ಕಡಿವಾಣ ಸಾಧ್ಯವೇ? ಚುನಾವಣಾ ಸುಧಾರಣೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ಚುನಾವಣಾ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಅಭ್ಯರ್ಥಿಗಳ ಮೇಲೆ ಅಂಕುಶವಿಡುವುದಾಗಿ ಚುನಾವಣಾ ಆಯೋಗ ಎಚ್ಚರಿಸಿದೆ. ಆದರೆ ಚುನಾವಣಾ ಆಯೋಗ ಚಾಪೆ ಕೆಳಗೆ ತೂರಿದರೆ, ರಾಜಕೀಯ ಪಕ್ಷಗಳು ರಂಗೋಲಿ ಕೆಳಗೆ ನುಗ್ಗುವ ಪರಿಪಾಠವನ್ನು ಬೆಳಸಿಕೊಂಡಿವೆ. ಚುನಾವಣೆಯ ಸಂದರ್ಭದಲ್ಲಿ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ಹಲವು ಸಂಹಿತೆಗಳನ್ನು ಪ್ರಕಟಿಸುತ್ತದೆ.ಆದರೆ ಇದನ್ನು ಉಲ್ಲಂಘಿಸಲು ತುದಿಗಾಲಲ್ಲಿ ನಿಂತವರಂತೆ ಅಭ್ಯರ್ಥಿಗಳು ವರ್ತಿಸುತ್ತಾರೆ. ನೀತಿ ಸಂಹಿತೆ ಉಲ್ಲಂಘಿಸುವುದು ಹೊಸತೇನಲ್ಲ. ಹಿಂದೆಯೂ ಆಗಿದೆ. ಮುಂದೆಯೂ ಆಗುತ್ತದೆ. ನೀತಿ ಸಂಹಿತೆ ಉಲ್ಲಂಘಿಸುವವರ ಮೇಲೆ ಚುನಾವಣಾ ಆಯೋಗ ಗಂಭೀರ ಕ್ರಮ ಕೈಗೊಳ್ಳುವವರೆಗೆ ಇಂತಹ ಚುನಾವಣಾ ಅಪರಾಧಗಳು ನಡೆಯುತ್ತಲೇ ಇರುತ್ತವೆ. ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡ ಉದಾಹರಣೆಗಳು ಬೆಳಕಿಗೆ ಬರುತ್ತಿಲ್ಲ. ಹೀಗಾಗಿ ಅಭ್ಯರ್ಥಿಗಳಿಗೆ ಹೆದರಿಕೆ ಇಲ್ಲ. ಟಿ.ಎನ್.ಶೇಷನ್ ಅವರು ಚುನಾವಣಾ ಆಯೋಗದ ಆಯುಕ್ತರಾಗಿದ್ದಾಗ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಭ್ರಷ್ಟಾಚಾರ ಮತ್ತು ವಾಮಮಾರ್ಗ ಹಿಡಿಯುವ ಕೃತ್ಯಗಳಿಗೆ ಕಡಿವಾಣ ಹಾಕಿತ್ತು. ಆ ನಂತರವೂ ಚುನಾವಣಾ ಆಯೋಗ ಹಲವು ಕಠಿಣಕ್ರಮ ಮುಂದುವರಿಸಿಕೊಂಡು ಬಂದಿದೆ. ಆದರೆ ಏನೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ರಾಜಕಾರಣಿಗಳು ಕಳ್ಳದಾರಿ ಹಿಡಿದು ಚುನಾವಣಾ ಅಕ್ರಮಗಳಲ್ಲಿ ಮೇಲುಗೈ ಸಾಧಿಸುತ್ತಿರುವುದು ವಿಷಾದದ ಸಂಗತಿ. ಜೂನ್ 3 ರೊಳಗೆ ನಡೆಯಬೇಕಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಪೂರ್ವಸಿದ್ಧತೆಗೆ ಆಗಮಿಸಿದ್ದ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್, ಕಟ್ಟುನಿಟ್ಟಿನ ಸೂಚನೆಗಳನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ನೀಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳೇ ಮನೆಮನೆಗೆ ಮತದಾರರ ಚೀಟಿ ತಲುಪಿಸಿ ಮತ ಬೇಡುವ ಪದ್ಧತಿಗೆ ಕಡಿವಾಣ ಹಾಕಿರುವುದು ದೃಢನಿರ್ಧಾರ. ಮತದಾರರ ಹೆಸರು, ವಿಳಾಸ,ಮತಗಟ್ಟೆ ಹೆಸರು ಇತ್ಯಾದಿ ವಿವರಗಳಿರುವ ಮತದಾರರ ಚೀಟಿಯನ್ನು ಆಯೋಗವೇ ಮತದಾರದ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿರುವುದು, ಅಭ್ಯರ್ಥಿಗಳ ಆರ್ಭಟಕ್ಕೆ ಹಾಕಿರುವ ಬೇಲಿ. ಇದರಿಂದಾಗಿ ಮತದಾರನಿಗೆ ಆಮಿಷ ಒಡ್ಡುವುದು ತಪ್ಪುತ್ತದೆ. ಮತದಾರರಿಗಾಗುವ ಕಿರಿಕಿರಿಯನ್ನೂ ತಪ್ಪಿಸಿದಂತಾಗುತ್ತದೆ.ಒಂದೇ ಕಡೆ ಮೂರುವರ್ಷಗಳಿಂದ ಬೀಡು ಬಿಟ್ಟಿರುವ ಅಧಿಕಾರಿಗಳ ವರ್ಗಾವಣೆ, ಕಾಸಿಗಾಗಿ ಸುದ್ದಿಯ ಮೇಲೆ ನಿಗಾ, ಪಕ್ಷಪಾತಿ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ, ಚುನಾವಣಾ ವೆಚ್ಚಕ್ಕೆ ಅಭ್ಯರ್ಥಿಗಳಿಗೆ ಪ್ರತ್ಯೇಕ ಬ್ಯಾಂಕ್ ಖಾತೆ, ವೆಚ್ಚ ವೀಕ್ಷಕರ ನೇಮಕ ಮೊದಲಾದವೆಲ್ಲಾ ಚುನಾವಣಾ ಅಕ್ರಮಗಳನ್ನು ಬುಡದಿಂದಲೇ ತಡೆಯುವ ಕ್ರಮ. ಆದರೆ ರಾಜಕೀಯ ಪಕ್ಷಗಳಲ್ಲಿ ಹಾಗೂ ಅಭ್ಯರ್ಥಿಗಳಲ್ಲಿ ಸ್ವಯಂ ಶಿಸ್ತು ಮೂಡದ ಹೊರತು ಚುನಾವಣಾ ಪದ್ಧತಿಯಲ್ಲಿ ಸುಧಾರಣೆ, ಅಚ್ಚುಕಟ್ಟು ಮತದಾನ ಸಾಧ್ಯವಿಲ್ಲದ ಮಾತು.ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂಬ ಒಂದೇ ಗುರಿ ರಾಜಕಾರಣಿಗಳದು. ಹೀಗಾಗಿ ಚುನಾವಣಾ ಪಾವಿತ್ರ್ಯವೇ ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇ ಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.