ನಿರಾಶ್ರಿತರಿಗೆ ಮತ್ತೆ ನಿರಾಸೆ ಉತ್ತರ ಕರ್ನಾಟಕದ ಹನ್ನೊಂದು ಜಿಲ್ಲೆಗಳ ಜನರ ಮನೆ ಮಠ ಪ್ರವಾಹದಲ್ಲಿ ಕೊಚ್ಚಿ ಹೋಗಿ ಒಂದೂವರೆ ವರ್ಷವಾಯಿತು. ನೆಲೆ ಕಳೆದುಕೊಂಡ ಎಲ್ಲರಿಗೂ ‘ಆಸರೆ’ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಕೇಂದ್ರ ಸರ್ಕಾರ ಒಂದು ಸಾವಿರ ಕೋಟಿಗೂ ಹೆಚ್ಚು ಹಣ ನೀಡಿತು. ಅನೇಕ ಧಾರ್ಮಿಕ ಕೇಂದ್ರಗಳು, ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಸಂಸ್ಥೆಗಳು ಮತ್ತು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಹಣ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದವು. ಸ್ವತಃ ರಾಜ್ಯ ಸರ್ಕಾರವೂ ಕೋಟಿಗಟ್ಟಲೆ ಹಣ ಖರ್ಚು ಮಾಡುವುದಾಗಿ ಹೇಳಿತು. ಈ ಹಣದಲ್ಲಿ 59, 477 ಮನೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡುತ್ತಾ ಬಂದಿತು. ಸಂತ್ರಸ್ತರಿಗೆ ಕಳೆದ ಮೇ ತಿಂಗಳಲ್ಲಿಯೇ ಮನೆ ವಿತರಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದರು. ಮನೆ ವಿತರಿಸುವ ದಿನಾಂಕವನ್ನು ಐದು ಬಾರಿ ನಿಗದಿ ಮಾಡಲಾಯಿತು. ಆದರೂ, ಸರ್ಕಾರದ ವತಿಯಿಂದ ಇದುವರೆಗೆ ಒಂದು ಮನೆಯನ್ನೂ ಕೊಡಲು ಸಾಧ್ಯವಾಗಿಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. 59, 477 ಮನೆಗಳ ನಿರ್ಮಾಣದ ಗುರಿಯಲ್ಲಿ ಇದುವರೆಗೆ ಪೂರ್ಣಗೊಳಿಸಿರುವುದು ಕೇವಲ ಹನ್ನೊಂದು ಸಾವಿರ ಮನೆಗಳು. ಇನ್ನೂ ನಡೆದಿರುವ ಕಾಮಗಾರಿಗೆ ಈಗ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಅಡಚಣೆ ಉಂಟಾಗಿರುವುದಾಗಿ ನೆಪ ಹೇಳಲಾಗುತ್ತಿದೆ. ಇದರ ಪರಿಣಾಮ ಮನೆ ವಿತರಿಸುವ ಕಾರ್ಯಕ್ರಮ ಮತ್ತೆ ಮುಂದಕ್ಕೆ ಹೋಗಿದೆ ಎಂದು ನೀಡುತ್ತಿರುವ ಸಮಜಾಯಿಷಿಯನ್ನು ಗಮನಿಸಿದರೆ ಸರ್ಕಾರದ ‘ಅಭಿವೃದ್ಧಿ ಮಂತ್ರ’ ಹೇಗೆ ನಡೆದಿದೆ ಎನ್ನುವುದು ಅರ್ಥವಾಗುತ್ತದೆ. ನೆರೆ ಸಂತ್ರಸ್ತರಿಗೆ ಮಾತಾ ಅಮೃತಾನಂದಮಯಿ ಆಶ್ರಮ ಸೇರಿದಂತೆ ಕೆಲವು ಸಂಸ್ಥೆಗಳು ತಾವೇ ನಿರ್ಮಿಸಿದ ಮನೆಗಳನ್ನು ಹಂಚಿ ತಮ್ಮ ಜವಾಬ್ದಾರಿಯನ್ನು ಪೂರೈಸಿವೆ. ಆದರೆ ಪುನರ್‌ವಸತಿ ನಿರ್ಮಾಣ ಕಾರ್ಯದಲ್ಲಿ ಸರ್ಕಾರ ಹಲವು ಇಲಾಖೆಗಳನ್ನು ಒಳಗೊಂಡರೂ ಒಂದು ಕಾಲಮಿತಿಯೊಳಗೆ ವಸತಿ ಸೌಲಭ್ಯವನ್ನು ನೀಡಲು ವಿಫಲವಾಗಿರುವುದು ಅದರ ವೈಫಲ್ಯವನ್ನು ತೋರಿಸುತ್ತದೆ. ಪುನರ್‌ವಸತಿಗೆ ಬೇಕಾದ ಜಮೀನು, ರೈತರಿಂದ ಜಮೀನು ಖರೀದಿಯಲ್ಲಾದ ವಿಳಂಬ, ಒಂದೆಡೆ ಬಾಳಲು ಅಡ್ಡಿ ಬಂದ ಜಾತಿ ವ್ಯವಸ್ಥೆ ಇತ್ಯಾದಿ ಈ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಆದರೆ ಇಂತಹ ಸಮಸ್ಯೆಗಳನ್ನೆಲ್ಲ ಅಧಿಕಾರಸ್ಥ ರಾಜಕಾರಣಿಗಳು ನಿರಾಶ್ರಿತರು ಮತ್ತು ಗ್ರಾಮದ ಜನರೊಡನೆ ಮಾತುಕತೆ ನಡೆಸುವ ಮೂಲಕ ಬಗೆಹರಿಸಲು ಸಾಧ್ಯವಿತ್ತು. ಆದರೆ ಬಹುತೇಕ ರಾಜಕಾರಣಿಗಳ ಮತ್ತು ಅಧಿಕಾರಿಗಳ ಆಸಕ್ತಿಯೆಲ್ಲ ಆರ್ಥಿಕ ನೆರವು ಮಂಜೂರು ಮಾಡುವತ್ತಲೇ ಇತ್ತು. ತಾತ್ಕಾಲಿಕ ನಗದು ಪರಿಹಾರ ನೀಡಿಕೆಯಲ್ಲಿ ಅವರು ತೋರಿದ ಪಕ್ಷಪಾತ, ಸುಳ್ಳು ಮಾಹಿತಿ ದಾಖಲಿಸಿ ಹಣ ದೋಚುವುದರಲ್ಲೇ ಮುಳುಗಿದ್ದು ಪುನರ್‌ವಸತಿಯೋಜನೆ ವಿಳಂಬಕ್ಕೆ ಕಾರಣ. ಬರುವ ಏಪ್ರಿಲ್ ಹೊತ್ತಿಗೆ ಎಲ್ಲಾ ನಿರಾಶ್ರಿತರಿಗೆ ಮನೆಗಳನ್ನು ಹಂಚುವುದಾಗಿ ಸರ್ಕಾರ ಮತ್ತೆ ನೀಡುತ್ತಿರುವ ಭರವಸೆಯನ್ನು ನಂಬುವುದಾದರೂ ಹೇಗೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.