ಸಂಸದರ ಓಲೈಕೆಯಷ್ಟೆ ಉದ್ದೇಶ ಇತ್ತೀಚೆಗಷ್ಟೇ ಸಂಬಳ ಭತ್ಯೆಗಳನ್ನು ಹೆಚ್ಚಿಸಿಕೊಂಡ ಸಂಸದರಿಗೆ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಇನ್ನೊಂದು ಉಡುಗೊರೆ ನೀಡಿದ್ದಾರೆ. ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಎರಡು ಕೋಟಿ ರೂಪಾಯಿಗಳಿಂದ ಐದು ಕೋಟಿ ರೂಪಾಯಿಗೆ ಹೆಚ್ಚಿಸಿದ್ದಾರೆ. ಈ ನಿಧಿಗಾಗಿ ಇಲ್ಲಿಯವರೆಗೆ ಖರ್ಚಾಗುತ್ತಿದ್ದ ಹಣ 1590 ಕೋಟಿ ರೂಪಾಯಿ. ಈ ಹೆಚ್ಚಳದಿಂದ ಬೊಕ್ಕಸದ ಮೇಲೆ ಬೀಳಲಿರುವ ಹೆಚ್ಚುವರಿ ಹೊರೆ 2385 ಕೋಟಿ ರೂಪಾಯಿ. ಇದು ನೇರವಾಗಿ ಸಂಸದರ ಜೇಬಿಗೆ ಹೋಗುವ ದುಡ್ಡಲ್ಲ. ನಿಧಿಯ ವಿನಿಯೋಗವಾಗಬೇಕಾಗಿರುವುದು ಅಭಿವೃದ್ದಿ ಕೆಲಸಗಳಿಗೆ ಎನ್ನುವುದು ನಿಜ. ಆದರೆ ಅನುಷ್ಠಾನದಲ್ಲಿ ನಡೆಯುತ್ತಿರುವುದೇನು? ಮಾರ್ಗಸೂಚಿಗಳ ಉಲ್ಲಂಘನೆ, ಕಳಪೆ ಕಾಮಗಾರಿ, ರಾಜಕೀಯ ಪಕ್ಷಪಾತ, ಸಂಸದರಿಂದಲೇ ಬೇನಾಮಿ ಗುತ್ತಿಗೆ ಮೊದಲಾದ ದೂರುಗಳು, ಯೋಜನೆ ಜಾರಿಗೆ ಬಂದ ದಿನದಿಂದಲೇ ಕೇಳಿಬರುತ್ತಿವೆ. ಪ್ರತಿವರ್ಷ ಮಹಾಲೇಖಪಾಲರ ವರದಿಯಲ್ಲಿ ಇಂತಹ ದೂರುಗಳ ಪ್ರಸ್ತಾಪವಿದೆ. ಕಾಮಗಾರಿಯ ಗುತ್ತಿಗೆ ನೀಡಲು ಹನ್ನೊಂದು ಸಂಸದರು ಕಮಿಷನ್ ಪಡೆಯುತ್ತಿರುವುದನ್ನು ಒಂದು ಟಿವಿ ಚಾನೆಲ್ ಕುಟುಕು ಕಾರ್ಯಾಚರಣೆಯ ಮೂಲಕ ಬಯಲುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರಾಭಿವೃದ್ಧಿ ನಿಧಿಯನ್ನೇ ರದ್ದುಗೊಳಿಸಬೇಕೆಂಬ ಕೂಗು ಕೇಳಿಬಂದಿತ್ತು. ಈ ನಡುವೆ ಈ ನಿಧಿಯ ಮೊತ್ತವನ್ನು ಐದು ಕೋಟಿ ರೂಪಾಯಿಗೆ ಹೆಚ್ಚಿಸಬೇಕೆಂಬ ಸರ್ಕಾರದ ಪ್ರಸ್ತಾವವನ್ನು ಯೋಜನಾ ಆಯೋಗ ಕಳೆದ ವರ್ಷ ತಿರಸ್ಕರಿಸಿತ್ತು. ಇವುಗಳನ್ನು ಗಣನೆಗೆ ತೆಗೆದುಕೊಳ್ಳದ ಹಣಕಾಸು ಸಚಿವರು ಬಹುಸಂಖ್ಯೆಯ ಸಂಸದರ ಬೇಡಿಕೆಯನ್ನು ಈಡೇರಿಸಿದ್ದಾರೆ. ಮೂಲತಃ ಈ ನಿಧಿ ಸ್ಥಾಪನೆಯ ಹಿಂದೆ ಯಾವುದೇ ಜನಕಲ್ಯಾಣದ ಉದ್ದೇಶ ಇರಲಿಲ್ಲ. ಅಲ್ಪಮತದ ಸರ್ಕಾರವನ್ನು ಉಳಿಸಲು ಹೆಣಗಾಡುತ್ತಿದ್ದ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಸಂಸದರನ್ನು ಓಲೈಸಲು ಈ ನಿಧಿಯನ್ನು ಸ್ಥಾಪಿಸಿದ್ದರು. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎನ್ನುವಂತೆ ಈಗ ಹಲವಾರು ರಾಜ್ಯಗಳು ವಿಧಾನಮಂಡಲದ ಸದಸ್ಯರಿಗೂ ಇಂತಹ ನಿಧಿಯನ್ನು ಸ್ಥಾಪಿಸಿವೆ. ಸಾರ್ವಜನಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ಚರ್ಚೆಯ ಮೂಲಕ ಅರ್ಥಪೂರ್ಣ ಶಾಸನಗಳ ರಚನೆಗೆ ನೆರವಾಗುವುದು ಸಂಸದರು ಮತ್ತು ಶಾಸಕರ ಮುಖ್ಯ ಕರ್ತವ್ಯ. ಅಭಿವೃದ್ಧಿ ಕಾಮಗಾರಿಯ ಅನುಷ್ಠಾನದ ಹೊಣೆ ಕಾರ್ಯಾಂಗದ್ದು, ಅದರ ಮೇಲ್ವಿಚಾರಣೆಯಷ್ಟೇ ಶಾಸಕಾಂಗದ್ದು. ಇದು ಸಂವಿಧಾನದ ಆಶಯ. ಆದರೆ ಈ ಆಶಯಕ್ಕೆ ವಿರುದ್ಧವಾಗಿ ಕ್ಷೇತ್ರಾಭಿವೃದ್ಧಿ ನಿಧಿ ಸ್ಥಾಪನೆಗೊಂಡಿದೆ. ಇದರಿಂದಾಗಿ ಅನುಷ್ಠಾನದ ಮೇಲ್ವಿಚಾರಣೆ ನಡೆಸಬೇಕಾದ ಜನಪ್ರತಿನಿಧಿಗಳು ಅನುಷ್ಠಾನದ ಹೊಣೆ ಹೊತ್ತಂತಾಗಿದೆ. ಜನಪ್ರತಿನಿಧಿಗಳು ಸ್ವಾಭಿಮಾನಿಗಳು ಮತ್ತು ಕರ್ತವ್ಯನಿಷ್ಠರಾಗಿದ್ದರೆ ತಮ್ಮ ಸ್ಥಾನದ ಗೌರವಕ್ಕೆ ಧಕ್ಕೆ ಉಂಟುಮಾಡುವಂತಹ ಇಂತಹ ಕಾರ್ಯಕ್ರಮವನ್ನು ಸ್ವಇಚ್ಛೆಯಿಂದ ತಿರಸ್ಕರಿಸಬೇಕಿತ್ತು. ಆದರೆ ಇಂದಿನ ಜನಪ್ರತಿನಿಧಿಗಳಿಂದ ಇಂತಹ ಕರ್ತವ್ಯನಿಷ್ಠ ಮನೋಭಾವವನ್ನು ನಿರೀಕ್ಷಿಸಲು ಸಾಧ್ಯ ಇಲ್ಲ. ಈ ಪರಿಸ್ಥಿತಿಯಲ್ಲಿ ಸರ್ಕಾರವೇ ಕ್ಷೇತ್ರಾಭಿವೃದ್ಧಿ ನಿಧಿಯನ್ನು ರದ್ದುಪಡಿಸಿ ಆ ಹಣವನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೀಡುವ ದಿಟ್ಟತನ ತೋರಿಸಬೇಕಾಗಿತ್ತು. ಆದರೆ ಸರ್ಕಾರವೇ ಸಂಸದರ ಓಲೈಕೆಗೆ ಹೊರಟಿದೆ. ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸುವುದಷ್ಟೇ ಈಗ ಉಳಿದಿರುವ ದಾರಿ. ಈ ವಿಷಯದಲ್ಲಿಯಾದರೂ ಕೇಂದ್ರ ಸರ್ಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಹಣದ ಸದುಪಯೋಗವನ್ನು ಖಚಿತಪಡಿಸಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.