ಗಗನಕ್ಕೇರಿದ ಭ್ರಷ್ಟಾಚಾರ ಭ್ರಷ್ಟಾಚಾರ ಗಗನಕ್ಕೇರಿದೆ ಎಂಬುದನ್ನು ಅಕ್ಷರಶಃ ಸಾಬೀತು ಮಾಡುವಂತೆ ಬಯಲಾಗಿದೆ ವಿಮಾನ ಚಾಲನೆಯ ಲೈಸನ್ಸ್ ಹಗರಣ. ಹತ್ತು ಹನ್ನೆರಡು ಲಕ್ಷ ರೂಪಾಯಿ ಕೊಟ್ಟರೆ, ಅರ್ಹತಾ ಪರೀಕ್ಷೆಯ ನಕಲಿ ಅಂಕಪಟ್ಟಿ ಮತ್ತು ಹಾರಾಟದ ಅನುಭವ ಕುರಿತ ಸುಳ್ಳು ದಾಖಲೆಗಳನ್ನು ಸಲ್ಲಿಸಿದರೂ ಕಮರ್ಶಿಯಲ್ ಪೈಲಟ್ ಲೈಸನ್ಸ್ ಪಡೆಯುವುದು ಸಾಧ್ಯ ಎಂಬುದು ಈಗ ಬಯಲಿಗೆ ಬಂದಿದೆ. ರಸ್ತೆ ಅಪಘಾತಗಳನ್ನು ತಡೆಯಲು ವಾಹನ ಚಾಲನೆಯ ಲೈಸನ್ಸ್ ನೀಡಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ರೂಪಿಸಿ ಜಾರಿಗೊಳಿಸುತ್ತಿರುವ ಸಂದರ್ಭದಲ್ಲಿ ವಿಮಾನ ಯಾನ ಕ್ಷೇತ್ರದಲ್ಲಿ ಕೂಡ ಹಣ ನೀಡಿದರೆ ಚಾಲನಾ ಪರವಾನಗಿ ಪಡೆಯಬಹುದೆನ್ನುವ ಈ ಪ್ರಮಾಣದ ಭ್ರಷ್ಟಾಚಾರ ನಡವಳಿಕೆ, ವಿಮಾನಯಾನವನ್ನೇ ಅವಲಂಬಿಸಿದ ದೇಶದ ವಾಣಿಜ್ಯ ವ್ಯವಹಾರ ಜಗತ್ತಿನಲ್ಲಿ ಆಘಾತಕಾರಿಯಾಗಿದೆ. ಈ ಸಂಬಂಧದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಒಬ್ಬ ಉನ್ನತ ಅಧಿಕಾರಿ ಸೇರಿದಂತೆ ಹತ್ತು ಮಂದಿಯನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ನಕಲಿ ದಾಖಲೆಗಳನ್ನು ನೀಡಿ ಪಡೆದ ಹತ್ತು ಮಂದಿ ಚಾಲಕರ ಲೈಸನ್ಸ್‌ಗಳನ್ನು ಅಮಾನತು ಮಾಡಲಾಗಿದೆ. ಹತ್ತು ಸಾವಿರದಷ್ಟು ಸಂಖ್ಯೆಯಲ್ಲಿರುವ ಕಮರ್ಶಿಯಲ್ ಪೈಲಟ್‌ಗಳು ಮತ್ತು ನಾಲ್ಕು ಸಾವಿರ ಸಾರಿಗೆ ವಿಮಾನಗಳ ಚಾಲಕರ ಲೈಸನ್ಸ್‌ಗಳ ದಾಖಲೆಗಳನ್ನು ಪುನರ್ ಪರಿಶೀಲಿಸುವ ಪ್ರಕ್ರಿಯೆಯಲ್ಲಿ ನಿರ್ದೇಶನಾಲಯ ತೊಡಗಿದೆ. ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶ ನೀಡಿದೆಯಾದರೂ ವಿಮಾನ ಚಾಲಕರ ಅರ್ಹತೆಯ ಬಗ್ಗೆ ಸಂಶಯ ಇಟ್ಟುಕೊಂಡೇ ಜನ ದೇಶವಿದೇಶಗಳಿಗೆ ವಿಮಾನ ಸಂಚಾರ ಕೈಗೊಳ್ಳಬೇಕಾಗಿದೆ. ವಿಮಾನ ಪ್ರಯಾಣ ಎಲ್ಲ ಕ್ಷೇತ್ರಗಳಿಗೂ ಅನಿವಾರ್ಯವಾದ ತ್ವರಿತ ಸಾರಿಗೆ ವ್ಯವಸ್ಥೆ. ಈ ದಿನಗಳಲ್ಲಿ ವಿಮಾನಯಾನ ಸೌಲಭ್ಯ ಇಲ್ಲದ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ವಿಮಾನ ಸಾರಿಗೆ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅವಕಾಶ ಕಲ್ಪಿಸಿದ್ದರಿಂದ ಲೈಸನ್ಸ್ ಪಡೆದ ಪೈಲಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ದೇಶ ವಿದೇಶಗಳ ಸಂಪರ್ಕದ ಅನಿವಾರ್ಯ ಕೊಂಡಿಯಾಗಿರುವ ವೈಮಾನಿಕ ಕ್ಷೇತ್ರದಲ್ಲಿ ಸುರಕ್ಷಿತ ಪ್ರಯಾಣದ ಭರವಸೆ ನೀಡಬಲ್ಲ ಚಾಲಕರ ಅರ್ಹತೆಯನ್ನು ಹಣ ಕೊಟ್ಟು ಪಡೆಯಬಹುದೆನ್ನುವ ಪರಿಸ್ಥಿತಿ ಭ್ರಷ್ಟಾಚಾರದ ಅತ್ಯುನ್ನತ ಹಂತ. ಇದು ದೇಶಕ್ಕೆ ಕಳಂಕ ತರುವ ಸಂಗತಿ. ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯದ ವಿಶ್ವಾಸಾರ್ಹತೆಯನ್ನು ಜಗತ್ತಿನಲ್ಲಿ ಒರೆಗೆ ಹಚ್ಚುವಂಥ ಈ ಘಟನೆಗೆ ಕಾರಣರಾಗಿರುವವರು ದೇಶದ ಪ್ರತಿಷ್ಠೆಗಷ್ಟೇ ಧಕ್ಕೆ ತಂದಿಲ್ಲ. ವಿಮಾನಯಾನದ ಸುರಕ್ಷತೆಯ ಬಗ್ಗೆ ನಿಶ್ಚಿಂತೆಯಿಂದ ಇದ್ದ ಲಕ್ಷಾಂತರ ಪ್ರಯಾಣಿಕರ ವಿಶ್ವಾಸಕ್ಕೂ ಭಂಗ ತಂದಿದ್ದಾರೆ. ಇಡೀ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ಅವಶ್ಯಕ ಎಂಬುದಕ್ಕೆ ಈ ಘಟನೆ ಕಾರಣವಾಗಿದೆ. ವಿಮಾನ ಚಾಲನೆಯ ತರಬೇತಿ ನೀಡುತ್ತಿರುವ ದೇಶದ 40 ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಸರ್ಕಾರ ಕಟ್ಟುನಿಟ್ಟಿನ ತನಿಖೆಗೆ ಒಳಪಡಿಸಬೇಕಾಗಿದೆ. ವಿಮಾನ ಚಾಲನಾ ಲೈಸನ್ಸ್ ಮಾತ್ರವಲ್ಲದೆ, ನವೀಕರಣ ಮತ್ತಿತರ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರಕ್ಕೆ ಕಾರಣರಾದವರನ್ನು ಪತ್ತೆಹಚ್ಚಿ ಅವರನ್ನು ನಿರ್ದಾಕ್ಷಿಣ್ಯವಾಗಿ ದಂಡಿಸುವುದಲ್ಲದೆ, ವಿಮಾನ ಪ್ರಯಾಣ ಸುರಕ್ಷಿತ ಎಂಬ ವಾತಾವರಣ ಕಲ್ಪಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.