ಅಭಿವ್ಯಕ್ತಿ ಸ್ವಾತಂತ್ರ್ಯ ದಮನ `ಭ್ರಷ್ಟಾಚಾರ ವಿರೋಧಿ ಭಾರತ~ ಆಂದೋಲನದ ಕಾರ್ಯಕರ್ತ ಪುದುಚೇರಿಯ ಉದ್ಯಮಿ ರವಿ ಶ್ರೀನಿವಾಸನ್ (46) ಅವರನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬಂಧಿಸಿ ಬಿಡುಗಡೆ ಮಾಡಿದ ಪ್ರಕರಣವು ಕಳವಳಕಾರಿ. ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಕಿರು ಬ್ಲಾಗ್ ತಾಣ `ಟ್ವಿಟರ್~ನಲ್ಲಿ ಶ್ರೀನಿವಾಸನ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳೇ ಈ ಬಂಧನಕ್ಕೆ ಕಾರಣವಾಗಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ಪ್ರಯತ್ನವಾಗಿದೆ. ಸಂವಿಧಾನದತ್ತ ವ್ಯಕ್ತಿಸ್ವಾತಂತ್ರ್ಯವು ಜನಸಾಮಾನ್ಯರ ಪಾಲಿಗೆ ಇನ್ನೂ ಮರೀಚಿಕೆಯಾಗಿಯೇ ಇದೆ ಎನ್ನುವ ಭಾವನೆಯನ್ನೂ ಮೂಡಿಸುತ್ತದೆ. `ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರಿಗಿಂತ ಕಾರ್ತಿ ಚಿದಂಬರಂ ಬಳಿ ಹೆಚ್ಚಿನ ಪ್ರಮಾಣದ ಸಂಪತ್ತು ಇದೆ~ ಎಂದು ಟ್ವಿಟರ್‌ನಲ್ಲಿ ಬರೆದದ್ದೇ ಶ್ರೀನಿವಾಸನ್ ಎಸಗಿದ `ಮಹಾಪರಾಧ~ವಾಗಿದೆ. ಸಾರ್ವಜನಿಕವಾಗಿಯೇ ಲಭ್ಯ ಇದ್ದ ಮಾಹಿತಿ ಆಧರಿಸಿ ಶ್ರೀನಿವಾಸನ್ ವ್ಯಕ್ತಪಡಿಸಿದ್ದ ಅನಿಸಿಕೆ ಇದು. ವೈಯಕ್ತಿಕ ನಿಂದನೆಯ ಅವಹೇಳನಕಾರಿ ಅಭಿಪ್ರಾಯ ಅಂತರ್ಜಾಲದಲ್ಲಿ ವ್ಯಕ್ತವಾಗಿದೆ ಎಂದೆನಿಸಿದ್ದರೆ ಆ ಬಗ್ಗೆ ಪೊಲೀಸ್ ದೂರು, ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಕಾಯ್ದೆಯಲ್ಲಿ ಅವಕಾಶ ಇದ್ದೇ ಇತ್ತು. ಆದರೆ ಇಂತಹ ಕಾನೂನು ಸಮರ ಕೈಬಿಟ್ಟು ಪೊಲೀಸರ ಮೂಲಕ ಹೆದರಿಸಲು ಯತ್ನಿಸುವುದು ನಾಗರಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಮಾಹಿತಿ ತಂತ್ರಜ್ಞಾನ (ಐ.ಟಿ) ಕಾಯ್ದೆಯ `66-ಎ~ ಕಲಂ ಅಡಿ ಪುದುಚೇರಿ ಪೊಲೀಸ್ ಮಹಾನಿರ್ದೇಶಕರಿಗೆ, ಕಾರ್ತಿ ಚಿದಂಬರಂ ನೀಡಿದ್ದ `ಇ-ಮೇಲ್~ ದೂರು ಆಧರಿಸಿ, ನಸುಕಿನಲ್ಲಿಯೇ ಶ್ರೀನಿವಾಸನ್ ಮನೆಬಾಗಿಲಿಗೆ ಬಂದ ಪೊಲೀಸರ ನಡವಳಿಕೆಯೇ ಆತಂಕಕಾರಿ. ದೂರಿಗೆ ಸಂಬಂಧಿಸಿದಂತೆ ವಿವರಣೆ ಕೇಳುವ ನೋಟಿಸ್ ಜಾರಿ ಮಾಡದೇ ಏಕಾಏಕಿ ಬಂಧನಕ್ಕೆ ಮುಂದಾದ ಪೊಲೀಸರ ಧೋರಣೆಯು ಅವಸರದ, ಅಧಿಕಾರಸ್ಥರನ್ನು ಮೆಚ್ಚಿಸುವ ಮತ್ತು ಕಾನೂನನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ದುರ್ಬಳಕೆ ಮಾಡುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅನ್ಯರ ಖಾಸಗಿತನ ಅತಿಕ್ರಮಿಸಲು ಯಾರಿಗೂ ಹಕ್ಕು ಇಲ್ಲ. ಟೀಕಿಸುವ ಹಕ್ಕು ಎಲ್ಲರಿಗೂ ಇದ್ದರೂ, ತಮ್ಮಷ್ಟಕ್ಕೆ ತಾವೇ ನ್ಯಾಯ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎನ್ನುವುದೂ ನಿಜ. ಆದರೆ, ಆಪಾದನೆಗೆ ಗುರಿಯಾದವರು ಕೋರ್ಟ್ ಮೊರೆ ಹೋಗಲು ಅವಕಾಶ ಇದ್ದೇ ಇದೆ. ಅದನ್ನು ಕೈಬಿಟ್ಟು ಪೊಲೀಸರ ಮೂಲಕ ಹೆದರಿಸಲು ಹೊರಟಿರುವುದು ಅನುಮಾನ ಮೂಡಿಸುತ್ತದೆ. ನಸುಕಿನಲ್ಲಿಯೇ ಠಾಣೆಗೆ ಎಳೆದೊಯ್ಯುವಂತಹ ಗುರುತರ ಅಪರಾಧವನ್ನೇನೂ ಶ್ರೀನಿವಾಸ್ ಎಸಗಿರಲಿಲ್ಲ. ಐ.ಟಿ ಕಾನೂನನ್ನು ಪ್ರಭಾವಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇನ್ನೂ ಕೆಲ ನಿದರ್ಶನಗಳಿವೆ. ಮಮತಾ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ ಕಾರ್ಟೂನ್‌ಅನ್ನು, ಇ-ಮೇಲ್ ಮೂಲಕ ಇನ್ನೊಬ್ಬರಿಗೆ ಕಳಿಸ್ದ್ದಿದ `ಅಪರಾಧ~ಕ್ಕೆ ಪ್ರಾಧ್ಯಾಪಕ ಅಂಬಿಕೇಷ್ ಮಹಾಪಾತ್ರ ಅವರನ್ನೂ ಬಂಧಿಸಲಾಗಿತ್ತು. ಜನಸಾಮಾನ್ಯರನ್ನು ಬೇರೆ ಮಾನದಂಡಗಳಿಂದಲೇ ನೋಡುವಂತಹ ಪ್ರಭುತ್ವದ ಪ್ರವೃತ್ತಿ ಬದಲಾಗಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.