ಅತ್ಯಂತ ಹೇಯ ಕೃತ್ಯ ಬಾಕಿ ಉಳಿಸಿಕೊಂಡಿರುವ ಕೂಲಿ ಹಣ ಕೊಡಿ ಎಂದು ಒತ್ತಾಯಿಸಿದ ಕೊಪ್ಪಳ ತಾಲ್ಲೂಕಿನ ಕೂಲಿ ಕಾರ್ಮಿಕರ ಮೇಲೆ ಅಲ್ಲಿನ ಪೊಲೀಸರು ಶುಕ್ರವಾರ ಲಾಠಿ ಪ್ರಹಾರ ಮಾಡಿದ ಘಟನೆ ಅತ್ಯಂತ ಅಮಾನವೀಯ ವರ್ತನೆ.ಪ್ರತಿಭಟನೆ ಮಾಡುವ ಜನರ ಹಕ್ಕನ್ನು ಪೊಲೀಸರು ಲಾಠಿ ಬಳಸಿ ಹತ್ತಿಕ್ಕಿದ್ದಾರೆ. ತಮಗೆ ಕೊಡಬೇಕಾದ ಹಣ ಕೊಡಿ ಎಂದು ಕಾರ್ಮಿಕರು ಕೇಳುವುದು ತಪ್ಪೇ? ಬಾಕಿ ಹಣಕ್ಕಾಗಿ ಕಾರ್ಮಿಕರು ಧರಣಿ, ಮುತ್ತಿಗೆಯಂತಹ ಪ್ರತಿಭಟನಾ ಕ್ರಮಗಳಿಗೆ ಮುಂದಾಗುವುದು ಸರ್ಕಾರಕ್ಕೆ ಗೌರವ ತರುವ ವಿಷಯ ಅಲ್ಲ. ಕೊಪ್ಪಳ ತಾಲ್ಲೂಕಿನ ಐದಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಊರುಗಳ ಕೂಲಿ ಕಾರ್ಮಿಕರು 2009-10ರಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳಲ್ಲಿ ದುಡಿದಿದ್ದಕ್ಕೆ ಕೊಡಬೇಕಾದ ಹಣಕ್ಕಾಗಿ ಒತ್ತಾಯಿಸಿ ರೈತ ಸಂಘಟನೆಗಳ ನೇತೃತ್ವದಲ್ಲಿ ಮಾರ್ಚ್ 22ರಿಂದಲೇ ತಾಲ್ಲೂಕು ಪಂಚಾಯ್ತಿ ಕಚೇರಿ ಎದುರು ಧರಣಿ ನಡೆಸುತ್ತಿದ್ದರು.ಅವರ ಬೇಡಿಕೆ ನ್ಯಾಯ ಸಮ್ಮತವಾಗಿದೆ. ತಕ್ಷಣವೇ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಬಾಕಿ ಹಣ ಪಾವತಿ ಮಾಡಬೇಕಿತ್ತು. ಹಣ ಕೊಡಲು ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಸಕಾರಣಗಳನ್ನು ತಿಳಿಸಿ ಅವರ ಮನವೊಲಿಸಬೇಕಿತ್ತು. ಹತಾಶರಾದ ಕಾರ್ಮಿಕರು ಪ್ರತಿಭಟನೆಯನ್ನು ತೀವ್ರಗೊಳಿಸಿ ತಾ ಪಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ಸಮಾಧಾನಗೊಳಿಸುವ ಬದಲು ಮೈಮೇಲೆ ದೆವ್ವ ಬಂದವರಂತೆ ವರ್ತಿಸಿ ಕೈಗೆ ಸಿಕ್ಕವರನ್ನು ಥಳಿಸಿದರು. ಧರಣಿ ನಡೆಸುತ್ತಿದ್ದ ಕಾರ್ಮಿಕ ಮಹಿಳೆಯರನ್ನೂ ಅಟ್ಟಾಡಿಸಿಕೊಂಡು ಹೊಡೆದರು. ಪೊಲೀಸರ ಈ ನಡವಳಿಕೆ ಅತ್ಯಂತ ಖಂಡನೀಯ. 2009-10ರ ಸಾಲಿನಲ್ಲಿ ನಡೆದ ಕಾಮಗಾರಿಯ ಹಣ ಬಾಕಿ ಉಳಿಸಿಕೊಂಡಿದ್ದು ದೊಡ್ಡ ಲೋಪ. ಈ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣ ಏನಾಯಿತು? ಅದಕ್ಕೆ ಯಾರು ಹೊಣೆ? ಬಾಕಿ ಹಣಕ್ಕಾಗಿ ಕಾರ್ಮಿಕರು ಧರಣಿ ಕುಳಿತ ಮೇಲೂ ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಎಚ್ಚೆತ್ತುಕೊಳ್ಳಲಿಲ್ಲ. ತಮಗೆ ಬರಬೇಕಾದ ಹಣ ಪಡೆಯಲು ಕಾರ್ಮಿಕರು ಏನು ಮಾಡಬೇಕಿತ್ತು? ಪೊಲೀಸರ ದುರ್ವರ್ತನೆಗೆ ಸರ್ಕಾರ ಈಗ ವಿಷಾದ ಸೂಚಿಸುವ ಬದಲು ಮೊದಲೇ ಕ್ರಮ ತೆಗೆದುಕೊಂಡಿದ್ದರೆ ಈ ಅಹಿತಕರ ಪ್ರಸಂಗ ನಡೆಯುತ್ತಿರಲಿಲ್ಲ. ಪೊಲೀಸರ ವರ್ತನೆಗೆ ರಾಜ್ಯ ವ್ಯಾಪಿ ಖಂಡನೆ ವ್ಯಕ್ತವಾಗಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ನೀಡಿದ ಹಣ ದುರುಪಯೋಗವಾಗುತ್ತಿದೆ ಎಂಬ ಆರೋಪ ಹೊಸದಲ್ಲ. ಕೆಲಸವನ್ನೇ ಮಾಡಿಸದೆ ಹಣ ಖರ್ಚು ಮಾಡಿದಂತೆ ದಾಖಲೆ ಸೃಷ್ಟಿಸಿದ ನೂರಾರು ಪ್ರಕರಣಗಳಿವೆ. ಕೆಲಸ ಮಾಡಿದವರಿಗೂ ಹಣ ಕೊಡದೆ ಸತಾಯಿಸುವುದನ್ನು ಸಹಿಸಲಾಗದು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವ ಸಬೂಬನ್ನೂ ಹೇಳದೆ ಕಾರ್ಮಿಕರಿಗೆ ತಕ್ಷಣವೇ ಬಾಕಿ ಹಣ ಪಾವತಿ ಮಾಡಬೇಕು. ಅಷ್ಟೇ ಅಲ್ಲ ಪೊಲೀಸರ ಪರವಾಗಿ ಕಾರ್ಮಿಕರ ಕ್ಷಮೆ ಕೋರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.