ದಾಳಿ ಹೊಣೆ ಹೊರಲಿ ಜಮ್ಮು ಕಾಶ್ಮೀರದ ಪೂಂಛ್ ವಲಯದಲ್ಲಿ ಭಾರತದ ಗಡಿಯೊಳಗೆ 100 ಮೀಟರ್‌ಗಳಷ್ಟು ಒಳನುಗ್ಗಿ ಪಾಕಿಸ್ತಾನ ಸೈನಿಕರು ನಡೆಸಿರುವ ದಾಳಿ ಪ್ರಚೋದನಕಾರಿಯಾದುದು. ಬರ್ಬರವಾಗಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿರುವುದಲ್ಲದೆ, ಸತ್ತ ಸೈನಿಕರ ರುಂಡ ಕತ್ತರಿಸಿರುವ ಕೃತ್ಯ ಅಮಾನವೀಯ. ಇಂತಹ ವರ್ತನೆ, ಅಂತರರಾಷ್ಟ್ರೀಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ. ದಟ್ಟ ಮಂಜಿನ ಮುಸುಕಿನಲ್ಲಿ ಭಾರತ ಗಡಿಯೊಳಗೆ ನುಸುಳಿ ನಡೆಸಿರುವ ಈ ದುಷ್ಕೃತ್ಯ ಖಂಡನಾರ್ಹ. 2003ರಿಂದ ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಜಾರಿಯಲ್ಲಿದೆ. ಉಭಯ ದೇಶಗಳ ಮಧ್ಯೆ ವಿಶ್ವಾಸ ವೃದ್ಧಿ ಕ್ರಮಗಳಲ್ಲಿ (ಸಿಬಿಎಂ) ಇದು ಮುಖ್ಯವಾದದ್ದು. ಇಂತಹ ಸಂದರ್ಭದಲ್ಲಿ ಯಾವುದೇ ಪ್ರಚೋದನೆ ಇಲ್ಲದೆ ನಡೆದಿರುವ ಈ ದಾಳಿಗೆ ಪಾಕಿಸ್ತಾನ ಸರ್ಕಾರ ವಿವರಣೆ ನೀಡಬೇಕು. ಕದನವಿರಾಮ ಜಾರಿಯಲ್ಲಿದ್ದರೂ ಆಗಾಗ್ಗೆ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ಚಕಮಕಿಗಳು ನಡೆಯುವುದನ್ನು ತಪ್ಪಿಸಲಾಗುತ್ತಿಲ್ಲ. ಭಾರತದ ಗಡಿಯೊಳಗೆ ಉಗ್ರಗಾಮಿಗಳನ್ನು ಒಳನುಗ್ಗಿಸುವ ತಂತ್ರವಾಗಿ ಇಂತಹ ಚಕಮಕಿಗಳನ್ನು ಪಾಕಿಸ್ತಾನ ಸೇನೆ ಬಳಸಿಕೊಳ್ಳುತ್ತಿದೆ ಎಂಬ ಆರೋಪವೂ ಇದೆ. ಕಳೆದ ಮೂರು ದಿನಗಳ್ಲ್ಲಲೇ ಪಾಕಿಸ್ತಾನ ಎರಡು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಕಳೆದ ವರ್ಷ ಈ ಬಗೆಯ ಚಕಮಕಿ ಹಾಗೂ ಶತ್ರುದಾಳಿಗಳಲ್ಲಿ ಸುಮಾರು ಎಂಟು ಜನ ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಕಾಶ್ಮೀರದ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನ ಎರಡು ಯುದ್ಧಗಳನ್ನು ನಡೆಸಿವೆ. 1999ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಯುದ್ಧ ಕೈದಿಯಾಗಿ ವಶಕ್ಕೆ ತೆಗೆದುಕೊಳ್ಳಲಾಗಿದ್ದ ಕಾಪ್ಟನ್ ಸೌರಭ್ ಕಾಲಿಯಾ ಅವರಿಗೆ ಪಾಕಿಸ್ತಾನಿ ಸೇನೆ ಚಿತ್ರಹಿಂಸೆ ನೀಡಿ, ಅಂಗಛೇದನ ಮಾಡಿತ್ತು ಎಂಬಂತಹ ಪ್ರತಿಪಾದನೆಗಳನ್ನು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಅಲ್ಲಗಳೆದಿದ್ದರು. ಕಾಲಿಯಾ ಅವರು ಪಾಕಿಸ್ತಾನಿ ಗುಂಡಿಗೆ ಬಲಿಯಾದರೊ ಅಥವಾ ಕೆಟ್ಟ ಹವಾಮಾನಕ್ಕೆ ಬಲಿಯಾದರೊ ಎಂಬುದು ಸ್ಪಷ್ಟವಿಲ್ಲ ಎಂಬಂತಹ ಮಲಿಕ್ ಅವರ ಉಡಾಫೆ ಉತ್ತರ ತೀವ್ರ ಟೀಕೆಗೊಳಗಾಗಿತ್ತು.  ಯುದ್ಧಕೈದಿಯಾಗಿ ಸೆರೆಹಿಡಿದ ತಮ್ಮ ಪುತ್ರನನ್ನು ಬರ್ಬರವಾಗಿ ಹತ್ಯೆ ಮಾಡಿರುವುದು `ಜಿನೀವಾ ನಿರ್ಣಯ'ದ ಉಲ್ಲಂಘನೆಯಾಗಿದೆ ಎಂದು ಕಾಲಿಯಾ ತಂದೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಉಪಖಂಡದಲ್ಲಿ ಶಾಂತಿ ಸ್ಥಾಪನೆಗಾಗಿ ಅಣ್ವಸ್ತ್ರ ಶಕ್ತ ನೆರೆಹೊರೆ ರಾಷ್ಟ್ರಗಳಾಗಿರುವ ಭಾರತ ಮತ್ತು ಪಾಕಿಸ್ತಾನ ಶಾಂತಿ, ಸಂಯಮ ಕಾಪಾಡಿಕೊಳ್ಳುವುದು ಮುಖ್ಯ. ಇದಕ್ಕಾಗಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ಸುಧಾರಣೆಗೆ ಪ್ರಯತ್ನಗಳಾಗುತ್ತಿವೆ. ವ್ಯಾಪಾರ ವೃದ್ಧಿ, ಉದಾರ ವೀಸಾ ನೀತಿ ಹಾಗೂ ಕ್ರಿಕೆಟ್ ಬಾಂಧವ್ಯದ ಪುನರ್‌ಸ್ಥಾಪನೆ, ಈ ಶಾಂತಿ ಪ್ರಕ್ರಿಯೆಯ ಹಾದಿಯಲ್ಲಿ ಇರಿಸಿದಂತಹ ಸರಿಯಾದ ಹೆಜ್ಜೆಗಳಾಗಿವೆ. ಆದರೆ ಈಗ ನಡೆದಿರುವ ಈ ಅಪ್ರಚೋದಿತ ದಾಳಿಗೆ ಪಾಕಿಸ್ತಾನ ಹೊಣೆ ಹೊರಬೇಕು. ಈ ನಿಟ್ಟಿನಲ್ಲಿ ದಕ್ಷಿಣ ಏಷ್ಯಾ ಹಾಗೂ ಜಾಗತಿಕ ಮಟ್ಟದಲ್ಲಿ ಬಲವಾದ ರಾಜಕೀಯ ಅಭಿಪ್ರಾಯ ರೂಪಿಸಲು ಭಾರತ ಶ್ರಮಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.