ಬಾಂಗ್ಲಾ ಬಾಂಧವ್ಯ ಗಟ್ಟಿಯಾಗಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಬಾಂಗ್ಲಾ ದೇಶದ ಪ್ರವಾಸದ್ಲ್ಲಲಿದ್ದಾರೆ. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಕೈಗೊಂಡ ಮೊದಲ ವಿದೇಶ ಭೇಟಿ ಇದು. ಇದರಿಂದ ಈ ನೆರೆ ರಾಷ್ಟ್ರಕ್ಕೆ ಅವರು ನೀಡಿರುವ ಮಹತ್ವ ಅರ್ಥ ಮಾಡಿಕೊಳ್ಳಬಹುದು. ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಹಾಗೂ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಅವರು ಈ ಮುಂಚೆಯೇ ಢಾಕಾಗೆ ಭೇಟಿ ನೀಡಿ ರಾಷ್ಟ್ರಪತಿಗಳ ಭೇಟಿಗೆ ಮುನ್ನುಡಿ ಬರೆದಿದ್ದರು. ಆದರೆ, ಇದೇ ಸಂದರ್ಭದ್ಲ್ಲಲೇ ಬಾಂಗ್ಲಾದೇಶದಲ್ಲಿ ಹಿಂಸಾಚಾರಗಳು ಭುಗಿಲೆದ್ದಿರುವುದು ವಿಪರ್ಯಾಸ. 1971ರಲ್ಲಿ ಬಾಂಗ್ಲಾ ವಿಮೋಚನೆ ಹೋರಾಟದ ಸಂದರ್ಭದಲ್ಲಿ ನಡೆಸಿದ ಅಪರಾಧಗಳಿಗಾಗಿ, ಬಾಂಗ್ಲಾದೇಶದ ಅತಿ ದೊಡ್ಡ ಇಸ್ಲಾಮಿಕ್ ಪಕ್ಷ ಜಮಾತ್ - ಇ - ಇಸ್ಲಾಮಿ (ಜೆಐ)ಯ ಉಪಾಧ್ಯಕ್ಷ ದೆಲ್‌ವರ್ ಹುಸೇನ್ ಸಯ್ಯೆದಿಗೆ ಮರಣ ದಂಡನೆಯನ್ನು, ಯುದ್ಧ ಅಪರಾಧ ನ್ಯಾಯಮಂಡಳಿ ವಿಧಿಸಿರುವುದು ಈ ಹಿಂಸಾಚಾರಗಳಿಗೆ ಮೂಲ ಕಾರಣ. ಈ ವರ್ಷ ಜನವರಿ ತಿಂಗಳಲ್ಲಿ ಇದೇ ಅಪರಾಧಕ್ಕಾಗಿ ಜಮಾತ್‌ನ ಮತ್ತೊಬ್ಬ ನಾಯಕನಿಗೆ ಶಿಕ್ಷೆ ವಿಧಿಸ್ದ್ದಿದಾಗಲೂ ಇದೇ ರೀತಿಯ ಹಿಂಸಾಚಾರಗಳು ನಡೆದು ಅನೇಕ ಮಂದಿ ಹತ್ಯೆಯಾಗಿದ್ದರು. 1971ರಲ್ಲಿ ಪಾಕಿಸ್ತಾನವನ್ನು ಜಮಾತ್ ಬೆಂಬಲಿಸಿತ್ತು ಎಂಬ ಕಾರಣಕ್ಕಾಗಿ ವಿಧಿಸಲಾಗಿರುವ ಶಿಕ್ಷೆ ಇದು. ಏಕೆಂದರೆ. ಜಮಾತ್‌ನ ನೆರವಿನೊಂದಿಗೆ ಲಕ್ಷಾಂತರ ಬಾಂಗ್ಲಾ ಪ್ರಜೆಗಳ ಹತ್ಯೆ, ಅತ್ಯಾಚಾರಗಳಿಗೆ ಪಾಕಿಸ್ತಾನಿ ಸೇನೆ ಆಗ ಕಾರಣವಾಗಿತ್ತು. ಭಾರತದ ನೆರವಿನೊಂದಿಗೆ ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆಗೊಂಡಾಗಿನಿಂದಾಗಲೂ ರಾಷ್ಟ್ರದಲ್ಲಿ ಬೇರುಬಿಟ್ಟಿರುವ ರಾಜಕೀಯ ವಿಭಜನೆಯೇ ಈ ಸಂಘರ್ಷಕ್ಕೆ ಮೂಲ ಕಾರಣ. ಬಾಂಗ್ಲಾದೇಶ ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ಮುಸ್ಲಿಂ ರಾಷ್ಟ್ರವಾಗಿದೆ. ಈ ರಾಷ್ಟ್ರದ ಭವಿಷ್ಯದ ಹಾದಿ ಕುರಿತಂತೆ ತೀವ್ರವಾದ ಭಿನ್ನ ನಿಲುವುಗಳು ಈಗ ತಲೆಯೆತ್ತಿವೆ. ಹೆಚ್ಚು ಜಾತ್ಯತೀತವಾದ ಬಂಗಾಳಿ ರಾಷ್ಟ್ರೀಯವಾದ ಹಾಗೂ ಇಸ್ಲಾಮಿಕ್ ಸಿದ್ಧಾಂತಗಳ ನಡುವಿನ ದೊಡ್ಡ ಹೋರಾಟದ ಭಾಗವೂ ಆಗಿದೆ ಈ ಸಂಘರ್ಷ. ಜಾತ್ಯತೀತ ರಾಷ್ಟ್ರದ ಪರಿಕಲ್ಪನೆಯೊಂದಿಗೆ ಬಾಂಗ್ಲಾದೇಶ ಉದಯವಾಯಿತಾದರೂ ನಂತರ ಆ ಪರಿಕಲ್ಪನೆ ದುರ್ಬಲಗೊಂಡಿತು. ಹಳೆಯ ಸಿದ್ಧಾಂತಗಳತ್ತ ರಾಷ್ಟ್ರವನ್ನೊಯ್ಯಲು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಸರ್ಕಾರ ಯತ್ನಿಸುತ್ತಿದೆ. ಆದರೆ ಈಗಿನ ಸಂಘರ್ಷ, ಈ ನಿಟ್ಟಿನಲ್ಲಿನ ಕ್ಲಿಷ್ಟಕರ ಹಾದಿಗೆ ಸಂಕೇತ. ಅವಾಮಿ ಲೀಗ್‌ನ ಶೇಕ್ ಹಸೀನಾ ಅವರ ಜೊತೆ ಭಾರತದ್ದು ಬಲವಾದ ಬಾಂಧವ್ಯ. ಇದೇ ಸಂದರ್ಭದ್ಲ್ಲಲೇ ಬಾಂಗ್ಲಾದೇಶದ ಪ್ರತಿಪಕ್ಷವಾದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)ನಾಯಕಿ ಖಲೀದಾ ಜಿಯಾ, ಪ್ರಣವ್ ಮುಖರ್ಜಿ ಅವರೊಂದಿಗೆ ನಿಗದಿಯಾಗಿದ್ದ ಅಧಿಕೃತ ಭೇಟಿಯನ್ನು ರದ್ದು ಮಾಡಿದ್ದಾರೆ. ಈ ಹಿಂದೆ ಖಲೀದಾ ಜಿಯಾರ ಬಿಎನ್‌ಪಿ, ಜಮಾತ್ ಜೊತೆಗಿನ ಮೈತ್ರಿಯಲ್ಲೇ ಸರ್ಕಾರ ರಚಿಸಿತ್ತು ಎಂಬುದನ್ನು ಸ್ಮರಿಸಬಹುದು. ಭಾರತವನ್ನು ಮಿತ್ರ ರಾಷ್ಟ್ರವನ್ನಾಗಿ ಬಾಂಗ್ಲಾದ ಎಲ್ಲಾ ಮುಖ್ಯ ರಾಜಕೀಯ ಪಕ್ಷಗಳೂ ಪರಿಗಣಿಸುವುದು ನೆರೆಹೊರೆಯ ಬಾಂಧವ್ಯಕ್ಕೆ ಹಿತಕರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.