ಉತ್ತರ ಕೊರಿಯಾ ಉದ್ಧಟತನ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಬಲಿಷ್ಠ ರಾಷ್ಟ್ರಗಳ ತೀವ್ರ ವಿರೋಧಗಳ ನಡುವೆಯೂ ಉತ್ತರ ಕೊರಿಯಾ ಮೂರನೇ ಭೂಗತ ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಇದೇನೂ ಅನಿರೀಕ್ಷಿತ ಬೆಳವಣಿಗೆಯೇನಲ್ಲ. ಈ ಹಿಂದೆಯೂ 2006 ಹಾಗೂ 2009ರಲ್ಲಿ ಉತ್ತರ ಕೊರಿಯಾ ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು. ಆದರೆ, ಈ ಬಾರಿ, ಉತ್ತರ ಕೊರಿಯಾದ ಮಿತ್ರ ರಾಷ್ಟ್ರವಾದ ಚೀನಾ ಸಹ ಈ ಹೊಸ ಪ್ರಯೋಗಕ್ಕೆ ವಿರೋಧ ತೋರಿರುವುದು ವಿಶೇಷ. ಅಂತರರಾಷ್ಟ್ರೀಯ ಸಮುದಾಯದ ಅಭಿಪ್ರಾಯಕ್ಕೆ ಮನ್ನಣೆ ನೀಡದ ಉದ್ಧಟತನವನ್ನು ಪ್ರದರ್ಶಿಸಿರುವ ಉತ್ತರ ಕೊರಿಯಾ ತೀವ್ರತರವಾದ ಸಂಘರ್ಷಮಯ ಪಥವನ್ನು ಆಯ್ಕೆ ಮಾಡಿಕೊಂಡಿದೆ. ಈ ಬಾರಿ ಪರೀಕ್ಷೆಗೊಳಪಟ್ಟ ಪರಮಾಣು ಸಾಧನ ಹೆಚ್ಚು ಶಕ್ತಿಯುತವಾಗಿದ್ದು, ಇದರಲ್ಲಿ ಪ್ಲುಟೋನಿಯಂ ಬದಲಿಗೆ ಯುರೇನಿಯಂ ಬಳಕೆಯಾಗಿದೆ ಎಂಬಂತಹದ್ದು ಆತಂಕವನ್ನು ಹೆಚ್ಚಿಸಿದೆ. ಈ ಅಣುಸಾಧನ ಕಿರುಮಾದರಿಯದ್ದು ಎಂದೂ ಪ್ಯೊಂಗ್ಯಾಂಗ್ ಪ್ರತಿಪಾದಿಸಿದೆ. ಇದು ನಿಜವೇ ಆದಲ್ಲಿ ಮತ್ತಷ್ಟು ಆತಂಕಕಾರಿ. ಏಕೆಂದರೆ, ದೂರಗಾಮಿ ಕ್ಷಿಪಣಿಯಲ್ಲಿ ಅಳವಡಿಸಬಹುದಾದಷ್ಟು ಚಿಕ್ಕ ಸಾಧನ ಉತ್ಪಾದಿಸಿದ ಸಾಮರ್ಥ್ಯವನ್ನು ಉತ್ತರ ಕೊರಿಯಾ ಪ್ರದರ್ಶಿಸಿದಂತಾಗುತ್ತದೆ. ಇದು ನೆರೆ ರಾಷ್ಟ್ರಗಳಾದ ದಕ್ಷಿಣ ಕೊರಿಯಾ ಹಾಗೂ ಜಪಾನ್‌ನಲ್ಲಿ ಈಗಾಗಲೇ ತಲ್ಲಣಗಳನ್ನು ಸೃಷ್ಟಿಸಿದೆ. ಇದರಿಂದ ಉತ್ತರ ಕೊರಿಯಾದ ಅಣು ಹಾಗೂ ಕ್ಷಿಪಣಿ ಕಾರ್ಯಕ್ರಮಗಳ ನಿಯಂತ್ರಣಕ್ಕೆ ರಾಜತಾಂತ್ರಿಕ ಪ್ರಯತ್ನಗಳು ಹೆಚ್ಚು ತುರ್ತಿನಿಂದ ಮುಂದುವರೆಯಬೇಕಾದದ್ದು ಅಗತ್ಯ. ಅಣ್ವಸ್ತ್ರ ಪ್ರಸರಣದಲ್ಲಿ ಪಾಕಿಸ್ತಾನದ ಪಾತ್ರವೂ ಉತ್ತರ ಕೊರಿಯಾದ ಈ ಹೊಸ ಪ್ರಯೋಗದಿಂದಾಗಿ ಮತ್ತೆ ಚರ್ಚೆಗೆ ಬಂದಿದೆ. ನಮ್ಮ ನೆರೆಯ ಮತ್ತೊಂದು ರಾಷ್ಟ್ರ ಚೀನಾ ಕೂಡ ಉತ್ತರ ಕೊರಿಯಾ ಮೇಲೆ ಹೆಚ್ಚು ಪ್ರಭಾವ ಹೊಂದಿದೆ. ಈಗ ಯಾವುದೇ ಅಣ್ವಸ್ತ್ರ ಸಾಹಸಕ್ಕೆ ಕೈಹಾಕದಂತೆ ಉತ್ತರ ಕೊರಿಯಾದ ಮನ ಒಲಿಸುವ ಹೊಣೆ ಚೀನಾದ್ದಾಗಿದೆ. ಚೀನಾ ಹಿತದೃಷ್ಟಿಯಿಂದಲೂ ಇದು ಅಗತ್ಯ. ಉತ್ತರ ಕೊರಿಯಾ ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಾ ಸಾಗಿದಂತೆ ಈ ವಲಯದಲ್ಲಿ ಹೆಚ್ಚಾಗುವ ಅಮೆರಿಕನ್ ಉಪಸ್ಥಿತಿ ಬೀಜಿಂಗ್‌ಗೆ ಮುಜುಗರ ಉಂಟುಮಾಡುವಂತಹದ್ದು. ಹಾಗೆಯೇ, ಅಣ್ವಸ್ತ್ರರಾಷ್ಟ್ರವಾಗುವಲ್ಲಿ ಉತ್ತರ ಕೊರಿಯಾಗಿರುವ ಅನಿವಾರ್ಯತೆಯನ್ನು ಪರಿಶೀಲಿಸುವುದೂ ಮುಖ್ಯ. ಅಣ್ವಸ್ತ್ರ ಸಮರ್ಥ ರಾಷ್ಟ್ರವಾಗಲು ಉತ್ತರ ಕೊರಿಯಾಗೆ ಆಂತರಿಕ ಕಾರಣಗಳಿವೆ ಎಂಬಂಥ ವಾದವಿದೆ. ರಾಷ್ಟ್ರದೊಳಗಿನ ಬಡತನ ಹಾಗೂ ಹಸಿವಿನ ಸಮಸ್ಯೆಗಳಿಂದ ಸಾರ್ವಜನಿಕ ಗಮನವನ್ನು ದೂರ ಸೆಳೆಯುವ ಒಂದು ಯತ್ನ ಇದು ಎನ್ನಬಹುದು. ಜೊತೆಗೇ ಭದ್ರತಾ ಕಾಳಜಿಗಳೂ ಮೇಲುಗೈ ಪಡೆಯುತ್ತವೆ. ಉತ್ತರ ಕೊರಿಯಾಗೆ ಅಮೆರಿಕದಿಂದ ದೊರೆತಿರುವ ಭಯೋತ್ಪಾದಕ ರಾಷ್ಟ್ರವೆಂಬ ಹಣೆಪಟ್ಟಿ ಹಾಗೂ ದಕ್ಷಿಣ ಕೊರಿಯಾದಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳು ಉತ್ತರ ಕೊರಿಯಾದ ಅಭ್ರದತೆಯನ್ನು ಹೆಚ್ಚಿಸುವಂತಹವು. ಇದು ಅದರ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ಸಮರ್ಥನೆಗಳನ್ನು ಒದಗಿಸುತ್ತದೆ. ಏಕೆಂದರೆ ಪರಮಾಣು ಕಾರ್ಯಕ್ರಮ ಕೈಬಿಟ್ಟ ಕೆಲವೇ ವರ್ಷಗಳಲ್ಲಿ ಲಿಬ್ಯಾ ಪಶ್ಚಿಮ ರಾಷ್ಟ್ರಗಳಿಂದ ಆಕ್ರಮಣಗಳಿಗೆ ತುತ್ತಾದದ್ದು ಇತಿಹಾಸದಲ್ಲಿದೆ. ಉತ್ತರ ಕೊರಿಯಾದ ಪ್ರಚೋದನಾತ್ಮಕ ಹಾಗೂ ಉದ್ಧಟತನದ ಕ್ರಿಯೆಗಳನ್ನು ನಿರ್ವಹಿಸುವಾಗ, ಈ ಎಲ್ಲಾ ಅಂಶಗಳನ್ನೂ ಅಂತರರಾಷ್ಟ್ರೀಯ ಸಮುದಾಯ ಗಮನಕ್ಕೆ ತೆಗೆದುಕೊಳ್ಳುವುದು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.