ಸೂಕ್ಷ್ಮ ನಿರ್ವಹಣೆ ಅಗತ್ಯ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿರುವ ಭಾರತೀಯ ದೂತಾವಾಸದಲ್ಲಿ ಆಶ್ರಯ ಪಡೆದುಕೊಂಡು ಆರು ದಿನಗಳಾಗಿವೆ. ಈ ವಿದ್ಯಮಾನ ಕುರಿತು ಮಾಲ್ಡೀವ್ಸ್‌ನ ಹಾಲಿ ಅಧ್ಯಕ್ಷ ಮೊಹಮ್ಮದ್ ವಾಹಿದ್ ತಮ್ಮ ಅಸಂತೋಷ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಿಗೇ ಮಾಲ್ಡೀವ್ಸ್‌ನಲ್ಲಿರುವ ಭಾರತದ ಹೈಕಮೀಷನರ್ ಡಿ. ಎಂ. ಮುಲೆ ಅವರನ್ನು ಮಾಲ್ಡೀವ್ಸ್‌ನ ವಿದೇಶಾಂಗ ಕಚೇರಿಗೆ ಕರೆಸಿಕೊಂಡು ಪ್ರತಿಭಟನಾ ಪತ್ರವನ್ನು ನೀಡಲಾಗಿದೆ. ನಶೀದ್ ಅವರು ರಾಷ್ಟ್ರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ಕ್ರಿಮಿನಲ್ ಕೋರ್ಟ್‌ನ ಮುಖ್ಯ ನ್ಯಾಯಾಧೀಶರೊಬ್ಬರನ್ನು ಅಕ್ರಮ ಬಂಧನಕ್ಕೊಳಪಡಿಸಿದ್ದರು ಎಂಬ ಆರೋಪದ ಮೇಲೆ ನಶೀದ್ ವಿರುದ್ಧ ಬಂಧನದ ಆದೇಶವನ್ನು ಮಾಲ್ಡೀವ್ಸ್ ಕೋರ್ಟ್ ಹೊರಡಿಸಿದೆ. ಆದರೆ, ಮುಂದಿನ ಸೆಪ್ಟೆಂಬರ್‌ನ್ಲ್ಲಲೇ ಅಧ್ಯಕ್ಷೀಯ ಚುನಾವಣೆಗಳಿಗೆ ಮಾಲ್ಡೀವ್ಸ್ ಸನ್ನದ್ಧವಾಗುತ್ತಿದ್ದು, ಈ ಚುನಾವಣೆಯಲ್ಲಿ ನಶೀದ್ ಸ್ಪರ್ಧಿಸುವುದನ್ನು ತಡೆಯುವ ರಾಜಕೀಯ ಹುನ್ನಾರದ ಫಲ ಈ ಕೋರ್ಟ್ ಆದೇಶ ಎಂಬಂತಹ ವಿಶ್ಲೇಷಣೆಗಳಿವೆ. 30 ವರ್ಷಗಳ ಕಾಲ ರಾಷ್ಟ್ರದ ಅಧ್ಯಕ್ಷರಾಗಿದ್ದ ಮೌಮೂನ್ ಅಬ್ದುಲ್ ಗಯೂಮ್ ವಿರುದ್ಧ 2008ರ ಚುನಾವಣೆಯಲ್ಲಿ ಜಯ ಸಾಧಿಸಿ ನಶೀದ್ ಅವರು ಮಾಲ್ಡೀವ್ಸ್‌ನ ಅಧ್ಯಕ್ಷರಾಗಿದ್ದರು. ಆದರೆ ಕಳೆದ ವರ್ಷ ಫೆಬ್ರುವರಿಯಲ್ಲಿ ಇದ್ದಕ್ಕಿದ್ದಂತೆ ನಶೀದ್ ರಾಜೀನಾಮೆ ನೀಡಿದರು. ಕ್ಷಿಪ್ರಕ್ರಾಂತಿಯಲ್ಲಿ ತಮ್ಮನ್ನು ಪದಚ್ಯುತಗೊಳಿಸಲಾಯಿತು ಎಂದು ನಂತರ ನಶೀದ್ ಪ್ರತಿಪಾದಿಸಿದ್ದರು. ಆಗಿನಿಂದಲೂ ರಾಜಕೀಯ ಅಸ್ಥಿರತೆಯ ಬಿಕ್ಕಟ್ಟನ್ನು ಮಾಲ್ಡೀವ್ಸ್ ಎದುರಿಸುತ್ತಿದೆ. ನಶೀದ್ ಅವರ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿಯ(ಎಂಡಿಪಿ) ನಾಯಕರ ವಿರುದ್ಧವೂ ವ್ಯವಸ್ಥಿತವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬಂಥ ಆರೋಪಗಳೂ ಇವೆ. ಹಿಂದಿನಿಂದಲೂ ಭಾರತ, ಈ ಪುಟ್ಟ ದ್ವೀಪಗಳ ರಾಷ್ಟ್ರ ಮಾಲ್ಡೀವ್ಸ್ ಜೊತೆಗಿನ ದ್ವಿಪಕ್ಷೀಯ ಬಾಂಧವ್ಯದ ಇರಿಸುಮುರಿಸುಗಳನ್ನು ದೊಡ್ಡದಾಗಿ ಮಾಡಿಕೊಂಡಿಲ್ಲ. ಮಾಲ್ಡೀವ್ಸ್ ಇರುವ ಆಯಕಟ್ಟಿನ ನೆಲೆಯ ಮಹತ್ವದ ಅರಿವು ಭಾರತಕ್ಕಿದೆ. ಈ ಮಧ್ಯೆ, ನಶೀದ್ ಪದಚ್ಯುತಿಯ ನಂತರ, ಇತ್ತೀಚಿನ ತಿಂಗಳುಗಳಲ್ಲಿ ಮಾಲ್ಡೀವ್ಸ್‌ನತ್ತ ಹೆಚ್ಚಿನ ಆಸಕ್ತಿಯನ್ನು ಚೀನಾ ತೋರುತ್ತಿದೆ. ಈ ಬೆಳವಣಿಗೆಗಳನ್ನು ಭಾರತ ಕಡೆಗಣಿಸಲಾಗದು. ಮಾಲ್ಡೀವ್ಸ್‌ನಲ್ಲಿ ಮುಕ್ತ ಹಾಗೂ ನ್ಯಾಯಯುತ ರೀತಿಯಲ್ಲಿ ಪ್ರಜಾಸತ್ತೆ ಮರಳಬೇಕೆಂಬುದೇ ಭಾರತದ ಆಶಯ. ಮಾಲ್ಡೀವ್ಸ್‌ನಲ್ಲಿ ಈಗ ಉಂಟಾಗಿರುವ ಬಿಕ್ಕಟ್ಟನ್ನು ಭಾರತ ಹೇಗೆ ನಿರ್ವಹಿಸುತ್ತದೆ ಎಂಬುದನ್ನು ದಕ್ಷಿಣ ಏಷ್ಯಾ ವಲಯದಲ್ಲಿನ ರಾಷ್ಟ್ರಗಳು ಎಚ್ಚರಿಕೆಯಿಂದ ಗಮನಿಸುತ್ತವೆ ಎಂಬುದು ಭಾರತದ ಪ್ರಜ್ಞೆಯಲ್ಲಿರಬೇಕು. ಈ ಹಿಂದೆ, ಎಂಡಿಪಿ ನೇತೃತ್ವದಲ್ಲಿ ಮಾಲ್ಡೀವ್ಸ್‌ನಲ್ಲಿ ಪ್ರಜಾತಂತ್ರ ಪರ ಆಂದೋಲನ ಉದಯವಾದಾಗ, ಮೂರು ದಶಕ ರಾಷ್ಟ್ರವನ್ನಾಳಿದ್ದ ಮೌಮೂನ್ ಗಯೂಮ್‌ಗೇ ಬೆಂಬಲ ನೀಡುವುದನ್ನು ಭಾರತ ಮುಂದುವರಿಸಿತ್ತು. ಮಾಲ್ಡೀವ್ಸ್‌ನಲ್ಲಿ ಪ್ರಜಾಸತ್ತೆ ಸ್ಥಾಪನೆ ಪರ ಬೆಂಬಲ ನೀಡುವಲ್ಲಿ ಆಗ ಭಾರತ ಹಿಂಜರಿಕೆಯ ನೀತಿ ಅನುಸರಿಸಿತ್ತು. ಈ ನಿಟ್ಟಿನಲ್ಲಿ ಸೂಕ್ಷ್ಮ ವಿಶ್ಲೇಷಣೆಗಳನ್ನು ನಡೆಸಿ ಸೂಕ್ತ ದೃಷ್ಟಿಕೋನಗಳನ್ನು ರೂಪಿಸಿಕೊಳ್ಳುವುದು ಅಗತ್ಯ. ಮಾಲ್ಡೀವ್ಸ್ ಯುವಜನರು ಪ್ರಜಾಸತ್ತೆಯ ಪರವಾಗಿದ್ದಾರೆ ಎಂಬುದನ್ನೂ ಭಾರತ ಮರೆಯಲಾಗದು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.