ದಕ್ಕದ ನ್ಯಾಯ ಡೇವಿಡ್ ಹೆಡ್ಲಿಗೆ ಅಮೆರಿಕ ನ್ಯಾಯಾಲಯ ನೀಡಿರುವಂತಹ ಹಗುರವಾದ ಶಿಕ್ಷೆ ಅನಿರೀಕ್ಷಿತವಾದುದೇನಲ್ಲ. 2008ರಲ್ಲಿ 165 ಜನರ ಸಾವಿಗೆ ಕಾರಣವಾದ 26/11 ಮುಂಬೈ ದಾಳಿಯ ಈ ಸಂಚುಕೋರನಿಗೆ ಕೇವಲ 35 ವರ್ಷಗಳ ಸೆರೆವಾಸ ವಿಧಿಸಿರುವುದು ಅಮೆರಿಕದ ಅಪರಾಧ ನ್ಯಾಯ ವ್ಯವಸ್ಥೆಯ ಅಣಕವಾಗಿದೆ. ಸೆರೆವಾಸದ ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಾಧೀಶರೇ ಸ್ವತಃ ಹೆಡ್ಲಿ ಕುರಿತಾಗಿ ಕಠಿಣ ಮಾತುಗಳನ್ನಾಡಿದ್ದಾರೆ. `ಭಯೋತ್ಪಾದಕ'ನಾಗಿರುವ ಹೆಡ್ಲಿ, ಮರಣದಂಡನೆ ಶಿಕ್ಷೆಗೇ `ಅರ್ಹ' ಎಂಬ ಮಾತುಗಳನ್ನು ನ್ಯಾಯಾಧೀಶರು ಹೇಳಿದ್ದಾರೆ. ಆದರೆ, ತನಿಖೆಗೆ ಸಹಕರಿಸಬೇಕಿದ್ದಲ್ಲಿ, ತನಗೆ ಗಲ್ಲುಶಿಕ್ಷೆ ಅಥವಾ ಭಾರತ, ಡೆನ್ಮಾರ್ಕ್‌ಗಳಿಗೆ ತನ್ನನ್ನು ಹಸ್ತಾಂತರಿಸಬಾರದೆಂಬ ಚೌಕಾಸಿ ಒಪ್ಪಂದವನ್ನು ಅಮೆರಿಕದ ಆಡಳಿತ ಜೊತೆಗೆ ಮಾಡಿಕೊಳ್ಳುವಲ್ಲಿ ಹೆಡ್ಲಿ ಯಶಸ್ವಿಯಾಗಿದ್ದ. ಹೀಗಾಗಿ ಗಲ್ಲು ಶಿಕ್ಷೆಯಿಂದ ಹೆಡ್ಲಿಯನ್ನು ಪಾರು ಮಾಡಿರುವುದು ಹಾಗೂ ಅವನ ವಿಚಾರಣೆಯನ್ನು ನಡೆಸುವುದಕ್ಕೆ ಇತರ ರಾಷ್ಟ್ರಗಳಿಗೆ ಅವಕಾಶ ನೀಡದಂತಹ ಅಮೆರಿಕ ಕ್ರಮದಿಂದಾಗಿ ಭಯೋತ್ಪಾದನೆ ಕೃತ್ಯಗಳಿಗೆ ಒತ್ತಾಸೆ ನೀಡಿದಂತಾಗಿದೆ. 53 ವರ್ಷದ ಹೆಡ್ಲಿ ತನ್ನ ಮುಂದಿನ 35 ವರ್ಷಗಳ ಜೀವನವನ್ನು ಜೈಲಿನಲ್ಲಿ ಕಳೆಯಲಿದ್ದಾನೆ ಎಂಬುದೊಂದೇ ಸಮಾಧಾನದ ಸಂಗತಿ. ಜೀವಂತವಾಗಿ ಸೆರೆಹಿಡಿದು, ವಿಚಾರಣೆಗೆ ಒಳಪಡಿಸಿ ಮರಣದಂಡನೆ ಶಿಕ್ಷೆಗೆ ಒಳಪಡಿಸಲಾದ ಏಕೈಕ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಾಬ್‌ನಷ್ಟೇ ಡೇವಿಡ್ ಹೆಡ್ಲಿಯೂ ತಪ್ಪಿತಸ್ಥನೇ. ತರ್ಕದ ಪ್ರಕಾರ, ಹೆಡ್ಲಿಯನ್ನು ಭಾರತೀಯ ಕಾನೂನುಗಳ ಪ್ರಕಾರ ವಿಚಾರಣೆಗೆ ಒಳಪಡಿಸಬೇಕಿದ್ದುದು ನ್ಯಾಯ. ಆದರೆ ಭಾರತಕ್ಕೆ ಹೆಡ್ಲಿಯನ್ನು ಹಸ್ತಾಂತರಿಸುವ ವಿಚಾರದಲ್ಲಿ ವಾಷಿಂಗ್ಟನ್ ಜೊತೆ ವ್ಯವಹರಿಸುವಲ್ಲಿ ಭಾರತದ ಅಧಿಕಾರಿಗಳು ವಿಫಲವಾಗಿರುವುದು ಸ್ಪಷ್ಟ. ಹೆಡ್ಲಿಯ ಪ್ರಮುಖ ಸಹಚರ ತಹಾವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರದ್ಲ್ಲಲೂ ಅಮೆರಿಕವನ್ನು ಒಲಿಸುವಲ್ಲಿ ಭಾರತದ ಅಧಿಕಾರಿಗಳು ವಿಫಲವಾಗಿದ್ದಾರೆ. 26/11ರ ಮುಂಬೈದಾಳಿಯಲ್ಲಿ ಅಮೆರಿಕನ್ ಜೀವಗಳೂ ಬಲಿಯಾಗಿದ್ದರಿಂದ ತಪ್ಪಿತಸ್ಥರಿಗೆ ಅಮೆರಿಕ ಸರಿಯಾದ ಶಿಕ್ಷೆ ವಿಧಿಸುತ್ತದೆ ಎಂದು ಭಾರತ ನಂಬಿಕೊಂಡಿದ್ದಷ್ಟೇ ಬಂತು. ಮುಂಬೈದಾಳಿಗೆ ಸಂಬಂಧಿಸಿದಂತೆ ರಾಣಾಗೆ ಶಿಕ್ಷೆಯಾಗುವ ರೀತಿಯಲ್ಲಿ ಪ್ರಕರಣವನ್ನು ಕಟ್ಟಿಕೊಡುವಲ್ಲಿ ಈಗಾಗಲೇ ಎಫ್‌ಬಿಐ ವಿಫಲವಾಗಿದೆ. ಸರಳವಾಗಿ ಹೇಳಬೇಕೆಂದರೆ, ಪಾಕಿಸ್ತಾನವನ್ನೊಳಗೊಂಡಂತಹ ವಿದ್ಯಮಾನಗಳಲ್ಲಿ ಅಮೆರಿಕದ ಮೇಲೆ ಪ್ರಭಾವ ಬೀರುವಲ್ಲಿ ಭಾರತ ಅಸಮರ್ಥವಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡುವಲ್ಲಿ ಅಮೆರಿಕ ಹಿಂಜರಿಯುತ್ತಿರುವುದು ಸ್ಪಷ್ಟ. ಅಮೆರಿಕದ ನೆಲದಲ್ಲಿ 9/11 ಭಯೋತ್ಪಾದನಾ ದಾಳಿಯ ನಂತರ ಆಫ್ಘಾನಿಸ್ತಾನದ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಆದರೆ ಭಾರತ ತನ್ನ ನೆಲದಲ್ಲಿ ನಡೆದ ದಾಳಿಯಲ್ಲಿ ನೊಂದವರಿಗೆ ಕೋರ್ಟ್‌ಗಳ ಮೂಲಕ ನ್ಯಾಯ ದೊರಕಿಸಿಕೊಡಲು ಯತ್ನಿಸಿತು. ಈ ನ್ಯಾಯದಾನದ ಪ್ರಕ್ರಿಯೆಗೆ ಅಮೆರಿಕ ಹಾಗೂ ಪಾಕಿಸ್ತಾನ ತಡೆ ಒಡ್ಡುತ್ತಿವೆ. ಲಷ್ಕರ್ ಭಯೋತ್ಪಾದಕರ ರೂವಾರಿ ಹಫೀಜ್ ಸಯೀದ್‌ನನ್ನು ಹಸ್ತಾಂತರಿಸಲೂ ಪಾಕಿಸ್ತಾನ ನಿರಾಕರಿಸುತ್ತಿದೆ. ಹಾಗೆಯೇ ಹೆಡ್ಲಿ ಹಾಗೂ ರಾಣಾ ಹಸ್ತಾಂತರಕ್ಕೆ ಅಮೆರಿಕ ನಿರಾಕರಿಸಿದೆ. ತಮ್ಮದೇ ದೇಶಗಳಲ್ಲಿ ಈ ಅಪರಾಧಿಗಳನ್ನು ವಿಶ್ವಾಸಾರ್ಹ ವಿಚಾರಣೆಗಳಿಗೂ ಒಳಪಡಿಸಿಲ್ಲ. 26/11 ದಾಳಿಯಲ್ಲಿ ನೊಂದವರಿಗೆ ಅಂತೂ ನ್ಯಾಯ ದಕ್ಕಲಿಲ್ಲ ಎಂಬುದು ವಿಷಾದದ ಸಂಗತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.