ಪ್ರತಿಮೆ ಸ್ಥಳ ಪುನರ್‌ಪರಿಶೀಲಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಮ್ಮ ಆಳ್ವಿಕೆಯಲ್ಲಿ ಮಾಡಿದ ಸಾಧನೆ ಮುಂದಿನ ದಿನಗಳಲ್ಲಿ ಜನಮಾನಸದಲ್ಲಿ ಉಳಿಯಬೇಕೆನ್ನುವ ಆಸೆ ಇದ್ದಂತಿದೆ. ಅದನ್ನು ಅವರು ಹಲವು ರೀತಿಯಲ್ಲಿ ಅನೇಕ ಕಡೆಗಳಲ್ಲಿ ವ್ಯಕ್ತಮಾಡಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ಐತಿಹಾಸಿಕ ಲಿಬರ್ಟಿ ಪ್ರತಿಮೆಯಂತೆಯೇ ಬೆಂಗಳೂರಿನಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ, ಹಾಗೆಯೇ ಬಸವೇಶ್ವರರ ಪ್ರತಿಮೆ ಸ್ಥಾಪನೆಗೆ ಕೋಟ್ಯಂತರ ರೂಪಾಯಿ ಘೋಷಿಸಿದ್ದಾರೆ. ಭುವನೇಶ್ವರಿ ಪ್ರತಿಮೆಯನ್ನು 25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವುದಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಘೋಷಿಸಿದ್ದಾರೆ. ಹಾಗೆಯೇ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ತುಮಕೂರಿನ ಸಿದ್ಧಗಂಗಾ ಕ್ಷೇತ್ರದಲ್ಲಿನ ಬೆಟ್ಟದ ಮೇಲೆ ಬಸವೇಶ್ವರರ ಬೃಹತ್ ಪ್ರತಿಮೆ ಸ್ಥಾಪಿಸುವುದಾಗಿಯೂ ಪ್ರಕಟಿಸಿದ್ದಾರೆ. ಈ ಎರಡೂ ಪ್ರತಿಮೆಗಳ ಸ್ಥಾಪನೆ ಸಂಬಂಧದಲ್ಲಿ ಸಾರ್ವಜನಿಕರಿಂದ ಪರ ಮತ್ತು ವಿರೋಧ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ. ಪ್ರತಿಮೆಗಳ ಸ್ಥಾಪನೆ ಹೊಸದೇನೂ ಅಲ್ಲ. ಈಗಾಗಲೇ ವಿಧಾನಸೌಧದ ಸುತ್ತಮುತ್ತ ಕೆಲವು ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಇನ್ನೂ ಕೆಲವು ನಾಯಕರ ಪ್ರತಿಮೆಗಳ ಸ್ಥಾಪನೆಗೆ ಹಲವು ವರ್ಗಗಳಿಂದ ಬಂದಿರುವ ಬೇಡಿಕೆಗಳು ಸರ್ಕಾರದ ಮುಂದಿವೆ. ಎಲ್ಲರ ಬೇಡಿಕೆಗಳನ್ನು ಈಡೇರಿಸಲು ಹೋದರೆ ಅದಕ್ಕೆ ಒಂದು ತಾರ್ಕಿಕ ಅಂತ್ಯ ಸಿಗುವುದು ಕಷ್ಟ. ಸಮಾಜಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಮಹಾನ್ ಚೇತನಗಳ ನೆನಪಿಗಾಗಿ, ಅವರ ತ್ಯಾಗ ಮತ್ತು ಸೇವೆಯನ್ನು ಸ್ಮರಿಸಿಕೊಳ್ಳುವುದಕ್ಕಾಗಿ ಪ್ರತಿಮೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿರುವುದು ವಿಶ್ವವ್ಯಾಪಿ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರತಿಮೆಗಳ ಸ್ಥಾಪನೆ ವಿವಾದಕ್ಕೊಳಗಾಗುತ್ತಿರುವುದೇ ಹೆಚ್ಚು. ಜೊತೆಗೆ ಅವುಗಳ ಉಸ್ತುವಾರಿ ಮತ್ತು ರಕ್ಷಣೆಯೂ ಸರ್ಕಾರಕ್ಕೆ ತಲೆನೋವಾಗಿದೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಮಾಯಾವತಿ ಅವರದೂ ಸೇರಿದಂತೆ ಹಲವು ನಾಯಕರ ಪ್ರತಿಮೆಗಾಗಿ ಜನತೆಯ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಅವರ ಈ ತೀರ್ಮಾನಗಳು ನ್ಯಾಯಾಲಯದ ಕಟೆಕಟೆಯನ್ನೂ ಹತ್ತಿವೆ. ರಾಜ್ಯದ ಅಭಿವೃದ್ಧಿಗಿಂತ ಪ್ರತಿಮೆಗಳಿಗೇ ಆದ್ಯತೆ ನೀಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಪ್ರತಿಮೆಗಳ ಸ್ಥಾಪನೆ ಆದ್ಯತೆಯ ಪ್ರಶ್ನೆಯಾಗಬಾರದು. ಸಿದ್ಧಗಂಗಾ ಮಠದ ಬೆಟ್ಟದಲ್ಲಿ ಸರ್ಕಾರವು ತನ್ನ ಖರ್ಚಿನಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸಲು ಹೊರಟಿರುವುದು ವಿಚಿತ್ರ. ಅದು ಖಾಸಗಿ ಕ್ಷೇತ್ರ. ಅಲ್ಲಿನ ಪ್ರದೇಶ ಮಠದ ಹಕ್ಕುದಾರಿಕೆಯ ವ್ಯಾಪ್ತಿಯಲ್ಲಿ ಬರುತ್ತದೆ. ಅದು ಸಾರ್ವಜನಿಕ ಅಥವಾ ಸರ್ಕಾರದ ಆಸ್ತಿಯಲ್ಲವಾದ ಕಾರಣ, ಅಂತಹ ಕಡೆ ಓಡಾಡಲು ಜನರಿಗೆ ಮುಕ್ತ ಸ್ವಾತಂತ್ರ್ಯ ಇರುವುದಿಲ್ಲ. ಖಾಸಗಿ ಒಡೆತನದ ಪ್ರದೇಶದಲ್ಲಿ ಯಾವಾಗ ಯಾರಿಗೆ ಪ್ರವೇಶ ನಿರ್ಬಂಧ ವಿಧಿಸುತ್ತಾರೆ ಎಂಬುದನ್ನು ಹೇಳಲು ಬರುವುದಿಲ್ಲ. ಆದ್ದರಿಂದ ಈ ಪ್ರತಿಮೆಯನ್ನು ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸಬೇಕು. ಇಲ್ಲವೆ ಆ ಸ್ಥಳವನ್ನು ಪ್ರತಿಮೆಗಾಗಿ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕು. ಈ ಬಗೆಗೆ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.