ಟೊಮ್ಯಾಟೊ ರೈತರ ಬವಣೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದ ಕಂಗೆಟ್ಟ ರೈತರು ಹತಾಶೆಯಿಂದ ಟೊಮ್ಯಾಟೊಗಳನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ವ್ಯಕ್ತಪಡಿಸುವ ಹತಾಶ ಸ್ಥಿತಿ ವರ್ಷದಲ್ಲಿ ಒಂದೆರಡು ಸಲವಾದರೂ ಬಯಲಿಗೆ ಬರುತ್ತದೆ. ಕೋಲಾರ, ಚಿತ್ರದುರ್ಗ ಜಿಲ್ಲೆಯ ರೈತರು ಇಂಥ ಸಂಕಟಕ್ಕೆ ಆಗಾಗ ಒಳಗಾಗುತ್ತಾರೆ. ಹಿರಿಯೂರಿನ ರೈತರು ಕಳೆದ ಒಂದು ತಿಂಗಳಲ್ಲಿ ಎರಡು ಸಲ ತಾವು ಮಾರುಕಟ್ಟೆಗೆ ತಂದ ಟೊಮ್ಯಾಟೊಗಳನ್ನು ಎಸೆದು ಹೋಗಿದ್ದಾರೆ. ಬೇಸಿಗೆಯ ಈ ದಿನಗಳಲ್ಲಿ ಕನಕಾಂಬರದಂತಹ ಹೂಗಳಿಗೆ ದರ ಕುಸಿತದ ಬಿಸಿ ತಟ್ಟಿದೆ. ಆಹಾರ ಬೆಳೆ ಇರಲಿ, ವಾಣಿಜ್ಯದ ಬೆಳೆ ಇರಲಿ, ಕೊಯ್ಲಿನ ವೆಚ್ಚವೂ ಹುಟ್ಟದಂತಹ ದರ ಕುಸಿತಕ್ಕೆ ರೈತ ಸಮುದಾಯ ಕಂಗಾಲಾಗಿದೆ. ಕೊಳವೆ ಬಾವಿಗಳಿಂದ ಸ್ವಂತ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡು ಹೀಗೆ ತರಕಾರಿ ಬೆಳೆದ ರೈತರಿಗೆ ಮಾಡಿದ ವೆಚ್ಚವೂ ಸಿಗದಂತಾದರೆ ಅವರ ಗತಿಯೇನು? ಹಣ್ಣು ತರಕಾರಿಗಳನ್ನು ರೈತರಿಂದ ಕೊಂಡು ನಗರಗಳ ಬಳಕೆದಾರರಿಗೆ ತಲುಪಿಸುವ ಸಹಕಾರಿ ರಂಗದ ಹಾಪ್‌ಕಾಮ್ಸ್ ರಾಜ್ಯದ ಎಲ್ಲ ಕಡೆ ತನ್ನ ಜಾಲವನ್ನು ವಿಸ್ತರಿಸಿಲ್ಲ. ರೈತರ ಉತ್ಪನ್ನಗಳನ್ನು ಸಂರಕ್ಷಿಸಿ ಇಡುವುದಕ್ಕೆ ಶೈತ್ಯಾಗಾರ ನಿರ್ಮಿಸಬೇಕು ಮತ್ತು ಅವಶ್ಯತಕೆ ಇದ್ದೆಡೆ ಆಹಾರ ಸಂಸ್ಕರಣ ಘಟಕಗಳನ್ನು ತೆರೆಯಬೇಕೆಂಬ ಬೇಡಿಕೆ ಬಹುವರ್ಷಗಳಿಂದ ಕೇಳಿ ಬರುತ್ತಿದ್ದರೂ ಈ ನಿಟ್ಟಿನಲ್ಲಿ ಯಾವ ಕ್ರಮವೂ ಆಗಿಲ್ಲ. ಟೊಮ್ಯಾಟೊದಂಥ ತರಕಾರಿಗಳು ಶೀಘ್ರವೇ ಬಳಕೆದಾರರಿಗೆ ತಲುಪಬೇಕಾದ ಉತ್ಪನ್ನಗಳು. ಬೀಜವಿಲ್ಲದ, ದಪ್ಪ ತಿರುಳಿನ ಹೈಬ್ರಿಡ್ ಟೊಮ್ಯಾಟೋಗಳಿಗೆ ಉತ್ತರ ಭಾರತದ ರಾಜ್ಯಗಳಿಂದಲೂ ಬೇಡಿಕೆ ಇದ್ದರೆ ಹೆಚ್ಚು ಬೀಜ ಇರುವ, ಹುಳಿ ರುಚಿಯ ಜವಾರಿ ಟೊಮ್ಯಾಟೊಗಳು ಸ್ಥಳೀಯ ಬೇಡಿಕೆಯನ್ನೇ ಅವಲಂಬಿಸಬೇಕಾಗಿರುವುದು ಅನಿವಾರ್ಯ. ಉತ್ತಮ ಗುಣಮಟ್ಟದ ಟೊಮ್ಯಾಟೊಗಳನ್ನು ಸಂರಕ್ಷಿಸಿಟ್ಟು ಉಪ ಉತ್ಪನ್ನಗಳನ್ನು ತಯಾರಿಸಲು ಆಸಕ್ತಿ ತೋರುವ ಉದ್ಯಮಿಗಳು ಜವಾರಿ ಉತ್ಪನ್ನಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಯಾವ ಬೆಳೆಯನ್ನು ಎಷ್ಟು ಪ್ರದೇಶದಲ್ಲಿ ಬೆಳೆಯಬೇಕೆಂದು ಬೆಳೆ ಕ್ಷೇತ್ರವನ್ನು ನಿರ್ಧರಿಸಿಕೊಳ್ಳುವ ಹಾಗೂ ಉದ್ಯಮ ನಿರೀಕ್ಷಿಸುವ ಗುಣಮಟ್ಟದ ಉತ್ಪನ್ನಗಳನ್ನು ಬೆಳೆಯುವ ಶಿಸ್ತು ರೈತರಲ್ಲಿ ಮೂಡದಿದ್ದರೆ ಈಗಿನ ಪರಿಸ್ಥಿತಿಯಲ್ಲಿ ಕೃಷಿ ಲಾಭದಾಯಕವಲ್ಲ. ಗುಣಮಟ್ಟದ ಹಣ್ಣು- ತರಕಾರಿಗಳನ್ನು ಬೆಳೆಯುವುದಕ್ಕೆ ರೈತರಿಗೆ ಅಗತ್ಯ ಮಾರ್ಗದರ್ಶನ ಮಾಡಲೆಂದು ಸರ್ಕಾರ ರೈತ ಸಂಪರ್ಕ ಕೇಂದ್ರಗಳನ್ನು ಅಲ್ಲಲ್ಲಿ ತೆರೆದಿದೆಯಾದರೂ ಅವುಗಳಿಂದ ರೈತ ಸಮುದಾಯಕ್ಕೆ ಯಾವ ಪ್ರಯೋಜನವೂ ಆಗುತ್ತಿಲ್ಲ. ರೈತರಿಗೆ ಸರ್ಕಾರದಿಂದ ಸಿಗುವಂಥ ರಿಯಾಯಿತಿ ದರದ ಬೀಜ, ಗೊಬ್ಬರ ಇಲ್ಲವೇ ಸಹಾಯಧನದ ಹಂಚಿಕೆಯ ಸಂದರ್ಭಗಳಲ್ಲಿ ಮಾತ್ರ ಕೃಷಿ ಇಲಾಖೆ ಚುರುಕಾಗಿರುತ್ತದೆ. ರೈತ ಸಂಪರ್ಕ ಕೇಂದ್ರಗಳೂ ಕ್ರಿಯಾಶೀಲವಾಗಿರುತ್ತವೆ. ವಾಸ್ತವವಾಗಿ ಈ ವ್ಯವಸ್ಥೆಯಿಂದ ರೈತರಿಗೆ ಯಾವುದೇ ಬಗೆಯ ವೈಜ್ಞಾನಿಕ ಮಾರ್ಗದರ್ಶನವೂ ಸಿಗುತ್ತಿಲ್ಲ. ಕೃಷಿಯನ್ನು ಲಾಭದಾಯಕವಾಗಿಸುವುದು ಸರ್ಕಾರದ ಉದ್ದೇಶವಾಗಿದ್ದರೆ ರೈತನ ಎಲ್ಲ ಉತ್ಪನ್ನಗಳಿಗೂ ಉತ್ಪಾದನಾ ವೆಚ್ಚವನ್ನು ಆಧರಿಸಿ ಧಾರಣೆ ನಿಗದಿಪಡಿಸುವಂಥ ವ್ಯವಸ್ಥೆಯನ್ನು ರೂಪಿಸಬೇಕು. ಬೇಡಿಕೆಯನ್ನು ಅನುಲಕ್ಷಿಸಿ ಉತ್ಪಾದನೆಯನ್ನು ಉತ್ತೇಜಿಸುವ ಕ್ರಮ ರೂಪಿಸಬೇಕು. ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸುವುದರಿಂದ ಕೃಷಿ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.