ಸೆಮಿಸ್ಟರ್ ರದ್ದು ಸರಿಯಲ್ಲ ವಿಶ್ವ ವಿದ್ಯಾಲಯದ ಮಟ್ಟದಲ್ಲಿ ಸೆಮಿಸ್ಟರ್ ಶಿಕ್ಷಣ ಪದ್ಧತಿ ಜಾರಿಗೆ ಬಂದ ಮೇಲೆ ವಿದ್ಯಾರ್ಥಿ ಸಮೂಹದಲ್ಲಿ ಗಂಭೀರವಾದ ಅಧ್ಯಯನ ಪರಿಸರ ನಿರ್ಮಾಣವಾಗಿದೆ. ಉಪನ್ಯಾಸಕರಲ್ಲಿದ್ದ ಉದಾಸೀನ ಮನೋಭಾವಕ್ಕೆ ಅವಕಾಶವಿಲ್ಲವಾಗಿದೆ. ವಿಶ್ವ ವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಶಾಂತಿ ನೆಲೆಸಿದೆ. ಆದರೆ ಬಿಜೆಪಿಯು ಆಡಳಿತಕ್ಕೆ ಬಂದ ಮೇಲೆ ಸೆಮಿಸ್ಟರ್ ಪದ್ಧತಿಯನ್ನು ರದ್ದು ಮಾಡುವ ವಿಚಾರ ಆಗಿಂದಾಗ್ಗೆ ಕೇಳಿಬರುತ್ತಿರುವುದು ದುರದೃಷ್ಟಕರ. ಸೆಮಿಸ್ಟರ್ ಪದ್ಧತಿಯನ್ನು ಬದಲಾಯಿಸುವ ಬಗೆಗೆ ಉನ್ನತ ಶಿಕ್ಷಣ ಪರಿಷತ್ ಸಭೆ ಒಂದು ನಿರ್ಧಾರಕ್ಕೆ ಬರುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್ ಆಚಾರ್ಯ ಅವರು ತಮ್ಮ ಸರ್ಕಾರದ ಮನದಾಳವನ್ನು ಹೊರಹಾಕಿದ್ದಾರೆ. ಈ ಹಿಂದೆ ಇದೇ ಖಾತೆಯನ್ನು ಹೊಂದಿದ್ದ ಅರವಿಂದ ಲಿಂಬಾವಳಿ ಅವರು ಕೂಡಾ ಸೆಮಿಸ್ಟರ್ ಪದ್ಧತಿಯನ್ನು ಬದಲಿಸುವ ಬಗ್ಗೆ ಹಲವು ಬಾರಿ ಹೇಳಿದ್ದರು. ಸೆಮಿಸ್ಟರ್ ಪದ್ಧತಿ ಜಾರಿಗೆ ಬಂದ ಮೇಲೆ ವಿದ್ಯಾರ್ಥಿಗಳ ಚಟುವಟಿಕೆಗೆ ತೊಂದರೆ ಆಗಿರುವುದಾಗಿ ಅಲವತ್ತುಕೊಂಡಿದ್ದರು. ಇದು ನಿಜಕ್ಕೂ ದುರದೃಷ್ಟಕರ ಸಂಗತಿ. ಸೆಮಿಸ್ಟರ್ ಶಿಕ್ಷಣ ಪದ್ಧತಿ ಇಡೀ ವಿಶ್ವದಲ್ಲೇ ಜನಪ್ರಿಯವಾಗಿದೆ. ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಇದೇ ಪದ್ಧತಿ ಜಾರಿಯಲ್ಲಿದೆ. ಈ ಪದ್ಧತಿ ಜಾರಿಗೆ ಬಂದ ಮೇಲೆ ವಿಶ್ವ ವಿದ್ಯಾಲಯಗಳಲ್ಲಿ ಶೈಕ್ಷಣಿಕ ವಾತಾವರಣ ಉತ್ತಮವಾಗಿದೆ. ಶೈಕ್ಷಣಿಕ ಶಿಸ್ತು ಬಂದಿದೆ. ಪಾಠ ಪ್ರವಚನ ಕಾಲಕಾಲಕ್ಕೆ ತಕ್ಕಂತೆ ನಡೆಯುತ್ತಿದೆ. ವಿದ್ಯಾರ್ಥಿ ಸಮುದಾಯದಿಂದಾಗಲಿ, ಶಿಕ್ಷಕ ವರ್ಗದಿಂದಾಗಲಿ ಸೆಮಿಸ್ಟರ್ ಪದ್ಧತಿಯ ಬಗೆಗೆ ಅಪಸ್ವರ ಕೇಳಿಬಂದಿಲ್ಲ. ಹೀಗಿರುವಾಗ ಈ ಪದ್ಧತಿಯನ್ನು ಬದಲಾಯಿಸುವ ಚಿಂತನೆ ಸರ್ಕಾರಕ್ಕೆ ಏಕೆ ಬಂದಿದೆ ಎನ್ನುವುದು ಒಗಟಿನ ಪ್ರಶ್ನೆಯಾಗಿದೆ. ಈ ಪದ್ಧತಿಯನ್ನು ಬದಲಾಯಿಸುವುದಾದರೆ ಮತ್ತೆ ಯಾವ ಪದ್ಧತಿಯನ್ನು ಜಾರಿಗೆ ತರಲಾಗುವುದು ಎನ್ನುವುದನ್ನು ಶೈಕ್ಷಣಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಬಿಡಬೇಕು. ಸೆಮಿಸ್ಟರ್ ಪದ್ಧತಿಯಲ್ಲಿ ಯಾವ ದೋಷಗಳಿವೆ ಮತ್ತು ಇದಕ್ಕಿಂತ ಉತ್ತಮವಾದ ಪದ್ಧತಿಯ ರೂಪುರೇಷೆ ಏನು? ಈ ಹಿಂದೆ ಇದ್ದ ವಾರ್ಷಿಕ ಪರೀಕ್ಷಾ ಪದ್ಧತಿಯನ್ನೇ ಜಾರಿಗೆ ತರಲಾಗುವುದೇ -ಈ ಎಲ್ಲ ಪ್ರಶ್ನೆಗಳು ಚರ್ಚೆಯಾಗಬೇಕು. ವರ್ಷದ ಪಾಠ ಪ್ರವಚನವನ್ನೆಲ್ಲ ಕೇವಲ ಒಂದರೆಡು ತಿಂಗಳಲ್ಲಿ ಓದಿ ಪರೀಕ್ಷೆಗೆ ಕುಳಿತುಕೊಳ್ಳುವ ಪದ್ಧತಿ ಸರಿಯಲ್ಲ ಎನ್ನುವ ಕಾರಣಗಳಿಗಾಗಿ ಮತ್ತು ವಿದ್ಯಾರ್ಥಿಗಳು ನಿತ್ಯವೂ ಗಂಭೀರವಾಗಿ ವ್ಯಾಸಂಗದಲ್ಲಿ ತೊಡಗಬೇಕೆನ್ನುವ ಉದ್ದೇಶದಿಂದಲೇ ಸೆಮಿಸ್ಟರ್ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಪದ್ಧತಿಯಲ್ಲಿ ಲೋಪಗಳಿದ್ದರೆ ಅವುಗಳನ್ನು ಸರಿಪಡಿಸಿಕೊಂಡು ಅದನ್ನೇ ಮುಂದುವರಿಸುವುದು ವಿವೇಚನೆಯ ಮಾರ್ಗ. ಶಿಕ್ಷಣ ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಗಂಭೀರ ವಿಷಯ. ಆದ್ದರಿಂದ ಈ ಬಗೆಗೆ ಸರ್ಕಾರ ಇನ್ನೂ ಹತ್ತಾರು ಬಾರಿ ಯೋಚಿಸಿ ಹೆಜ್ಜೆ ಇಡುವುದು ಮುಖ್ಯ. ಆತುರದ ನಿರ್ಧಾರ ಒಳ್ಳೆಯದಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.