ಸ್ವಾಸ್ಥ್ಯ ಕಾಪಾಡುವ ಹೊಣೆ ಯಾರದು? ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಕಗ್ಗಂಟಾಗಿ ಪರಿಣಮಿಸಿದೆ. ಸಮಸ್ಯೆ ಉಲ್ಬಣಿಸಿ ಎರಡು-ಮೂರು ತಿಂಗಳಾದರೂ ಅದನ್ನು ಪರಿಹರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಇನ್ನೂ ಸಾಧ್ಯವಾಗಿಲ್ಲ. ವಸತಿ ಪ್ರದೇಶಗಳಲ್ಲಿ ಗುಡ್ಡೆಯಾಗಿ ಬಿದ್ದಿರುವ ಕಸ ಕೊಳೆತು ದುರ್ನಾತ ಬೀರತೊಡಗಿದೆ. ಜನ ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಿತಿ ಒದಗಿದೆ. ಇದಕ್ಕೆ ಪಾಲಿಕೆಯ ನಿರ್ಲಕ್ಷ್ಯವೇ ಪ್ರಮುಖ ಕಾರಣ. ತ್ಯಾಜ್ಯ ವಿಲೇವಾರಿ ಸಮಸ್ಯೆ ಬಿಗಡಾಯಿಸಲು ಕಸದ ಮಾಫಿಯಾ ಕಾರಣ ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ಆರ್.ಅಶೋಕ ಅವರೇ ಒಪ್ಪಿಕೊಂಡಿರುವುದು ಸಮಸ್ಯೆಯ ಮತ್ತೊಂದು ಮಗ್ಗುಲನ್ನು ತೆರೆದಿಟ್ಟಿದೆ. ಈ ದುಷ್ಟ ಕೂಟವನ್ನು ಬಗ್ಗುಬಡಿಯಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಕಸದ ಮಾಫಿಯಾ ಈ ಹಂತ ಮುಟ್ಟಲು ಅವಕಾಶ ಮಾಡಿಕೊಟ್ಟವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ರಾಜಧಾನಿಯಲ್ಲಿ ಪ್ರತಿನಿತ್ಯ ಸುಮಾರು ಐದು ಸಾವಿರ ಟನ್ ಕಸ ಸಂಗ್ರಹವಾಗುತ್ತಿದೆ. ಕಸ ಸಂಗ್ರಹ ಮತ್ತು ಸಾಗಣೆ ವಹಿವಾಟು ವಾರ್ಷಿಕ 400 ಕೋಟಿ ರೂಪಾಯಿಯಷ್ಟು ಬೃಹತ್ ಬಾಬ್ತು. ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೈಜೋಡಿಸದಿದ್ದರೆ ಈ ಮಾಫಿಯಾ ಇಷ್ಟರಮಟ್ಟಿಗೆ ಹಿಡಿತ ಸಾಧಿಸಲು ಸಾಧ್ಯವೆ ಎಂಬುದರ ಕುರಿತು ಸರ್ಕಾರ ಈಗಲಾದರೂ ಗಂಭೀರವಾಗಿ ಯೋಚಿಸಬೇಕು. ಸೂರತ್‌ನಲ್ಲಿ 1994ರಲ್ಲಿ ಮಾರಕ ಪ್ಲೇಗ್ ಹರಡಲು ನೈರ್ಮಲ್ಯ ಸಮಸ್ಯೆಯೂ ಪ್ರಧಾನ ಕಾರಣವಾಗಿತ್ತು. ಕಸದ ಜೊತೆ ಮಳೆನೀರು ಸೇರಿದರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹೊಸ ರೋಗ ರುಜಿನಗಳಿಂದ ನರಳುತ್ತಿರುವ ಜನರ ಬದುಕಿನೊಂದಿಗೆ ತ್ಯಾಜ್ಯ ವಸ್ತುಗಳ ಮಾಲಿನ್ಯವೂ ಚೆಲ್ಲಾಟ ಆಡಲು ಬಿಡಬಾರದು. ಕಸ ವಿಲೇವಾರಿ ಮಾಡಿ ಸ್ವಾಸ್ಥ್ಯ ಕಾಪಾಡಿ ಎಂದು ನಗರವಾಸಿಗಳು ಅಂಗಲಾಚುವ ಸ್ಥಿತಿ ಉಂಟಾಗಿದೆ. ಇಂತಹ ಸ್ಥಿತಿಗೆ ಕಾರಣವಾದ ಬಿಬಿಎಂಪಿ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ. ಸ್ವಚ್ಛ ಬೆಂಗಳೂರು ಎಂಬ ಪಾಲಿಕೆಯ ಘೋಷಣೆ ನಗೆಪಾಟಲಿಗೆ ಈಡಾಗಿದೆ. ನಗರದ ಜನಸಂಖ್ಯೆ ಶರವೇಗದಲ್ಲಿ ಏರಿದಂತೆಯೇ ಕಸೋತ್ಪಾದನೆಯೂ ಏರುತ್ತಿದೆ. ಕಸ ತುಂಬುವ ಕ್ರಿಯೆಯಲ್ಲಿ ಎಲ್ಲರೂ ಭಾಗಿಗಳೇ. ಆದರೆ, ನಿರ್ವಹಣೆ ವಿಚಾರದಲ್ಲಿ ಯಾರಿಗೂ ಕಾಳಜಿ ಇಲ್ಲ. ಅದರ ಪರಿಣಾಮವನ್ನು ಬೆಂಗಳೂರು ಈಗ ಎದುರಿಸುತ್ತಿದೆ. ಕಸವನ್ನು ಮೂಲದಲ್ಲೇ ಬೇರ್ಪಡಿಸುವ ಉದ್ದೇಶ ಇನ್ನೂ ಕೈಗೂಡಿಲ್ಲ. ಈ ಕುರಿತು ಜನಜಾಗೃತಿ ಅಗತ್ಯ. ಸಂಗ್ರಹಿಸಿದ ಕಸವನ್ನು ಎಲ್ಲಿ ಸುರಿಯಬೇಕು ಎನ್ನುವ ಪ್ರಶ್ನೆಗೂ ಸರಿಯಾದ ಉತ್ತರ ದೊರೆತಿಲ್ಲ. ನಗರದ ಕಸವನ್ನು ವಾಹನಗಳಲ್ಲಿ ತುಂಬಿ ಹೊರವಲಯದ ಗ್ರಾಮಗಳ ಖಾಲಿ ಜಾಗದಲ್ಲಿ ಸುರಿಯುವುದಕ್ಕೆ ಗ್ರಾಮಸ್ಥರು ಈಗ ಅವಕಾಶ ಕೊಡುತ್ತಿಲ್ಲ. ಕಸ ವಿಲೇವಾರಿಗೆ ಈ ಅಂಶವೂ ತೊಡಕಾಗಿದೆ. ಕಸ ಸಂಸ್ಕರಣೆ ಮತ್ತು ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಶಾಶ್ವತ ವ್ಯವಸ್ಥೆ ರೂಪಿಸಬೇಕಾಗಿದೆ. ಕಸದ ನಿರ್ವಹಣೆ ಪಾಲಿಕೆಯ ಜವಾಬ್ದಾರಿಯಾದರೂ ಹೊಣೆ ನಿರ್ವಹಿಸುವಲ್ಲಿ ಅದು ವಿಫಲವಾದರೆ ಸರ್ಕಾರ ಮಧ್ಯಪ್ರವೇಶಿಸುವುದು ಅನಿವಾರ್ಯ. ಅಂತಹ ತುರ್ತು ಸ್ಥಿತಿ ಈಗ ಒದಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.