ಬುರುಡೆ ಇತಿಹಾಸ ಬೆಳಕಿಗೆ ಬರಲಿ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಕಳೆದ ಒಂದೂವರೆ ತಿಂಗಳಿಂದ ರಾಜ್ಯ ಪ್ರಾಚ್ಯವಸ್ತು ನಿರ್ದೇಶನಾಲಯ ನಡೆಸುತ್ತಿರುವ ಉತ್ಖನನದಲ್ಲಿ ಮುನ್ನೂರಕ್ಕೂ ಹೆಚ್ಚು ಮಾನವ ತಲೆ ಬುರುಡೆಗಳು ಪತ್ತೆಯಾಗಿವೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸಾರ್ವಜನಿಕ ಕಾಮಗಾರಿಯೊಂದಕ್ಕಾಗಿ ಮಣ್ಣು ಅಗೆಯುತ್ತಿದ್ದಾಗ ಸುಮಾರು ನೂರಕ್ಕೂ ಹೆಚ್ಚು ತಲೆ ಬುರುಡೆಗಳು ಪತ್ತೆಯಾಗಿದ್ದವು. ಇಷ್ಟು ತಲೆ ಬುರುಡೆಗಳು ಒಂದೆಡೆ ಸಿಕ್ಕಿರುವುದು ನಿಜಕ್ಕೂ ಕುತೂಹಲಕಾರಿ. ಈ ತಲೆ ಬುರುಡೆಗಳ ಹಿಂದಿನ ರಹಸ್ಯ ಪತ್ತೆ ಹಚ್ಚುವ ಪ್ರಯತ್ನ ನಡೆದಿದ್ದರೂ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಾಗಿಲ್ಲ. ಹಿಂದೆ ಯಾವುದೋ ಯುದ್ಧದಲ್ಲಿ ಸತ್ತ ಸೈನಿಕರನ್ನು ಒಂದೆಡೆ ಸಾಮೂಹಿಕವಾಗಿ ಹೂಳಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಆದರೆ ತಲೆ ಬುರುಡೆಗಳು ಮಾತ್ರವೇ ಅಲ್ಲಿ ಸಿಕ್ಕಿದ್ದು ದೇಹದ ಇತರ ಭಾಗಗಳ ಮೂಳೆಗಳು ಸಿಕ್ಕಿಲ್ಲ. ಹೀಗೇಕೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ. ಈ ತಲೆ ಬುರುಡೆಗಳು ಯಾರವು ಎಂಬುದನ್ನು ಮೊದಲು ಪತ್ತೆ ಹಚ್ಚಬೇಕು. ಕರ್ನಾಟಕ ವಿಶ್ವ ವಿದ್ಯಾಲಯದ ಇತಿಹಾಸ ವಿಭಾಗದ ಕೆಲ ಪ್ರಾಧ್ಯಾಪಕರು ಹಾಗೂ ಆಸಕ್ತರು ಈ ತಲೆ ಬುರುಡೆಗಳ ರಹಸ್ಯ ಪತ್ತೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರು ತಮ್ಮ ಅಭಿಪ್ರಾಯಗಳಿಗೆ ಖಚಿತ ಸಾಕ್ಷ್ಯಾಧಾರ ನೀಡಲು ವಿಫಲರಾಗಿದ್ದಾರೆ. ಬುರುಡೆಗಳ ಕೆಲ ಮಾದರಿಗಳನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿರುವ ಹೈದರಾಬಾದ್‌ನ ರಾಷ್ಟ್ರೀಯ ಫರೆನ್ಸಿಕ್ ಸಂಸ್ಥೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ತಜ್ಞರು ಇವುಗಳಲ್ಲಿ ಮಹಿಳೆಯರ ತಲೆ ಬುರುಡೆಗಳಿವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಮೂರನೇ ಅಭಿಪ್ರಾಯಕ್ಕಾಗಿ ಕೆಲವನ್ನು ಭುವನೇಶ್ವರದ ರಾಷ್ಟ್ರೀಯ ಪ್ರಯೋಗಶಾಲೆಗೆ ಕಳುಹಿಸಲಾಗಿದೆ. ಪ್ರಯೋಗಾಲಯ ಪರೀಕ್ಷೆಗಳಿಂದ ತಲೆ ಬುರುಡೆಗಳ ಹಿಂದಿನ ರಹಸ್ಯ ಪತ್ತೆಯಾಗುವ ಸಾಧ್ಯತೆ ಕಡಿಮೆ. ಅಣ್ಣಿಗೇರಿ ಪ್ರಾಚೀನ ಊರು. ಅದರ ಸುತ್ತಲಿನ ಅನೇಕ ಊರುಗಳು ಇತಿಹಾಸ ದೃಷ್ಟಿಯಿಂದ ಮಹತ್ವ ಪಡೆದಿವೆ. 150 -200 ವರ್ಷಗಳ ಹಿಂದೆ ಅಣ್ಣಿಗೇರಿ ಸುತ್ತಮುತ್ತ ಸತ್ತವರನ್ನು ಸಾಮೂಹಿಕವಾಗಿ ಒಂದೆಡೆ ಹೂತು ಹಾಕಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಆದರೆ ತಲೆ ಬುರುಡೆಗಳನ್ನು ಮಾತ್ರ ಹೂಳಲು ಏನು ಕಾರಣ ಎಂಬ ಪ್ರಶ್ನೆ ಏಳುತ್ತದೆ. ಹೀಗಾಗಿ ಯಾವುದೇ ಊಹೆ ಆಧಾರದ ಮೇಲೆ ಏನನ್ನೂ ಹೇಳಲಾಗದು. ಪ್ರಾಚ್ಯವಸ್ತು ನಿರ್ದೇಶನಾಲಯ ನಡೆಸುತ್ತಿರುವ ಉತ್ಖನನ ಪೂರ್ಣಗೊಂಡ ಮೇಲೆ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾದೀತು. ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಉತ್ಖನನ ನಡೆದರೆ ತಲೆ ಬುರುಡೆಗಳ ಹಿಂದಿನ ರಹಸ್ಯದ ಬೆಳಕು ಚೆಲ್ಲುವ ಹೊಸ ಸಂಗತಿಗಳು ಗೊತ್ತಾಗಬಹುದು. ಅಣ್ಣಿಗೇರಿ ಹಾಗೂ ಸುತ್ತಮುತ್ತಲಿನ ಊರುಗಳ ಸ್ಥಳೀಯ ಇತಿಹಾಸವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ತಲೆ ಬುರುಡೆಗಳ ಸುಳಿವು ಪತ್ತೆ ಹಚ್ಚಲು ಸಾಧ್ಯವಾಗುವಂತಹ ಮಾಹಿತಿಗಳು ಲಭ್ಯವಾಗಬಹುದು. ರಾಜ್ಯ ಸರ್ಕಾರ ಪ್ರಾಚ್ಯವಸ್ತು ಇಲಾಖೆ ನೇತೃತ್ವದಲ್ಲಿ ಇತಿಹಾಸ ತಜ್ಞರು ಮತ್ತು ಸ್ಥಳೀಯ ಆಸಕ್ತರನ್ನು ಬಳಸಿಕೊಂಡು ತಲೆ ಬುರುಡೆಗಳ ರಹಸ್ಯ ಪತ್ತೆ ಹಚ್ಚುವ ಕೆಲಸ ಮಾಡಬೇಕು. ಅಣ್ಣಿಗೇರಿ ಹಾಗೂ ಸುತ್ತಮುತ್ತಲಿನ ಇತಿಹಾಸಕ್ತರು ಮತ್ತು ಪ್ರಜ್ಞಾವಂತರು ತಮಗೆ ಗೊತ್ತಿರುವ ಸಂಗತಿಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಈ ವಿಷಯದ ಮೇಲೆ ಹೊಸ ಬೆಳಕು ಚೆಲ್ಲಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.