ಕಳವಳಕಾರಿ ಬೆಳವಣಿಗೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಒಟ್ಟು ಆಂತರಿಕ ಉತ್ಪನ್ನವು (ಜಿಎಸ್‌ಡಿಪಿ) ಇತ್ತೀಚಿನ ವರ್ಷಗಳಲ್ಲಿ ಕುಸಿತ ದಾಖಲಿಸಿರುವುದು ಆತಂಕಕಾರಿ ವಿದ್ಯಮಾನ. ಆರ್ಥಿಕ ವೃದ್ಧಿ ದರದ (ಜಿಡಿಪಿ) ರಾಷ್ಟ್ರೀಯ ಸರಾಸರಿಯು ಶೇ 8.7 ಇದ್ದರೆ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳ ರಾಜ್ಯಗಳ ಸಾಧನೆ ಕಳಪೆ (ಶೇ 7.85) ಆಗಿದೆ. ಅದರಲ್ಲೂ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳ (ಶೇ 7.4ರಷ್ಟು) ವೃದ್ಧಿ ದರವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ. ಇದು ಹೊಸ ಉದ್ಯೋಗಾವಕಾಶ ಮತ್ತು ಸರಕು ಮತ್ತು ಸೇವೆಗಳ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸ್ಪಷ್ಟ ಸೂಚನೆಗಳಿವೆ. ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ನೇಮಿಸಿದ್ದ ಮ್ಯಾಕಿನ್ಸೆ ಸಂಸ್ಥೆಯು ದೇಶದ ಒಟ್ಟು ಆರ್ಥಿಕ ವೃದ್ಧಿ ಮತ್ತು ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ನಡೆಸಿರುವ ಸಮೀಕ್ಷೆಯ ವರದಿಯಲ್ಲಿ, ದಕ್ಷಿಣ ಭಾರತದ ಆರ್ಥಿಕ ಸ್ಥಿತಿಯ ಚಿತ್ರಣ ನಿರಾಶಾದಾಯಕವಾಗಿದೆ. ರಾಷ್ಟ್ರೀಯ ಸರಾಸರಿ ಆರ್ಥಿಕ ವೃದ್ಧಿ ದರಕ್ಕೆ ಹೋಲಿಸಿದರೆ ಕರ್ನಾಟಕ ( 8.5) ಹೆಚ್ಚು ಕಡಿಮೆ ಹತ್ತಿರದಲ್ಲಿಯೇ ಇರುವುದು ಕೊಂಚ ಸಮಾಧಾನಕಾರ ಸಂಗತಿ. ಆದರೆ, ಇತ್ತೀಚಿನ ವರ್ಷಗಳವರೆಗೂ ಆರ್ಥಿಕ ಮತ್ತು ಉದ್ಯಮ ಬೆಳವಣಿಗೆಯಲ್ಲಿ ತೀರಾ ಹಿಂದೆ ಇದ್ದ ಬಿಹಾರ ಶೇ 9.6ರಷ್ಟು ಆರ್ಥಿಕ ವೃದ್ಧಿ ದರ ಸಾಧಿಸಿರುವುದು ಅಲ್ಲಿನ ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದೆ. ಗುಜರಾತ್ ಶೇ 11.3ರಷ್ಟು ವೃದ್ಧಿ ಸಾಧಿಸಿ ದಾಪುಗಾಲು ಇಟ್ಟಿದೆ. ಈ ಬೆಳವಣಿಗೆಯು, ಆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಇರುವುದನ್ನು ಸಾಬೀತುಪಡಿಸುತ್ತದೆ. ಆರ್ಥಿಕ ಚಟುವಟಿಕೆಗಳ ವಿಷಯದಲ್ಲಿ ದಕ್ಷಿಣದ ರಾಜ್ಯಗಳು ‘ಗುಜರಾತ್ ಮಾದರಿ’ ಅಳವಡಿಸಿಕೊಳ್ಳುವ ಅಗತ್ಯ ಇರುವುದೂ ಇದರಿಂದ ಸ್ಪಷ್ಟಗೊಳ್ಳುತ್ತದೆ. ದಕ್ಷಿಣ ರಾಜ್ಯಗಳಲ್ಲಿ ಕಂಡು ಬಂದಿರುವ ಈ ಆರ್ಥಿಕ ವೃದ್ಧಿ ದರ ಕುಸಿತದ ಕಳವಳಕಾರಿ ಬೆಳವಣಿಗೆ ಹಿನ್ನೆಲೆಯಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಬಂಡವಾಳ ಹೂಡಿಕೆಯ ನೀತಿಯಲ್ಲಿ ಸಾಕಷ್ಟು ಬದಲಾವಣೆ ಅಳವಡಿಸಿಕೊಳ್ಳಬೇಕಿದೆ. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ರಾಜ್ಯಗಳಿಗೆ ಸಂಪನ್ಮೂಲದ ಕೊರತೆಯೇನೂ ಇಲ್ಲ. ಆದರೆ, ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಕಾಯಕಲ್ಪ ಮಾಡುವ ಮೂಲಕ ಮೂಲ ಸೌಕರ್ಯ ಕೊರತೆ ನಿವಾರಿಸಲು ಸಾಧ್ಯ. ಜೊತೆಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಿದರೆ ಹೊಸ ಹೊಸ ಮತ್ತು ಹೆಚ್ಚಿನ ಸಂಖ್ಯೆಯ ಉದ್ಯಮಗಳನ್ನೂ ಆಕರ್ಷಿಸಬಹುದು. ಹೆಚ್ಚುತ್ತಿರುವ ಕಾರ್ಮಿಕರ ವೆಚ್ಚ, ಮೂಲಸೌಕರ್ಯ ಕೊರತೆ ನಿವಾರಿಸಲು ಆದ್ಯತೆ ನೀಡಬೇಕಾಗಿದೆ. ದಕ್ಷಿಣ ರಾಜ್ಯಗಳು ಭವಿಷ್ಯದ ಪ್ರಗತಿಪಥದಲ್ಲಿ ಮುನ್ನಡೆಯಲು ವಿದ್ಯುತ್ ಉತ್ಪಾದನೆ, ರಸ್ತೆ, ಬಂದರು ಮತ್ತು ಗೃಹ ನಿರ್ಮಾಣ ಮತ್ತಿತರ ರಂಗಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಲು ಕ್ರಮ ಕೈಗೊಂಡರೆ ಮಾತ್ರ ಅಭಿವೃದ್ಧಿಯ ಚಿತ್ರಣ ಬದಲಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.