೂ ಆಕ್ರೋಶದ ಭಾವನೆಗಳು ಸಮಪ್ರಮಾಣದ್ಲ್ಲಲಿ ಉಂಟಾಗಿರುವುದು ಸಹಜ. ಸಂಪತ್ತಿನ ಕೀಳು ಪ್ರದರ್ಶನದ ದ್ಯೋತಕವಾಗಿದೆ ಈ ವಿವಾಹ. ವಿವಾಹಮಂಟಪ ಸಿಂಗರಿಸಲು ಆಮದು ಮಾಡಿಕೊಂಡ ಹೂಗಳ ವೆಚ್ಚವೇ ಅಂದಾಜು ರೂ ಒಂದು ಕೋಟಿ ಎಂಬುದು ಈ ವಿವಾಹದ ವಿಜೃಂಭಣೆಗೆ ದ್ಯೋತಕ. ವಿಜಯನಗರಂ ಬಳಿಯ ಪ್ರದೀಪನಗರದಲ್ಲಿ ನಡೆದ ಈ ಆಡಂಬರದ ಮದುವೆಗೆ ಸಾಕ್ಷಿಯಾಗಲು ಆಮಂತ್ರಿತರಾಗಿದ್ದವರು 80,000 ಮಂದಿ. ಹಲವು ಕೇಂದ್ರ ಸಚಿವರು, ರಾಜ್ಯಪಾಲರುಗಳು, ಸಂಸತ್ ಸದಸ್ಯರು ಹಾಗೂ ಇಡೀ ರಾಜ್ಯ ಸಂಪುಟವೇ ಈ ಅದ್ದೂರಿ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ವಿವಾಹದ ಸ್ಥಳದಲ್ಲಿ 700 ಪೊಲೀಸ್ ಕಾನ್‌ಸ್ಟೇಬಲ್‌ಗಳು, 35 ಡಿವೈಎಸ್‌ಪಿ ಹಾಗೂ 120 ಠಾಣಾಧಿಕಾರಿಗಳು ನಿಯೋಜಿತರಾಗ್ದ್ದಿದರೆಂಬುದು ಪ್ರಜಾತಂತ್ರದ ಅಣಕ. ವಿವಾಹ ಸಿದ್ಧತೆಗಳ ಅಂಗವಾಗಿ 500 ಖಾಸಗಿ ಟ್ಯಾಕ್ಸಿಗಳನ್ನು ಒದಗಿಸಲು ರಾಜ್ಯದ ಸಾರಿಗೆ ಇಲಾಖೆಯೇ ಸುತ್ತೋಲೆಯನ್ನು ಕಳಿಸಿರುವುದಂತೂ ನಾಚಿಕೆಗೇಡಿನ ಸಂಗತಿ. ವಿದ್ಯುತ್ ಸಮಸ್ಯೆ ಆಂಧ್ರಪ್ರದೇಶವನ್ನೂ ಕಾಡುತ್ತಿದೆ. ಆದರೆ ಈ ವಿವಾಹ ಸಮಾರಂಭಕ್ಕೆ ಮಾತ್ರ ಯಾವುದೇ ವಿದ್ಯುತ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವಲ್ಲಿ ಸಾರ್ವಜನಿಕ ಅಧಿಕಾರದ ದುರುಪಯೋಗ ನಡೆದಿದೆ. ಆಡಳಿತ ಯಂತ್ರವನ್ನು ಯಾವುದೇ ಎಗ್ಗಿಲ್ಲದೆ ದುರುಪಯೋಗ ಮಾಡಿಕೊಂಡಿರುವಂತಹ ಈ ಸೊಕ್ಕಿನ ಪರಮಾವಧಿ ಖಂಡನೀಯ. ಆಂಧ್ರದಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಪ್ರತಿಷ್ಠೆ ಮೊದಲೇ ಕೆಳಮಟ್ಟದಲ್ಲಿದೆ. ಈಗ ಪುತ್ರಿಯ ಮದುವೆಗಾಗಿ ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ಸತ್ಯನಾರಾಯಣ ಅವರು ಮಾಡಿರುವ ಕೋಟ್ಯಂತರ ರೂಪಾಯಿ ದುಂದುವೆಚ್ಚ ಮತ್ತಷ್ಟು ವಿವಾದ ಸೃಷ್ಟಿಸಿರುವುದು ಸಹಜ ಬೆಳವಣಿಗೆ. ವಿವಾಹದ ಸ್ಥಳದ ಸಮೀಪ ಪಂಚ ತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದ ರಾಜ್ಯ ಸಚಿವರು ಪರಾಮರ್ಶೆ ಸಭೆ ನಾಟಕ ಬೇರೆ ಆಡಿದ್ದಾರೆ. ಸಚಿವರ ಪ್ರವಾಸದ ವೆಚ್ಚಗಳನ್ನು ಭರಿಸಲು ನಡೆಸಿದ ಸಭೆಗಳಾಗಿದ್ದವು ಇವು ಎಂಬುದನ್ನು ತಿಳಿಯದಷ್ಟು ಜನರು ದಡ್ಡರೇನಲ್ಲ. ಈ ದುಂದುವೆಚ್ಚ, ರಾಜ್ಯ ಸಂಪನ್ಮೂಲಗಳ ಪೋಲಾಗುವಿಕೆ ಹಾಗೂ ಆಡಳಿತಯಂತ್ರದ ದುರುಪಯೋಗಗಳು ಆಘಾತಕಾರಿ. ವಿವಾಹ ಸಮಾರಂಭಗಳಲ್ಲಿ ಇಂದ್ರಲೋಕವನ್ನೇ ಧರೆಗಿಳಿಸುವ ಪ್ರವೃತ್ತಿ ಇತ್ತೀಚಿನ ದಶಕಗಳಲ್ಲಿ ಹೆಚ್ಚಾಗಿದೆ. ಈ ಬಗೆಯ ವೈಭೋಗದ ವಿವಾಹ ಏರ್ಪಡಿಸಿದ ರಾಜಕಾರಣಿಗಳಲ್ಲಿ ಇವರೇ ಮೊದಲೇನಲ್ಲ ಎಂಬುದೂ ನಿಜ. ಆದರೆ ಇಂತಹ ಅದ್ದೂರಿ ಮದುವೆಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನೇನೂ ನೀಡುವುದಿಲ್ಲ. ಕಾಕತಾಳೀಯ ಎಂಬಂತೆ `ರಾಜಕೀಯ ವ್ಯವಸ್ಥೆಯೊಳಗೆ ಬದಲಾವಣೆ ತರಬೇಕಿದೆ. ಜನಸಾಮಾನ್ಯರನ್ನು ಒಳಗೊಳ್ಳಬೇಕಿದೆ~ ಎಂಬಂತಹ ಆಶಯಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ‌್ಯಾಲಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮೊದಲು ಅವರ ಪಕ್ಷದೊಳಗೇ ಸುಧಾರಣೆ ಆಗಬೇಕಿರುವುದು ಅಗತ್ಯ. ಪಾಳೇಗಾರಿಕೆ ಗತ್ತಿನ ಆಡಳಿತ ಹಾಗೂ ಜೀವನಶೈಲಿಗಳಲ್ಲಿನ ಬದಲಾವಣೆಗಳು ಮೊದಲು ಈ ಕಾಂಗ್ರೆಸ್ ನಾಯಕರುಗಳಲ್ಲೇ ಆಗಬೇಕಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.