ಕ್ರೀಡಾಂಗಣಗಳ ದುರ್ಬಳಕೆ ತಪ್ಪಲಿ ರಾಜ್ಯದಲ್ಲಿ ಸರ್ಕಾರ ವಿವಿಧ ಕ್ರೀಡೆಗಳಿಗಾಗಿ ನಿರ್ಮಿಸಿರುವ ಕ್ರೀಡಾಂಗಣಗಳು ಉದ್ದೇಶಿತ ಕ್ರೀಡೆಗಳಿಗೆ ಬಳಕೆಯಾಗುವುದಕ್ಕಿಂತ ಹೆಚ್ಚಾಗಿ ಕ್ರೀಡೇತರ ಚಟುವಟಿಕೆಗಳಿಗೆ ಬಳಕೆ ಆಗುತ್ತಿರುವುದು ದುರದೃಷ್ಟಕರ. ಬೆಂಗಳೂರು ಸೇರಿದಂತೆ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಕ್ರೀಡಾಂಗಣಗಳಿವೆ. ಹಲವು ಕಡೆಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಮತ್ತು ಆಧುನಿಕ ಸೌಲಭ್ಯಗಳನ್ನೊಳಗೊಂಡ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ನಗರ ಮತ್ತು ಪಟ್ಟಣಗಳು ಬೆಳೆದಂತೆ ಅನೇಕ ಕ್ರೀಡಾಂಗಣಗಳು ಊರಿನ ಒಳಗೆ ಸೇರಿಕೊಂಡಿವೆ. ಹಾಗಾಗಿ ಇಂತಹ ಕ್ರೀಡಾಂಗಣಗಳು ರಾಜಕೀಯ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ವಸ್ತುಪ್ರದರ್ಶನ ಮತ್ತು ಫ್ಯಾಷನ್ ಶೋಗಳನ್ನು ನಡೆಸಲು ಬಳಕೆ ಆಗುತ್ತಿವೆ. ಇಂತಹ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡಿದಾಗ ಅಲ್ಲಿ ಗುಂಡಿಗಳನ್ನು ತೋಡಿ ಶಾಮಿಯಾನ ಹಾಕುವುದು ಮುಂತಾದ ಚಟುವಟಿಕೆಗಳಿಂದ ಕ್ರೀಡಾಂಗಣದ ಸ್ವರೂಪಕ್ಕೆ ಧಕ್ಕೆ ಬರುತ್ತಿರುವುದು ಸಹಜ. ಹೀಗೆ ಮಾಡುತ್ತಿರುವುದರಿಂದ ಕ್ರೀಡಾಂಗಣ ನಿರ್ಮಾಣದ ನಿಜವಾದ ಉದ್ದೇಶವೇ ವಿಫಲವಾದಂತಾಗುತ್ತದೆ. ಕ್ರೀಡಾ ಚಟುವಟಿಕೆಗಳಿಗಿಂತ ಕ್ರೀಡೇತರ ಚಟುವಟಿಕೆಗಳಿಗೇ ಅವು ಬಳಕೆ ಆಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ. ಇದು ಸಾರ್ವಜನಿಕ ಸೌಲಭ್ಯಗಳ ದುರ್ಬಳಕೆ. ಈ ದೃಷ್ಟಿಯಿಂದ ಕ್ರೀಡಾಂಗಣಗಳನ್ನು ಕ್ರೀಡೆಗಳಲ್ಲದ ಚಟುವಟಿಕೆಗಳಿಗೆ ಬಳಕೆ ಮಾಡುವುದರ ವಿರುದ್ಧ ನಾಗರಿಕರೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಕ್ರೀಡಾಂಗಣಗಳನ್ನು ಕ್ರೀಡೇತರ ಬಳಕೆಗೆ ನೀಡುವ ಸಂಬಂಧ ನಿಯಮಾವಳಿ ರೂಪಿಸುವಂತೆ ಯುವಜನ ಮತ್ತು ಕ್ರೀಡಾ ಇಲಾಖೆಗೆ ನೀಡಿರುವ ಆದೇಶ ಸ್ವಾಗತಾರ್ಹ. ಸರ್ಕಾರವು ಕ್ರೀಡಾಂಗಣಗಳನ್ನು ನಿರ್ಮಿಸಿರುವ ಮುಖ್ಯ ಉದ್ದೇಶದಂತೆ ಅವು ಕ್ರೀಡಾ ಚಟುವಟಿಕೆಗಳಿಗೆ ಬಳಕೆ ಆಗಬೇಕು. ಅದರಿಂದ ಆಯಾ ಪ್ರದೇಶದ ವಿದ್ಯಾರ್ಥಿಗಳು ಮತ್ತು ಯುವಜನರ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಕ್ರೀಡಾಚಟುವಟಿಕೆಗಳಿಗೇ ಹೆಚ್ಚು ಬಳಕೆ ಆಗುವಂತೆ ನೋಡಿಕೊಳ್ಳಬೇಕು. ಉಳಿದಂತೆ ಕ್ರೀಡೆಗಳು ನಡೆಯದ ದಿನಗಳಲ್ಲಿ ಕ್ರೀಡಾಂಗಣಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲು ಬಾಡಿಗೆಗೆ ನೀಡುವ ಸಂಬಂಧ ಸರ್ಕಾರ ನ್ಯಾಯಾಲಯದ ಆದೇಶವನ್ನು ಚಾಚೂತಪ್ಪದೆ ಸೂಕ್ತ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು. ಹಾಗೆ ಮಾಡುವಲ್ಲಿ ಕ್ರೀಡಾಂಗಣ ಹಾಳಾಗದಂತೆ ಎಚ್ಚರ ವಹಿಸಬೇಕು. ಆದರೆ ಬಾಡಿಗೆಯಿಂದ ಹಣ ಬರುತ್ತದೆ ಎಂದು ಕ್ರೀಡಾಂಗಣವನ್ನು ಕ್ರೀಡೇತರ ಚಟುವಟಿಕೆಗಳಿಗೆ ನೀಡುವ ಪರಿಪಾಠ ನಿಲ್ಲಬೇಕು. ಸಾರ್ವಜನಿಕ ಸಭೆ, ಸಾಂಸ್ಕೃತಿಕ, ವಾಣಿಜ್ಯ ಪ್ರದರ್ಶನ ಮತ್ತು ಇತರೆ ಕಾರ್ಯಕ್ರಮಗಳಿಗಾಗಿಯೇ ಸರ್ಕಾರ ಅವುಗಳಿಗೆ ತಕ್ಕಂತೆ ಸಭಾಂಗಣಗಳನ್ನು ನಿರ್ಮಿಸುವ ಮೂಲಕ ಶಾಶ್ವತ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದು ಮುಖ್ಯ. ಹೀಗೆ ಮಾಡುವುದರಿಂದ ಕ್ರೀಡಾಂಗಣಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡುವುದು ತಪ್ಪುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ರೀಡಾಂಗಣಗಳಲ್ಲಿಯೇ ರಾಜಕೀಯ ಪಕ್ಷಗಳಿಂದ ಬೃಹತ್ ಸಭೆಗಳು ನಡೆಯುವುದರಿಂದ ಸಾರ್ವಜನಿಕ ಸಭೆಗಳಿಗಾಗಿಯೇ ಸರ್ಕಾರ ಒಂದು ನಿರ್ದಿಷ್ಟ ಪ್ರದೇಶವನ್ನು ಗೊತ್ತುಪಡಿಸಬೇಕು. ಹಾಗೆ ಮಾಡುವುದರಿಂದ ಕ್ರೀಡಾಂಗಣಗಳ ದುರ್ಬಳಕೆಯನ್ನು ತಪ್ಪಿಸಿದಂತಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.