ವ್ಯವಸ್ಥೆಯ ದೋಷ ಅತ್ಯಾಚಾರ ಅಪರಾಧಕ್ಕೆ ಶಿಕ್ಷೆಯಾದರೂ ಕಾನೂನಿನ ಕಣ್ಣಿಗೆ ಮಣ್ಣೆರಚಿ ಆರಾಮವಾಗಿ ಸಹಜ ಜೀವನ ಸಾಗಿಸುತ್ತಿದ್ದ ಬಿಟ್ಟಿ ಮೊಹಂತಿಯ ಪ್ರಕರಣ ಪತ್ತೇದಾರಿ ಕಥೆಯಂತಿದೆ. ಭಾರತದ ಅಪರಾಧ ನ್ಯಾಯ ವ್ಯವಸ್ಥೆಯನ್ನು ಪ್ರಭಾವಿ ಕುಟುಂಬಗಳ ವ್ಯಕ್ತಿಗಳು ಹೇಗೆ ಬುಡಮೇಲು ಮಾಡುವುದಕ್ಕೆ ಸಾಧ್ಯವಿದೆ ಎಂಬುದಕ್ಕೆ ಇದು ಜ್ವಲಂತ ಉದಾಹರಣೆ. 2006ರಲ್ಲಿ ರಾಜಸ್ತಾನದ ಆಳ್ವಾರ್‌ನಲ್ಲಿ 26 ವರ್ಷದ ಜರ್ಮನ್ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿದ್ದ ಬಿಟ್ಟಿ ಸಾಧಾರಣ ವ್ಯಕ್ತಿಯಲ್ಲ. ಆತ ಒರಿಸ್ಸಾದ ಆಗಿನ ಡಿಜಿಪಿಯ ಪುತ್ರ. ಆದರೂ ಅತ್ಯಂತ ತ್ವರಿತವಾಗಿ ಈ ಪ್ರಕರಣದ ವಿಚಾರಣೆ ನಡೆಯಿತು ಎಂಬುದು ಚರಿತ್ರಾರ್ಹ ದಾಖಲೆ. ವಿಚಾರಣೆ ಆರಂಭವಾದ ಒಂಬತ್ತು ದಿನಗಳಲ್ಲೇ ಬಿಟ್ಟಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಹೀಗಿದ್ದೂ ನ್ಯಾಯ ದೊರತಂತೇನಲ್ಲ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಯಿತು. ಎಂಟು ತಿಂಗಳ ಒಳಗೇ ಪೆರೋಲ್ ಪಡೆದುಕೊಂಡ ಬಿಟ್ಟಿ ನಂತರ `ನಾಪತ್ತೆಯಾಗಿಬಿಟ್ಟ'. ಒಡಿಶಾದ ಡಿಜಿಪಿಯಾಗಿದ್ದ ತಂದೆ ಬಿ ಬಿ ಮೊಹಂತಿಯವರೇ ಈ ರಕ್ಷಣಾತ್ಮಕ ಕವಚ ಒದಗಿಸ್ದ್ದಿದಾರೆ; ನಾಪತ್ತೆಯಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆಗ ಭಾವಿಸಲಾಗಿತ್ತು. ಆದರೂ ನಾಪತ್ತೆಯಾದವನ ಪತ್ತೆಗೆ ಹೆಚ್ಚಿನ ಶ್ರಮ ಹಾಕಲಿಲ್ಲ ಎಂಬುದು ನಮ್ಮ ಕಾನೂನು ಜಾರಿ ವ್ಯವಸ್ಥೆಯ ದೋಷ. ಹೀಗೆ `ನಾಪತ್ತೆ'ಯಾದ ಬಿಟ್ಟಿ ರಾಜಾರೋಷವಾಗಿ ಪುಟ್ಟಪರ್ತಿಯ `ರಾಘವ್ ರಾಜನ್' ಹೆಸರಿನಲ್ಲಿ ಹೊಸ ಬದುಕನ್ನು ನಡೆಸುತ್ತಿದ್ದ್ದ್ದದಂತೂ ಮತ್ತೂ ಆಘಾತಕಾರಿ. ಜೈಲಲ್ಲಿರಬೇಕಾದ ವ್ಯಕ್ತಿ ಹೊಸ ಹೆಸರಿನ ಕಪಟ ವೇಷಧಾರಿಯಾಗಿ, ಖೋಟಾ ಸಹಿಯೊಂದಿಗೆ ಆರಾಮಾಗಿ ಮಾಮೂಲು ಜೀವನ ನಡೆಸಿಕೊಂಡು ಹೋಗಲು ಈ ವ್ಯವಸ್ಥೆಯಲ್ಲಿ ಸಾಧ್ಯವಿದೆ ಎಂಬುದೇ ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ. ಹೊಸ ಹೆಸರು ಇಟ್ಟುಕೊಳ್ಳುವ ಮೂಲಕ ಕಾನೂನು ಕುಣಿಕೆಯಿಂದ ಎಷ್ಟೊಂದು ಲೀಲಾಜಾಲವಾಗಿ ತಪ್ಪಿಸಿಕೊಳ್ಳಬಹುದು ಎಂಬುದನ್ನು ಈ ಪ್ರಸಂಗ ಎತ್ತಿ ತೋರಿದೆ. ಹೊಸ ಹೆಸರಲ್ಲಿ ತನಗೆ ಬೇಕಾದಂತೆ ಸುಳ್ಳು ಜನನ ಪತ್ರ, ಸುಳ್ಳು ಕಾಲೇಜು ಪ್ರಮಾಣಪತ್ರಗಳನ್ನು ಸೃಷ್ಟಿಸಿಕೊಂಡಿದ್ದಲ್ಲದೆ, ಎಂಬಿಎ ಓದಿ ಸರ್ಕಾರಿ ಬ್ಯಾಂಕ್ ಅಧಿಕಾರಿಯ ಹುದ್ದೆಯನ್ನೂ ಗಿಟ್ಟಿಸಿಕೊಂಡಿದ್ದು ಆಘಾತಕಾರಿ. ಭಾರತದ ಅಪರಾಧ ನ್ಯಾಯ ವ್ಯವಸ್ಥೆಯನ್ನು ವಿಫಲಗೊಳಿಸಲು ಪ್ರಭಾವಿ ವ್ಯಕ್ತಿಗಳು ಹಾಗೂ ಅಧಿಕಾರ ಸ್ಥಾನಗಳಲ್ಲಿರುವ ವ್ಯಕ್ತಿಗಳು ನಡೆಸಿದ ದುಷ್ಟ ಸಂಚು ಇದು. ಆದರೆ ಮಾಧ್ಯಮಗಳು ಹಾಗೂ ಜಾಗೃತ ನಾಗರಿಕರ ಸಕ್ರಿಯ ಪಾತ್ರ ನ್ಯಾಯದ ಹಾದಿ ಹಳಿ ತಪ್ಪಲು ಅವಕಾಶ ನೀಡಿಲ್ಲ ಎಂಬುದೇ ಸಮಾಧಾನ. ದೆಹಲಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ತಲೆತಪ್ಪಿಸಿಕೊಂಡ ಬಿಟ್ಟಿಯ ಹಳೆಯ ಅತ್ಯಾಚಾರ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಯಿತು. ಇದನ್ನು ಗಮನಿಸಿದ ಜಾಗೃತ ನಾಗರಿಕರೊಬ್ಬರು ಬರೆದ ಅನಾಮಿಕ ಪತ್ರ, ಕಳಚಿಕೊಂಡಿದ್ದ ಕೊಂಡಿಯನ್ನು ಕೂಡಿಸಿತು. ಪ್ರಭಾವಿಗಳ ದುಷ್ಟ ಸಂಚುಗಳನ್ನು ಜಾಗೃತ ನಾಗರಿಕರು ಬುಡಮೇಲು ಮಾಡುವುದಕ್ಕೆ ಸಾಧ್ಯವಿದೆ ಎಂಬುದೇ ಆಶಾದಾಯಕ ಬೆಳವಣಿಗೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.