ಮನೆಗೆಲಸದವರಿಗೆ ರಕ್ಷಣೆ ಲೋಕಸಭೆಯಲ್ಲಿ ಹಲವು ತಿಂಗಳ ಹಿಂದೆಯೇ ಮಂಡಿಸಲಾಗಿರುವ ಕೆಲಸ ಮಾಡುವ ಸ್ಥಳಗಳಲ್ಲಿ, ಅಂದರೆ ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ ನಡೆಯುವ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ನಿಷೇಧ ಮಸೂದೆ ಇನ್ನೂ ನೆನೆಗುದಿಗೆ ಬಿದ್ದಿದೆ. ಚಳಿಗಾಲದ ಅಧಿವೇಶನದಲ್ಲಿ ಕಲಾಪ ನಡೆಯದ ಕಾರಣ ಅದು ಚರ್ಚೆಗೇ ಬರಲಾಗಲಿಲ್ಲ. ದುಡಿಯುವ ಮಹಿಳೆಯರ ರಕ್ಷಣೆಯ ಹಿನ್ನೆಲೆಯಲ್ಲಿ ಮಹತ್ವದಾದ ಈ ಮಸೂದೆಯ ವ್ಯಾಪ್ತಿಗೆ ಮನೆಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನೂ ಸೇರಿಸಬೇಕೆಂದು ಸಂಸತ್‌ನ ಹಲವು ಸದಸ್ಯೆಯರು ಮಾಡಿರುವ ಒತ್ತಾಯ ಅರ್ಥಪೂರ್ಣವಾಗಿದೆ. ಮನೆಗೆಲಸ ಮಾಡುವವರ ಸಂಖ್ಯೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಿದೆ. ಜೊತೆಗೆ ಅಪ್ರಾಪ್ತ ಬಾಲಕಿಯರನ್ನೂ ಮನೆಗೆಲಸಕ್ಕಾಗಿ ದುಡಿಸಿಕೊಳ್ಳುವ ಪ್ರವೃತ್ತಿ ನಿಂತಿಲ್ಲ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಆಗುವ ಕಿರುಕುಳಕ್ಕಿಂತ ಮನೆಗೆಲಸದವರ ಮೇಲೆ ಲೈಂಗಿಕ ಮತ್ತು ಇತರೆ ಬಗೆಯ ಕಿರುಕುಳ ನಡೆಯುತ್ತಿರುವುದು ಇತ್ತೀಚೆಗಷ್ಟೇ ಬೆಳಕಿಗೆ ಬರುತ್ತಿವೆ. ಕಡುಬಡತನದಿಂದಾಗಿ ಮನೆಗಳಲ್ಲಿ ದುಡಿಯುವ ಅಮಾಯಕ ಮಹಿಳೆಯರ ಮೇಲೆ ಪುರುಷರಿಂದ ಲೈಂಗಿಕ ದೌರ್ಜನ್ಯ ನಡೆದರೆ, ಮನೆಯ ಒಡತಿಯರಿಂದ ಕಳ್ಳತನದ ಆರೋಪ ಮತ್ತು ಇತರೆ ಕಾರಣಗಳಿಗಾಗಿ ದೈಹಿಕವಾಗಿ ಹಿಂಸಾಚಾರ ನಡೆದಿದೆ. ಈ ಅಸಹಾಯಕ ಮಹಿಳೆಯರು ಇಂತಹ ದೌರ್ಜನ್ಯವನ್ನೆಲ್ಲ ಸಹಿಸಿಕೊಂಡು ಹೋಗುತ್ತಿದ್ದಾರೆ. ಈ ಬಡ ಮಹಿಳೆಯರ ರಕ್ಷಣೆಗೆ ಈಗಲಾದರೂ ಕಾನೂನು ನೆರವಿಗೆ ಬರಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರನ್ನು ಲೈಂಗಿಕ ಚಟುವಟಿಕೆಗಾಗಿ ಬಳಸಿಕೊಳ್ಳುವುದಕ್ಕಾಗಿ ಹಲವು ಬಗೆಯ ಆಮಿಷ ತೋರುವುದು ಇಲ್ಲವೇ ಕಿರುಕುಳ ನೀಡುವ ಪ್ರವೃತ್ತಿ ಹೆಚ್ಚುತ್ತಲೇ ಇದೆ. ಹಲವು ಪ್ರಕರಣಗಳಲ್ಲಿ ಒಲ್ಲದ ಮನಸ್ಸಿನಿಂದ ಮಹಿಳೆ ಪುರುಷ ಸಿಬ್ಬಂದಿಯ ಅಥವಾ ಮೇಲಧಿಕಾರಿಯ ಒತ್ತಡಕ್ಕೆ ಬಲಿಯಾಗುವುದೇ ಹೆಚ್ಚು. ಅತಿಯಾದ ಕಿರುಕುಳವನ್ನು ಸಹಿಸಿಕೊಳ್ಳಲಾಗದೆ ಕೆಲವು ಮಹಿಳೆಯರು ಧೈರ್ಯದಿಂದ ತಮಗಾದ ಅನ್ಯಾಯವನ್ನು ಬಯಲು ಮಾಡಿ ನ್ಯಾಯಕ್ಕಾಗಿ ಹೋರಾಟ ನಡೆಸಿದ ಉದಾಹರಣೆಗಳೂ ಇವೆ. ಇಂತಹ ಒಂದು ಪ್ರಕರಣ ವಿಶಾಖ ಸ್ವಯಂಸೇವಾ ಸಂಸ್ಥೆ ಮತ್ತು ರಾಜಸ್ತಾನ ಸರ್ಕಾರದ ನಡುವೆ ಹದಿನೈದು ವರ್ಷದ ಹಿಂದೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದಾಗ ಕೆಲಸದ ಜಾಗಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ನಿಷೇಧಕ್ಕಾಗಿ ಕಾನೂನೊಂದನ್ನು ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿತು. ಆದರೆ 2000 ಮತ್ತು 2005ರಲ್ಲಿ ಮಸೂದೆಯೊಂದು ಮಂಡನೆಯಾದರೂ, ಅದು ಸಂಸತ್ತಿನಲ್ಲಿ ಅನುಮೋದನೆ ಪಡೆಯಲಾಗದೆ ವ್ಯರ್ಥವಾಯಿತು. ಮತ್ತೆ ಇದೇ ಮಸೂದೆ ಹೊಸ ರೂಪ ಪಡೆದು ಲೋಕಸಭೆಯಲ್ಲಿ ಇತ್ತೀಚೆಗೆ ಮಂಡನೆ ಆಗಿದೆ. ಈ ಮಸೂದೆಯಲ್ಲಿ ಮನೆಗೆಲಸದ ಮಹಿಳೆಯರನ್ನು ಸೇರಿಸಬೇಕೆನ್ನುವ ಒತ್ತಡ ನಿಜಕ್ಕೂ ಸ್ವಾಗತಾರ್ಹ. ಈ ಮಸೂದೆ ಸಂಸತ್ತಿನ ಅನುಮೋದನೆ ಪಡೆಯುವ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಸರ್ಕಾರ ಮತ್ತು ಮಹಿಳಾ ಸದಸ್ಯೆಯರು ಹಿಂದೆ ಬೀಳಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.