ಸೆಮಿಫೈನಲ್ ಕ್ರೀಡೆಯಷ್ಟೆ ಸಭ್ಯರ ಆಟ ಕ್ರಿಕೆಟ್ ಈಗ ಹಲವು ಆಯಾಮಗಳನ್ನು ಒಳಗೊಂಡ ಸಂಕೀರ್ಣ ಕ್ರೀಡೆ. ರನ್ ಗಳಿಕೆ, ವಿಕೆಟ್ ಕಬಳಿಕೆಯ ಸೋಲು ಗೆಲುವುಗಳ ಲೆಕ್ಕದಿಂದ ಹುಟ್ಟುವ ರೋಚಕತೆಯಿಂದ ಈ ಕ್ರೀಡೆಗೆ ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳು. ಸಾಂಪ್ರದಾಯಿಕವಾಗಿ ಐದು ದಿನಗಳವರೆಗೆ ನಡೆಯುತ್ತಿದ್ದ ಕ್ರೀಡೆ ಆಧುನಿಕ ಜೀವನ ಶೈಲಿಯ ಒತ್ತಡದಿಂದ ಐವತ್ತು ಓವರುಗಳ ಹಾಗೂ ಇಪ್ಪತ್ತು ಓವರುಗಳ ಅವಧಿಗೆ ಪರಿಷ್ಕಾರಗೊಂಡು ಸ್ಪರ್ಧೆಯ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದೆ. ಕಂಪ್ಯೂಟರ್ ತಾಂತ್ರಿಕತೆಯ ಆಧುನಿಕ ಆವಿಷ್ಕಾರಗಳು ಈ ಕ್ರೀಡೆಯಲ್ಲಿ ಬಳಕೆಗೆ ಬರುತ್ತಿದ್ದು ತಂಡಗಳ ಕ್ರೀಡಾಸಾಮರ್ಥ್ಯವನ್ನು ವೈಜ್ಞಾನಿಕವಾಗಿ ಒರೆಗೆ ಹಚ್ಚುವುದಕ್ಕೆ ನೆರವಾಗಿದೆ. ಸಹಸ್ರ ಸಹಸ್ರ ಸಂಖ್ಯೆಯ ಪ್ರೇಕ್ಷಕರ ಎದುರು, ಸುತ್ತುವರಿದ ಫೀಲ್ಡರುಗಳನ್ನು ವಂಚಿಸಿ ಅತಿವೇಗದ ಇಲ್ಲವೇ ತಿರುಗುತ್ತ ಬರುವ ಚೆಂಡುಗಳಿಂದ ರನ್ ಗಳಿಸುವುದರಲ್ಲಿ ಅಸಾಧಾರಣ ಕೌಶಲ್ಯ ಪ್ರದರ್ಶಿಸುವ ಮತ್ತು ಅಂಥವರನ್ನೂ ದಿಕ್ಕುತಪ್ಪಿಸಿ ವಿಕೆಟ್ ಪಡೆಯುವ ಕ್ರೀಡಾಪಟುವಿಗೆ ಕ್ರಿಕೆಟ್ ರಂಗದಲ್ಲಿ ತಾರಾಮೌಲ್ಯ. ತಾರಾಮೌಲ್ಯಕ್ಕೆ ಅನುಗುಣವಾಗಿ ಜಾಹೀರಾತು ಪ್ರಪಂಚದಲ್ಲಿ ಮಿಂಚುವ ಅವಕಾಶ. ಆದ್ದರಿಂದಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯುವ ಕ್ರೀಡಾಪಟು ಕೋಟಿಗಳಲ್ಲಿ ತೂಗುವ, ಚಿನ್ನದ ಮೊಟ್ಟೆ ಇಡುವ ಕೋಳಿ. ಈ ಕಾರಣವೇ ರೋಚಕ ಫಲಿತಾಂಶದ ಪಂದ್ಯಗಳಿಗೆ ಜನ ಮುಗಿಬೀಳುತ್ತಾರೆ. ಕ್ರಿಕೆಟ್ ಆಟದ ಮೇಲಣ ಜನರ ಪ್ರೀತಿ ಉನ್ಮಾದದ ಹಂತ ಮುಟ್ಟಿರುವುದನ್ನು ವ್ಯವಹಾರ ಜಗತ್ತು ಚೆನ್ನಾಗಿಯೇ ಬಳಸಿಕೊಳ್ಳುತ್ತಿರುವ ಕಾರಣ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಈ ಆಟವನ್ನು ನಿಯಂತ್ರಿಸುತ್ತಿರುವ ಸಂಸ್ಥೆಗಳೆಲ್ಲ ಶ್ರೀಮಂತವಾಗಿವೆ. ಕ್ರಿಕೆಟ್ ಜನಪ್ರಿಯತೆ ಅದರ ದುರ್ಬಳಕೆಗೂ ಆಸ್ಪದ ನೀಡಿದೆ. ಮ್ಯಾಚ್‌ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್‌ಗಳೆಂಬ ವಂಚನೆಯ ಜಾಲಗಳು ಬಹಿರಂಗಗೊಂಡು ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಕೆಲಸ ಕೊಟ್ಟಿವೆ. ಕ್ರಿಕೆಟ್ ನಡೆಯುವಾಗ ಕೋಟ್ಯಂತರ ರೂಪಾಯಿ ಹೂಡಿ ಜೂಜಾಡುವುದು ಕಾನೂನು ಪಾಲಕರಿಗೆ ಕ್ರೀಡೆ ಒಡ್ಡಿದ ತಲೆನೋವು. ಆಟಗಾರರ ಕ್ರೀಡಾ ಸಾಮರ್ಥ್ಯವನ್ನೇ ಆಧರಿಸಿದ ಇಂಥ ಬೆಳವಣಿಗೆಗಿಂತ ಅಪಾಯಕಾರಿಯಾದುದು ಕ್ರಿಕೆಟ್ ತಂಡಗಳು ಪ್ರತಿನಿಧಿಸುವ ದೇಶಗಳ ಧಾರ್ಮಿಕ ನಂಬಿಕೆಗಳನ್ನು ಆಧರಿಸಿ ಸ್ಪರ್ಧೆಗೆ ರೋಚಕತೆಯನ್ನು ಆರೋಪಿಸುವುದು. ಭಾರತ ತಂಡದ ಜೊತೆ ಕ್ರಿಕೆಟ್ ಆಡುವುದೆಂದರೆ ಅದು ‘ಜೆಹಾದ್’ (ಧರ್ಮಯುದ್ಧ) ಎಂದು ಪಾಕಿಸ್ತಾನದ ಕ್ರೀಡಾಭಿಮಾನಿಗಳು ಭಾವಿಸಿದರೆ ಅದು ಕ್ರೀಡೆಗೆ ಎಸಗುವ ಅಪಚಾರ. ಭಾರತ- ಪಾಕಿಸ್ತಾನ ತಂಡಗಳು ಎದುರಾಳಿಯಾದಾಗ ಅದನ್ನು ಸಾಂಪ್ರದಾಯಿಕ ವೈರತ್ವವನ್ನು ಇತ್ಯರ್ಥಗೊಳಿಸುವ ಅವಕಾಶವೆಂದು ಬಣ್ಣಿಸುವುದು ಕೂಡ ಕ್ರೀಡಾ ಮನೋಭಾವಕ್ಕೆ ವಿರುದ್ಧವಾದ ಧೋರಣೆ. ಕ್ರೀಡೆ, ಸ್ನೇಹ ಸಾಮರಸ್ಯವನ್ನು ಬೆಸೆಯುವ ಮಾಧ್ಯಮ. ಜಗತ್ತಿನ ಎಲ್ಲ ಕ್ರೀಡಾಕೂಟಗಳಲ್ಲಿ ಇದೇ ಬೀಜ ಮಂತ್ರವಾಗಿದ್ದರೂ ಅದಕ್ಕೆ ಧಾರ್ಮಿಕತೆಯ ಲೇಪ ಹಚ್ಚುವುದು ಕ್ರೀಡಾಸ್ಫೂರ್ತಿಗೆ ಹೊರತಾದ ಸಂಕುಚಿತ ದೃಷ್ಟಿ. ಮೊಹಾಲಿಯಲ್ಲಿ ಬುಧವಾರ ಭಾರತ- ಪಾಕಿಸ್ತಾನ ತಂಡಗಳ ಮಧ್ಯೆ ನಡೆಯುವುದು ವಿಶ್ವಕಪ್ ಕ್ರಿಕೆಟ್ ಫೈನಲ್‌ಗೆ ಅರ್ಹವಾದ ತಂಡವನ್ನು ಆಯ್ಕೆ ಮಾಡುವ ಪಂದ್ಯ. ಎರಡು ಧರ್ಮಗಳ ನಡುವಣ ಹೋರಾಟವಲ್ಲ. ಈ ಸಂದರ್ಭವನ್ನು ದ್ವಿಪಕ್ಷೀಯ ಸಂಬಂಧಗಳ ಕುರಿತ ಚರ್ಚೆಗೆ ಬಳಸಿಕೊಳ್ಳಲು ನಡೆಸಿರುವ ಭಾರತದ ಪ್ರಯತ್ನವೂ ರಾಜತಾಂತ್ರಿಕವಾಗಿ ಅಪ್ರಬುದ್ಧವಾದ ನಡೆ. ಕ್ರೀಡೆ ಬೇರೆ, ರಾಜತಾಂತ್ರಿಕ ನಡಾವಳಿಗಳು ಬೇರೆ ಎಂಬುದು ಪ್ರಧಾನಿಯವರಿಗೆ ಅರ್ಥವಾಗದಿರುವುದು ವಿಷಾದಕರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.