ಮುಂದಾಲೋಚನೆಯ ಕೊರತೆ ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಹೀಗಾಗಿ ಬೇಸಿಗೆ ಕಾಲಿಡುವುದಕ್ಕೂ ಮೊದಲೇ ಬೆಂಗಳೂರು ಮತ್ತು ಮೈಸೂರು ನಗರಗಳು ಮಾತ್ರವಲ್ಲದೆ ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಬಿಗಡಾಯಿಸಲಿದೆ. ಏಕೆಂದರೆ ಕೃಷ್ಣರಾಜಸಾಗರ ಜಲಾಶಯದಲ್ಲಿ ಭಾನುವಾರ ನೀರಿನ ಮಟ್ಟ 83 ಅಡಿಗೆ (ಪೂರ್ಣ ಮಟ್ಟ 124.80 ಅಡಿ) ಇಳಿದಿತ್ತು. ಅಲ್ಲಿ ಈಗಿರುವ ನೀರಿನ ಸಂಗ್ರಹ ಕೇವಲ 8.25 ಟಿಎಂಸಿ. ಇದರಲ್ಲಿಯೇ ರಾಜಧಾನಿ ಸೇರಿದಂತೆ ಎರಡು ಮಹಾನಗರಗಳು, ಐದು ಜಿಲ್ಲೆಗಳ ನಗರ, ಪಟ್ಟಣ, ಗ್ರಾಮೀಣ ಪ್ರದೇಶಕ್ಕೆ ನೀರು ಕೊಡಬೇಕು, ಕೈಗಾರಿಕೆಗಳ ಅಗತ್ಯಕ್ಕೂ ಬಳಸಬೇಕು, ಕೃಷಿ ಮತ್ತು ಜಾನುವಾರುಗಳಿಗೂ ಒದಗಿಸಬೇಕು. ಆದರೆ, ಈಗ ಲಭ್ಯವಿರುವ ನೀರು ಮುಂದಿನ ಒಂದು ತಿಂಗಳಿನ ಕುಡಿವ ನೀರಿನ ಬೇಡಿಕೆಯನ್ನಷ್ಟೇ ಪೂರೈಸಬಲ್ಲದು ಎಂಬ ವರದಿ ನಿಜಕ್ಕೂ ಕಳವಳಕಾರಿ. ಆದ್ದರಿಂದಲೇ ನೀರನ್ನು ಮಿತವಾಗಿ ಪೂರೈಸಿ ಬೇಸಿಗೆ ಮುಗಿಯುವವರೆಗೆ ನಿರ್ವಹಿಸುವುದಾಗಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈಗಲೇ ಬೆಂಗಳೂರು ಮಹಾನಗರದ ಅನೇಕ ಕಡೆ ನೀರಿನ ಸರಬರಾಜು ಸರಿಯಾಗಿಲ್ಲ ಎಂಬುದು ನಾಗರಿಕರ ಅನುಭವ. ತಿಪ್ಪಗೊಂಡನಹಳ್ಳಿ ಜಲಾಶಯವೂ ಬರಿದಾಗಿರುವ ಕಾರಣ ಕಾವೇರಿ ಮೇಲಿನ ಅವಲಂಬನೆ ಹೆಚ್ಚಿದೆ. ನಿತ್ಯ 168.3 ಕೋಟಿ ಲೀಟರ್ ನೀರಿಗೆ ಬೇಡಿಕೆ ಇದ್ದರೂ ಕೇವಲ 90 ಕೋಟಿ ಲೀಟರ್ ಪೂರೈಕೆಯಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಮುಂಗಾರು ಆರಂಭವಾಗುವವರೆಗೂ ನೀರಿನ ಮಿತ ಬಳಕೆ ಅನಿವಾರ್ಯ. ಆದರೆ ಇಲ್ಲಿ ಸರ್ಕಾರದ ಮುಂದಾಲೋಚನೆಯ ಕೊರತೆಯೂ ಎದ್ದು ಕಾಣುತ್ತಿದೆ. ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಆರು ತಿಂಗಳ ಹಿಂದೆಯೇ ನೀರಿನ ಸಂಗ್ರಹ, ವಾಡಿಕೆಗಿಂತ ತೀರಾ ಕಡಿಮೆ ಇತ್ತು. ಆಗಲೇ ಸರ್ಕಾರ ಎಚ್ಚೆತ್ತುಕೊಂಡು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಕಬ್ಬು, ಬತ್ತ ಬೆಳೆಯದಂತೆ ಈಗ ರೈತರಿಗೆ ಸಲಹೆ ಕೊಡುವ ಬದಲು ಆಗಲೇ ಮನವೊಲಿಸಬಹುದಿತ್ತು. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಮಾದರಿಯಲ್ಲಿ ಕಡಿಮೆ ನೀರು ಬಳಸುವ ಬೆಳೆಗಳಿಗೆ ಉತ್ತೇಜನ ನೀಡಬೇಕಿತ್ತು. ಆ ಮೂಲಕ ಒಂದಿಷ್ಟು ನೀರು ಉಳಿಸಬಹುದಿತ್ತು. ನೀರು ಉಳಿತಾಯದ ತಂತ್ರಗಳನ್ನು ಪ್ರಚಾರ ಮಾಡಿ ಜನಜಾಗೃತಿ ಮೂಡಿಸಬಹುದಾಗಿತ್ತು. ನಾಲೆ ಆಧುನೀಕರಣ, ಕೃಷಿಯಲ್ಲಿ ಹನಿ ನೀರಾವರಿ ಪದ್ಧತಿಗಳ ಅಳವಡಿಕೆಗೆ ಈಗ ಮುಂದಾಗುವ ಬದಲು ಆಗಲೇ ಚಿಂತನೆ ನಡೆಸಬೇಕಾಗಿತ್ತು. ಆಂತರಿಕ ಕಚ್ಚಾಟ, ಭಿನ್ನಮತೀಯರ ಕಾಟ, ಸರ್ಕಾರವನ್ನು ಉಳಿಸಿಕೊಳ್ಳುವ ಕಸರತ್ತಿನಲ್ಲಿಯೇ ಮುಳುಗಿದ್ದ ಮಂತ್ರಿ ಮಹೋದಯರು ಈ ಬಗ್ಗೆ ಸಕಾಲದಲ್ಲಿ ಗಮನ ಹರಿಸದೇ ಇದ್ದುದರ ಕಹಿ ಫಲವನ್ನು ಈಗ ಎಲ್ಲರೂ ಅನುಭವಿಸುವ ಸ್ಥಿತಿ ಬಂದಿದೆ. `ಕುಡಿಯುವ ನೀರಿಗೆ ತೊಂದರೆಯಾಗದಂತೆ ಸರ್ಕಾರ ಎಚ್ಚರ ವಹಿಸಲಿದೆ, ಜನ ಆತಂಕ ಪಡಬೇಕಿಲ್ಲ' ಎಂಬ ಸಚಿವರ ಹೇಳಿಕೆ ಜನರಲ್ಲಿ ವಿಶ್ವಾಸವನ್ನಂತೂ ಮೂಡಿಸುವುದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.