ಅವಸರದ ಅನುಮೋದನೆ ಏಳು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ಮಸೂದೆಗಳಿಗೆ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ನೀಡಲಾಗಿದೆ. ಈ ಮಸೂದೆಗಳ ಅಂಗೀಕಾರಕ್ಕೆ ಸರ್ಕಾರ ತೋರಿಸಿದ ತರಾತುರಿ ಕುರಿತು ವಿರೋಧ ಪಕ್ಷಗಳು ಮಾತ್ರವಲ್ಲ ಆಡಳಿತ ಪಕ್ಷದ ಕೆಲವು ಸದಸ್ಯರಿಂದಲೂ ವ್ಯಕ್ತವಾದ ಆಕ್ಷೇಪಗಳು ಗಮನಾರ್ಹ. ಅದೂ, ತನ್ನ ಆಡಳಿತದ ಕಡೆಯ ಅಧಿವೇಶನದಲ್ಲಿ ಬಿಜೆಪಿ ಸರ್ಕಾರ ತೋರಿಸಿದ ಈ ಆತುರದ ಬಗ್ಗೆ ಸಹಜವಾಗಿಯೇ ಪ್ರಶ್ನೆಗಳು ಮೂಡಿವೆ. ಈ ವಿಚಾರದಲ್ಲಿ ಸರ್ಕಾರ ಅನುಸರಿಸಿರುವ ಕ್ರಮಗಳೇ ಪ್ರಶ್ನಾರ್ಹ. ಮೊದಲನೆಯದಾಗಿ, ಸದನದಲ್ಲಿ ಚರ್ಚೆಗಳಿಲ್ಲದೆಯೇ ಈ ಮಸೂದೆಗಳು ಅಂಗೀಕಾರವಾಗಿವೆ. ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲೂ ಕೊನೆಯ ಕ್ಷಣದಲ್ಲಿ, 13 ಖಾಸಗಿ ವಿಶ್ವವಿದ್ಯಾಲಯಗಳಿಗೆ ಅಂಗೀಕಾರ ನೀಡಲಾಗಿತ್ತು. ಈ ಬಾರಿ ಮತ್ತೆ ಅದೇ ತಂತ್ರ ಬಳಕೆಯಾಗಿದೆ. ಮಸೂದೆಗಳ ಮಂಡನೆ ನಂತರ, ಅವುಗಳ ಅಧ್ಯಯನಕ್ಕೆ ಒಂದಷ್ಟು ಸಮಯಾವಕಾಶ ಇರಬೇಕು. ಆದರೆ ಅದಕ್ಕೆ ಅವಕಾಶವೇ ಇಲ್ಲದಂತೆ ಆತುರದಲ್ಲಿ ಅಂಗೀಕಾರಗಳನ್ನು ನೀಡುವಂತಹ ಈ ಬೆಳವಣಿಗೆ ಆತಂಕಕಾರಿ. ರಾಜ್ಯದಲ್ಲಿ ಈಗಾಗಲೇ ಎರಡು ಖಾಸಗಿ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಈಗ ಸ್ಥಾಪನೆಗೆ ಅನುಮೋದನೆ ಪಡೆದುಕೊಂಡಿರುವ ಖಾಸಗಿ ವಿಶ್ವವಿದ್ಯಾಲಯಗಳ ಸಂಖ್ಯೆ ಇಪ್ಪತ್ತು. ಈ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡಲು ಅನುಸರಿಸಲಾದ ಮಾನದಂಡಗಳೇನು ಎಂಬುದು ಸ್ಪಷ್ಟವಾಗಿಲ್ಲ. ವಿಶ್ವವಿದ್ಯಾಲಯದ ಸ್ಥಾನಮಾನ ನೀಡುವಷ್ಟರ ಮಟ್ಟಿಗಿನ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ಈ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆಯೆ ಎಂಬುದರ ಕುರಿತು ಪರಿಶೀಲನೆಯಾಗಿದೆಯೆ ಎಂಬಂತಹ ಪ್ರಶ್ನೆಯೂ ಇಲ್ಲಿದೆ. ಜೊತೆಗೆ, ಅಗತ್ಯವಾದ ನಿಯಂತ್ರಣ ನಿಯಮಾವಳಿಗಳನ್ನು ರೂಪಿಸದೆಯೇ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮುಂದಾಗಿರುವುದು ಅನುಮಾನಗಳಿಗೆ ಕಾರಣವಾಗುವಂತಹದ್ದು. ಉನ್ನತ ಶಿಕ್ಷಣ ವಲಯದಲ್ಲಿ, ಶಿಕ್ಷಣ ಎಂಬುದೊಂದು ದೊಡ್ಡ ಉದ್ಯಮ ವ್ಯವಹಾರವಾಗಿ ಬದಲಾಗುತ್ತಿರುವ ಲಕ್ಷಣಗಳು ಆತಂಕಕಾರಿ. ಹಣ ಹಾಗೂ ಭೂಮಿ ಇರುವ ಯಾರು ಬೇಕಾದರೂ ವಿಶ್ವವಿದ್ಯಾಲಯ ಸ್ಥಾಪಿಸಬಹುದೆಂಬ ಸ್ಥಿತಿಗೆ ತಲುಪಿರುವುದು ಶಿಕ್ಷಣದ ಗುಣಮಟ್ಟದ ಅಧಃಪತನಕ್ಕೆ ಸಾಕ್ಷಿ. ಬರೀ ಪದವಿಗಳನ್ನು ದಯಪಾಲಿಸುವುದೇ ವಿಶ್ವವಿದ್ಯಾಲಯಗಳ ಗುರಿಯಲ್ಲ. ಜ್ಞಾನ ಹಾಗೂ ವಿದ್ವತ್ ಪ್ರಸರಣದಲ್ಲಿ ಈ ವಿಶ್ವವಿದ್ಯಾಲಯಗಳ ಪಾತ್ರ ಎಂತಹದ್ದು ಎಂಬುದೂ ಮುಖ್ಯವಾಗುತ್ತದೆ. ಹೆಚ್ಚಿನ ಹೊಸ ವಿಶ್ವವಿದ್ಯಾಲಯಗಳು ಬೆಂಗಳೂರಿನಲ್ಲೇ ಸ್ಥಾಪನೆಗೊಳ್ಳುತ್ತಿವೆ ಎಂಬುದೂ ವಿವಾದಾಸ್ಪದ. ಈಗಾಗಲೇ ಬೆಂಗಳೂರು, ಹಲವಾರು ಶೈಕ್ಷಣಿಕ ಸಂಸ್ಥೆಗಳಿಗೆ ನೆಲೆಯಾಗಿದೆ. ವಾಸ್ತವವಾಗಿ, ರಾಜ್ಯದ ಇತರ ಜಿಲ್ಲೆಗಳಿಗೆ ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸುವ ವಿಚಾರವನ್ನು ಮಾಡುವುದು ಮುಖ್ಯವಾಗಿತ್ತು. ಅಭಿವೃದ್ಧಿ ಕಾಣದ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವಂತಹ ಉದ್ದೇಶ ಇರಿಸಿಕೊಂಡು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮುಂದಾಗಬಹುದಿತ್ತು. ಆದರೆ ಸದ್ಯದ ವಿದ್ಯಮಾನಗಳನ್ನು ಗಮನಿಸಿದಲ್ಲಿ, ಸ್ಥಳೀಯ ಅಗತ್ಯಗಳಿಗಿಂತ ಹೆಚ್ಚಾಗಿ ಲಾಭದಾಯಕತೆಯೇ ಹೆಚ್ಚಿನ ಆದ್ಯತೆ ಪಡೆದುಕೊಂಡಂತೆ ಕಂಡು ಬರುತ್ತಿದೆ. ಖಾಸಗಿ ವಿಶ್ವವಿದ್ಯಾಲಯಗಳ ಹೆಚ್ಚಳ ಶಿಕ್ಷಣದ ವೆಚ್ಚವನ್ನು ದುಬಾರಿಯಾಗಿಸಬಹುದು ಎಂಬಂತಹ ಆತಂಕಗಳು ಸಹಜವಾದದ್ದೇ. ಹೀಗಾಗಿ, ಇಷ್ಟೊಂದು ಸಂಖ್ಯೆಯಲ್ಲಿ ಖಾಸಗಿ ವಿ.ವಿಗಳ ಸ್ಥಾಪನೆಗೆ ಈ ತರಾತುರಿ ಅನುಮೋದನೆಯ ಅನಿವಾರ್ಯತೆ ಏನಿತ್ತು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸುವುದು ಒಳಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.